ತುಮಕೂರು : ಬಿಟಿ ಕ್ಷೇತ್ರಕ್ಕೆ ಹೇಳಿಮಾಡಿಸಿದ ವಾತಾವರಣವಿದೆ : ಡಿಸಿಎಂ

ತುಮಕೂರು:

      ಜಿಲ್ಲೆಯಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಗ್ರಾಮೀಣಾಭಿವೃದ್ಧಿ ಕೇಂದ್ರದ ಅಡಿಯಲ್ಲಿ ಸ್ಥಾಪಿಸಲಾಗಿರುವ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಜೈವಿಕವನವನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉಧ್ಘಾಟನೆ ನೆರವೇರಿಸಿದರು.

      ಪಂಡಿತನಹಳ್ಳಿಯ ಬಸದಿ ಬೆಟ್ಟದ ಹತ್ತಿರ ಉಧ್ಘಾಟನೆ ಮಾಡಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಶ್ರೀಮಂತವಾಗಿರುವ ತುಮಕೂರು ಜಿಲ್ಲೆಯಲ್ಲಿ ಬಿಟಿ ಕ್ಷೇತ್ರಕ್ಕೆ ಹೇಳಿಮಾಡಿಸಿದ ವಾತಾವರಣವಿದೆ. ಇದೀಗ ಲೋಕಾರ್ಪಣೆ ಆಗಿರುವ ಜೈವಿಕವನವೂ ಉತ್ತಮ ಪ್ರಯತ್ನವಾಗಿದೆ ಎಂದರು.

       ತುಮಕೂರು ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ನಗರವಾಗಿದೆ. ಆದರೆ, ನಗರದ ಸುತ್ತಮುತ್ತಲಿನ ಪ್ರದೇಶಗಳು ಹಿಂದುಳಿದಿವೆ. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಈ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ಸರಕಾರ ಮಾಡಲಿದೆ. ಅಭಿವೃದ್ಧಿಯಲ್ಲಿ ಸುಸ್ಥಿರತೆ ಮತ್ತು ಕಮರ್ಷಿಯಲ್ ವಯಬಲಿಟಿ ಇಲ್ಲವಾದರೆ ಆ ಪ್ರಗತಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅವರು ಹೇಳಿದರು.

      ಶೈಕ್ಷಣಿಕವಾಗಿ ಬಹಳಷ್ಟು ಮುಂದುವೆರದಿರುವ ತುಮಕೂರಿನಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲಕ್ಕೇನೂ ಕೊರತೆ ಇಲ್ಲ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆಯಾಗುವುದಿಲ್ಲ. ಉತ್ತಮ ಹಾಗೂ ರಚನಾತ್ಮಕ ಯೋಜನೆಯನ್ನು ರೂಪಿಸಿ ಅದನ್ನು ಸಮರ್ಥವಾಗಿ ಜಾರಿ ಮಾಡುವ ಇಚ್ಚಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಸರಕಾರಕ್ಕಿದೆ. ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

      ಕೋವಿಡ್-19 ನಮ್ಮೆಲ್ಲರ ಜೀವನಕ್ರಮವನ್ನೇ ಬದಲಿಸಿದೆ. ಜಗತ್ತೇ ಒಂದು ಹಳ್ಳಿಯಂತೆ ಆಗಿದೆ. ಟೆಕ್ನಾಲಜಿ ನಮ್ಮೆಲ್ಲರನ್ನು ಹತ್ತಿರ ಮಾಡಿದೆ. ಈಗ ಯಾವುದೂ ಹತ್ತಿರವೂ ಅಲ್ಲ, ದೂರವೂ ಅಲ್ಲ. ಜರ್ಮನಿಯಂಥ ದೇಶದಲ್ಲಿ ಕುಗ್ರಾಮದಂಥ ಪ್ರದೇಶದಲ್ಲೂ ಅದ್ಭುತವಾದ ಪ್ರಗತಿಯನ್ನು ನೋಡಬಹುದು. ಅಂತಹ ಸ್ಥಿತಿಯನ್ನು ನಮ್ಮ ದೇಶದಲ್ಲೂ ನೋಡಬೇಕಾಗಿದೆ ಎಂದು ಅವರು ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಮಾತನಾಡಿ, ತುಮಕೂರು ಜಿಲ್ಲೆಯು ಬೆಂಗಳೂರು ನಗರಕ್ಕೆ ಸಮೀಪವಿರುವುದರಿಂದ ಜಿಲ್ಲೆಗೆ ಸೈನ್ಸ್ ಲ್ಯಾಬ್, ಟೆಕ್ನಿಕಲ್ ಪಾರ್ಕ್, ಕಯರ್ ಪಾರ್ಕ್‍ಗಳನ್ನು ನಿರ್ಮಾಣ ಮಾಡಿಕೊಡಲು ಮನವಿ ಸಲ್ಲಿಸಿದರಲ್ಲದೇ ಜಿಲ್ಲೆಯಲ್ಲಿ ಹೆಚ್ಚಾಗಿ ತೆಂಗು ಬೆಳೆಯುತ್ತಿದ್ದು, ತೋಟಗಾರಿಕಾ ಮತ್ತು ಕೃಷಿ ಇಲಾಖೆ ವತಿಯಿಂದ ಕಡಿಮೆ ವೆಚ್ಚದಲ್ಲಿ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ಕೊಬ್ಬರಿ ಎಣ್ಣೆ ತಯಾರಿಸಿದರೆ ಅದಕ್ಕೆ ಒಂದು ಬ್ರಾಂಡ್ ನೀಡಿ ಒಂದೆಡೆ ಮಾರಾಟ ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. ಜೈವಿಕ ಪಾರ್ಕ್‍ನಲ್ಲಿ ಹಣ್ಣು-ಹಂಪಲು ಬಿಡುವ ಮರಗಳನ್ನು ಬೆಳೆಸಬೇಕು. ಗುಂಡಿಗಳನ್ನು ತೆಗೆದು ನೀರು ಶೇಖರಣೆ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

      ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಆರ್. ದಿನೇಶ್, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ಸೇರಿದಂತೆ ಮತ್ತಿತರು ಹಾಜರಿದ್ದರು.

      ಬೆಂಗಳೂರು ಗಲಭೆ ಶಾಂತಿ ಕಾಪಾಡಲು ಡಿಸಿಎಂ ಅಶ್ವತ್ಥನಾರಾಯಣ ಮನವಿ: ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಹಾಗೂ ಕಾವಲ್’ಭೈರಸಂದ್ರದಲ್ಲಿ ಉಂಟಾಗಿರುವ ಗಲಭೆ ಅತ್ಯಂತ ದುರದೃಷ್ಟಕರ ಎಂದಿರುವ ಅವರು ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು.

       ತುಮಕೂರು ತಾಲೂಕಿನ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಅವರ ಜೈವಿಕವನ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವುದೇ ಧರ್ಮ ಅಥವಾ ಧರ್ಮಗುರುವಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವುದು ಸರಿಯಲ್ಲ. ಜಾಲತಾಣಗಳಲ್ಲಿ ಏನಾದರೂ ಬರೆಯುವ ಮುನ್ನ ಸಾಕಷ್ಟು ಸಂಯಮ ಮತ್ತು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

      ಪೋಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇಡೀ ಘಟನೆಯ ತನಿಖೆ ಮಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಜನರು ತಾಳ್ಮೆ, ಸಹನೆಯಿಂದ ವರ್ತಿಸಬೇಕು. ಸೌಹಾರ್ದತೆಯನ್ನು ಕಾಪಾಡಬೇಕು. ದೊಂಭಿ, ಗಲಭೆಯಲ್ಲಿ ತೊಡಗುವುದು ಸರಿಯಲ್ಲ ಎಂದು ಅವರು ತಿಳಿಸಿದರು.

(Visited 2 times, 1 visits today)

Related posts