‘ಹಳೆ ಕಾಮಗಾರಿ ಪೂರ್ಣಗೊಳಿಸಿದ ಬಳಿಕವೇ ಹೊಸ ಕಾಮಗಾರಿ ಕೈಗೊಳ್ಳಿ’-ಸಚಿವ ಜೆ.ಸಿ.ಎಂ

ತುಮಕೂರು:

      ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಿದ ಬಳಿಕ ಹೊಸ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ವೇಗ ನೀಡಿ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಈಗ ಕೈಗೊಂಡಿರುವ ರಸ್ತೆ ಕಾಮಗಾರಿಗಳಿಂದ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸೈನೇಜ್ ಬೋರ್ಡ್‍ಗಳನ್ನು ಅಳವಡಿಸಿ ಎಂದು ಅವರು ತಿಳಿಸಿದರು.

     ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಾಗ ಲಭ್ಯವಿರುವ ಜಾಗ ಆಧಾರದ ಮೇಲೆ ರಸ್ತೆ ಮತ್ತು ಪುಟ್‍ಪಾತ್‍ನ್ನು ನಿರ್ಮಾಣ ಮಾಡಬೇಕು. ನಗರದಲ್ಲಿ ಏಕಕಾಲಕ್ಕೆ ರಸ್ತೆಗಳನ್ನು ಅಗೆದು ಬಿಟ್ಟರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, ರಸ್ತೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ನಿರ್ದೇಶನ ನೀಡಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರದಲ್ಲಿ ಕೈಗೊಂಡಿರುವ ಪ್ರತಿ ಕಾಮಗಾರಿಗಳ ಪ್ರಗತಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

      ರಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಿರುವ ತೊಡಕುಗಳನ್ನು ಆದಷ್ಟು ಬೇಗ ನಿವಾರಣೆ ಮಾಡಿಕೊಂಡು, ವಿದ್ಯುತ್ ಕಂಬಗಳ ಸ್ಥಳಾಂತರ/ ಅಳವಡಿಕೆ, ರಸ್ತೆ ವಿಭಜಕ ನಿರ್ಮಾಣ, ಮತ್ತಿತರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿ ಇಂಜಿನಿಯರ್ ಹಾಗೂ ಬೆಸ್ಕಾಂ ಎಸ್‍ಇ ಗೋವಿಂದಪ್ಪ ಅವರಿಗೆ ಸೂಚಿಸಿದರು.

      ತುಮಕೂರು ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ಕಾಮಗಾರಿಯನ್ನು ಆರಂಭಿಸಬೇಕು. ರಸ್ತೆಯ ಅರ್ಧಭಾಗ(ಶೇ.50ರಷ್ಟು)ದಲ್ಲಿ ರಸ್ತೆ ಕಾಮಗಾರಿ ಕೈಗೊಂಡು, ಉಳಿದರ್ಧ ಭಾಗದಲ್ಲಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಬೇಕು. ಎಂ.ಜಿ.ರಸ್ತೆಯಲ್ಲಿ ಹೆಚ್ಚಿನ ವಹಿವಾಟು ಇರುವುದರಿಂದ ಅಲ್ಲಿನ ವ್ಯಾಪಾರಿಗಳಿಗೂ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿಯ ಸಂದರ್ಭದಲ್ಲಿ ವಾಹನಗಳ ಪಾರ್ಕಿಂಗ್‍ಗೆ ಅವಕಾಶ ನೀಡಬೇಡಿ ಎಂದು ಅವರು ತಿಳಿಸಿದರು.

      ಇಂಟಿಗ್ರೇಟೆಡ್ ಕಂಟ್ರೋಲ್ ಅಂಡ್ ಕಮಾಂಡ್ ಸೆಂಟರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಎರಡ್ಮೂರು ತಿಂಗಳಾಗಿದೆ. ಇನ್ನೂ ಕಾಮಗಾರಿ ಆರಂಭಿಸಿಲ್ಲ. ಶೀಘ್ರ ಕಾಮಗಾರಿ ಆರಂಭಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದ ಸಚಿವರು, ಪಿಪಿ ಮಾಡೆಲ್‍ನಲ್ಲಿ ತುಮಕೂರು ನಗರದ ಸ್ವಿವೇಜ್ ನೀರನ್ನು ಪುನರ್‍ಬಳಕೆ ಮಾಡಲು ಇಸ್ರೇಲ್ ಸಂಸ್ಥೆ ಮುಂದೆ ಬಂದಿದೆ. ಇದನ್ನು ಬಳಸಿಕೊಂಡು 20-25 ಎಂಎಲ್‍ಡಿ ನೀರನ್ನು ಶುದ್ಧಿಕರಿಸಬಹುದಾಗಿದೆ ಎಂದರು.

     ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಜಿ.ಎಸ್. ಬಸವರಾಜು ಅವರು, ತುಮಕೂರು ನಗರ ಒಳಚರಂಡಿ ನೀರಿನಿಂದ ಮೆಳೆಕೋಟೆ ಸೇರಿದಂತೆ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇದರಿಂದ ತೊಂದರೆಯಾಗಿದೆ. ಈ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

      ಡಿಜಿಟಲ್ ನರ್ವ ಸಿಸ್ಟಮ್ ಕಾರ್ಯಕ್ರಮವನ್ನು ನಗರದಲ್ಲಿ ಇನ್ನಷ್ಟು ಪರಿಣಾಮಗಾರಿಯಾಗಿ ಬಳಸಿಕೊಳ್ಳಬೇಕು. ಟೆಲಿ ಮೆಡಿಸಿನ್ ಮಾದರಿಯಲ್ಲಿ ತಜ್ಞ ವೈದ್ಯರನ್ನು ಬಳಸಿಕೊಂಡು ನಗರದ ಜನರ ಆರೋಗ್ಯ ಸುಧಾರಣೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

     ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಹಾಗೂ ಅವರ ಅನುಭವಗಳನ್ನು ಅಧಿಕಾರಿಗಳು ಸ್ವೀಕರಿಸಬೇಕು. ಮೇಯರ್ ಹಾಗೂ ಕಾರ್ಪೋರೇಟರ್‍ಗಳಿಗೆ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಕಾಮಗಾರಿಗಳನ್ವಯ ಇಂಜಿನಿಯರ್‍ಗಳನ್ನು ನೇಮಿಸಬೇಕು. ಕಾಮಗಾರಿಗಳು ಸರಿಯಾಗಿ ಅನುಷ್ಠಾನ ಮಾಡದಿದ್ದರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಬಹುದು. ಆದರೆ ಕಾಮಗಾರಿಗಳನ್ನು ನಿಲ್ಲಿಸಿ ಎಂದು ಹೇಳುವಂತಿಲ್ಲ. ಇದರಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದರು.

      ನಗರ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ನಿರ್ಮಾಣದ ಬಗ್ಗೆ ಸ್ಮಾರ್ಟ್ ಸಿಟಿ ಹಾಗೂ ಕೆಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅಲ್ಲದೆ ನಗರದ ವಿನಾಯಕ ಮಾರುಕಟ್ಟೆಯ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.

      ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ರಸ್ತೆ ಕಾಮಗಾರಿಗಳನ್ನು ಕೈಗೊಂಡಿರುವ ಕಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ 100ಕ್ಕೂ ಹೆಚ್ಚು ಸೈನೇಜ್ ಬೋರ್ಡ್‍ಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಟೂಡಾ ಅಧ್ಯಕ್ಷ ನಾಗೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸ್ಮಾರ್ಟ್ ಸಿಟಿ ಎಂ.ಡಿ.ರಂಗಸ್ವಾಮಿ, ಪಾಲಿಕೆ ಆಯಕ್ತೆ ರೇಣುಕಾ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

(Visited 3 times, 1 visits today)

Related posts

Leave a Comment