ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಲಿ: ಜಪಾನಂದ ಸ್ವಾಮೀಜಿ

ಮಧುಗಿರಿ:

      ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಿರಲೆಂದು ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ತಿಳಿಸಿದರು.

      ಗುರುವಾರದಂದು ಪಟ್ಟಣದಲ್ಲಿರುವ ಕುಂಚಿಟಿಗ ಒಕ್ಕಲಿಗರ ಸಮುದಾಯ ಭವನದ ಅವರಣದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಹಕಾರದೊಂದಿಗೆ ಮಧುಗಿರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಸುಮಾರು 712 ಅಡುಗೆ ಸಿಬ್ಬಂದಿಯವರಿಗೆ ದವಸ ಧಾನ್ಯ ಹಾಗೂ ಅಡುಗೆ ಎಣ್ಣೆಯ ಕಿಟ್‍ನ್ನು ವಿತರಣಾ ಸಮರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.

      ಕೊರೊನಾದಿಂದಾಗಿ ಇಡೀ ದೇಶವೇ ಒಗ್ಗೂಡಿದ್ದು, ಅದೇ ರೀತಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದಿಂದ ಭಾವೈಕ್ಯತೆ ಮೂಡಲು ನಾಂದಿ ಹಾಡಿದೆ ಎಂದರು. ಪ್ರತಿಯೊಬ್ಬ ನಾಗರಿಕನು ಸರ್ಕಾರ ಮತ್ತು ಸರ್ಕಾರಿ ನೌಕರರನ್ನು ದೂಷಿಸುವುದು ತರವಲ್ಲ, ಪ್ರಸ್ತುತ ದೇಶ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಸೇನಾನಿಯಂತೆ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು ,ಅವರೂ ಸಹ ಮನುಷ್ಯರೆಂದು ಜನರು ಭಾವಿಸಬೇಕಾಗಿದೆ, “ಬಿಂದುವಿನಲ್ಲಿ ಸಿಂಧುವನ್ನು ಹುಡುಕಬೇಕೇ ಹೊರತು, ಸಿಂಧುವಿನಲ್ಲಿ ಬಿಂದು ಹುಡುಕುವ ಕೆಲಸವಾಗ ಬಾರದೆಂದರು’.

      ದಕ್ಷ ಅಧಿಕಾರಿಗಳು ದೇಶದ ಅಪರಂಜಿಗಳು ಮತ್ತು ಅನನ್ಯ ರತ್ನಗಳು ಅಂಥವರನ್ನು ಸರ್ಕಾರ ತಡವಾಗಿ ಗುರುತಿಸುತ್ತದೆ. ಕರೋನಾ ಬಗ್ಗೆ ಯಾರೂ ಭಯಪಡಬೇಡಿ, ಧೈರ್ಯವಾಗಿರಿ ದೇವತಾ ಪ್ರಾರ್ಥನೆ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹಾಗೂ ಸ್ವಯಂ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡದಾಗ ನಮ್ಮನ್ನು ಬಿಟ್ಟು ಹೋಗುತ್ತದೆ ಎಂದರು.

      ಮಧುಗಿರಿ ಉಪ ವಿಭಾಗದಲ್ಲಿ ಉಪವಿಭಾಧಿಕಾರಿ, ಡಿವೈಎಸ್ಪಿ, ಡಿಡಿಪಿಐ ,ತಹಸೀಲ್ದಾರ್, ವೈದ್ಯರು ,ಶಿಕ್ಷಕರು ,ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಕರೋನಾ ವಾರಿಯರ್ಸ್ ಗಳಾಗಿ ಕರೋನಾ ಹರಡದಂತೆ ಟೊಂಕಕಟ್ಟಿ ಹೋರಾಡುತ್ತಿದ್ದಾರೆ. ಮಧುಗಿರಿಯಲ್ಲಿರುವ ಕರೋನಾ ಕೇರ್ ಸೆಂಟರ್ ರೆಸಾರ್ಟ್ ಮಾದರಿಯಂತಿರುವುದೆ ಇದಕ್ಕೆಲ್ಲ ಸಾಕ್ಷಿಯಾಗಿದೆ ಎಂದರು. ವೈದ್ಯರು ಮತ್ತು ಶಿಕ್ಷಕರು ದೇಶದ ಆಸ್ತಿಯಾಗಿದ್ದು ,ದೇಶದ ಪ್ರಗತಿಯನ್ನು ಷೇರುಪೇಟೆಯ ಮಾರುಕಟ್ಟೆಯಿಂದ ಅಳೆಯಲು ಸಾಧ್ಯವಿಲ್ಲ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ದೇಶವನ್ನು ಸದೃಢರನ್ನಾಗಿಸುವ ಶಕ್ತಿ ಅಡಗಿದೆ ಎಂದರು.

      ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರ ಬದುಕು ಅತಂತ್ರ ಸ್ಥಿತಿ ತಲುಪಿದ್ದು ಅಂಥಹವರಿಗೆ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ ಎಂದರು.

      ಅಡುಗೆ ಸಹಾಯಕರು ಶಾಲೆಯಲ್ಲಿನ ಮಕ್ಕಳನ್ನು ತಮ್ಮ ಮಕ್ಕಳಂತೆ ಉಪಚರಿಸಿ ದಾಸೋಹ ನೀಡುತ್ತಿದ್ದು ಇಂದು ಅವರ ಬದುಕು ಸಂಕಷ್ಟದಲ್ಲಿರುವುದನ್ನು ಅರಿತು ತಾಲ್ಲೂಕಿನ 712 ಅಕ್ಷರ ದಾಸೋಹ ಸಿಬ್ಬಂದಿಗೆ ಇನ್ಫೋಸಿಸ್ ನೆರವಿನಿಂದ ದಿನಸಿ ಕಿಟ್ಟು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿನ ಸಿಬ್ಬಂದಿಗೂ ವಿತರಿಸಲಾಗುವುದೆಂದರು.

       ಡಿಡಿಪಿಐ ಎಂ.ರೇವಣಸಿದ್ದಪ್ಪ ಮಾತನಾಡಿ, ರಾಮಕೃಷ್ಣಾಶ್ರಮದಿಂದ ಪಾವಗಡ ತಾಲೂಕಿನಲ್ಲಿರುವ ಐದು ಸಾವಿರ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಹಾಲಿನ ಪೌಡರ್, ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ತಲಾ ಎರಡು ಮಾಸ್ಕ್ ಗಳಂತೆ 3600 ಮಾಸ್ಕ್ ಗಳ ವಿತರಣೆ, ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಐಎಸ್‍ಐ ಮಾರ್ಕಿನ ಕುಡಿಯುವ ನೀರು ವಿತರಣೆ ಮಾಡಿದ್ದನ್ನು ಶ್ಲಾಘಿಸಿದರು.

      ಡಿವೈಎಸ್ಪಿ ಎಂ. ಪ್ರವೀಣ್ ಮಾತನಾಡಿ, ಸ್ವಾಮಿಗಳ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಪ್ರತಿನಿತ್ಯ ಮಾಧ್ಯಮದ ಮೂಲಕ ತಿಳಿಯಬಹುದಾಗಿದೆ. ಸರ್ಕಾರ ಮತ್ತು ಜನರ ನಡುವೆ ಮಠಮಾನ್ಯಗಳು, ಮಂದಿರಗಳು ,ಆಶ್ರಮಗಳು ಕೊಂಡಿಯಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಸರ್ಕಾರ ಕೆಲಸ ಸರಿಯಾಗಿ ಮಾಡದಿದ್ದಾಗ ಎಚ್ಚರಿಸುವುದನ್ನು ಮರೆತಿಲ್ಲ, ತಮ್ಮ ವ್ಯಾಪ್ತಿಯ ಕೊರಟಗೆರೆ ತಾಲ್ಲೂಕಿನಲ್ಲಿ ಇರುವ ಅಕ್ಷರದಾಸೋಹ ಸಿಬ್ಬಂದಿಗೆ ದಿನಸಿ ಕಿಟ್ ವಿಚಾರಣೆ ಮಾಡುವಂತೆ ಮನವಿ ಮಾಡಿದರು .

      ತಹಶಿಲ್ದಾರರಾದ ಡಾ.ಜಿ.ವಿಶ್ವನಾಥ್ ಪ್ರಸ್ತಾವಿಕ ನುಡಿಗಳಲ್ಲಿ ಮಧುಗಿರಿಯಲ್ಲೂ ಶ್ರೀ ರಾಮಕೃಷ್ಣ ಸೇವಾಶ್ರಮದ ಕೇಂದ್ರ ಪ್ರಾರಂಬಿಸುವಂತೆ ಮನವಿ ಮಾಡಿದರು.

ಕ್ಷೇತ್ರಶಿಕ್ಷಣಾದಿಕಾರಿ ರಂಗಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಎಚ್. ವೆಂಕಟೇಶಯ್ಯ , ಕಾರ್ಯದರ್ಶಿ ನಟರಾಜು,ಬಿಆರ್ ಸಿ ಅನಂದ್,ಅಕ್ಷರ ದಾಸೋಹ ದ ಅಧಿಕಾರಿಗಳಾದ ಪದ್ಮಾವತಮ್ಮ,ಕೆ.ಎನ್.ಹನುಮಂತರಾಯ,ಅಧ್ಯಕ್ಷೆ ಮಂಗಳಮ್ಮ,ಪಾವಗಡದಿಂದ ಅಗಮಿಸಿದ್ದ ನಿರಂಜನ್,ಎ.ಗೋಪಿ,ನಾಗೇಶ್,ಪಿಇಒ ಬಸವರಾಜು,ಪುಟ್ಟಸ್ವಾಮಿ,ಮಧುಗಿರಿ ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ಎಚ್.ಆರ್. ಶಶಿಕುಮಾರ್ ಕೆಂಪೆಗೌಡ,ಕೆ.ಎಸ್. ಉಮಾಶಂಕರ್, ಈ .ಶ್ರೀಧರ್, ಹರಿಪ್ರಸಾದ್ ,ಟಿ.ಡಿ.ನರಸಿಂಹ ಮೂರ್ತಿ, ಎಚ್.ಎಸ್. ಶಿವಕುಮಾರ್ ,ಇಸಿಒಗಳಾದ ಜಯರಾಮ್ ,ಅಶ್ವತ್ ನಾರಾಯಣ್ ಹಾಜರಿದ್ದರು.

 

(Visited 9 times, 1 visits today)

Related posts