ನಾಯಿ ಸಾಕು ಪ್ರಾಣಿಯಾದರೂ ಕಚ್ಚಿದಾಗ ನಿರ್ಲಕ್ಷ್ಯ ವಹಿಸುವುದು ಬೇಡ

ತುಮಕೂರು:

      ನಾಯಿ ಅತ್ಯಂತ ವಿಶ್ವಾಸಾರ್ಹ ಪ್ರಾಣಿ, ಹಾಗೆಂದ ಮಾತ್ರಕ್ಕೆ ಅದು ಕಡಿದಾಗ ನಿರ್ಲಕ್ಷ್ಯವಹಿಸುವುದು ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

      ನಗರದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ(ರಿ) ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ವಿರುದ್ಧ ಲಸಿಕೆ ಹಾಕುವುದು ಮತ್ತು ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡುತಿದ್ದ ಅವರು, ಸಾಕಿದ ನಾಯಿಗಳಿಗಿಂತಲೂ ಬೀದಿ ನಾಯಿಗಳಿಂದ ಹೆಚ್ಚು ತೊಂದರೆಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.

      ಮನುಷ್ಯ ತನ್ನ ಒತ್ತಡದ ಜೀವನವನ್ನು ಕೊಂಚ ಹಗುರಾಗಿಸಿಕೊಳ್ಳಲು ನಾಯಿಯಂತಹ ಸಾಕು ಪ್ರಾಣಿಗಳು ಸಹಕಾರಿ, ಜೊತೆಗೆ ಇವುಗಳಿಂದ ಮನುಷ್ಯನಿಗೆ ರಕ್ಷಣೆಯೂ ದೊರೆಯುತ್ತದೆ. ಕೋರೋನದಿಂದಾಗಿ ಹಲವಾರು ರೋಗಗಳು ಇಂದು ಮೆರತೇ ಹೋಗಿವೆ. ಆದರೂ ಇಂತಹ ಮಾರಾಣಾಂತಿಕ ರೋಗಗಳ ಬಗ್ಗೆ ಇಲಾಖೆ ಎಚ್ಚೆತ್ತುಕೊಂಡು ತನ್ನ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.ಇಲಾಖೆಯ ಈ ಕಾರ್ಯಕ್ರಮ ಸಾರ್ಥಕವಾಗಬೇಕೆಂದರೆ ಸಾಕು ಪ್ರಾಣಿಗಳ ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.

      ತುಮಕೂರು ಮೇಯರ್ ಶ್ರೀಮತಿ ಫರೀಧಾ ಬೇಗಂ ಮಾತನಾಡಿ,ಈ ರೋಗದ ಬಗ್ಗೆ ಜಾಗೃತಿ ಅಗತ್ಯ.ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ದ ಲಸಿಕೆ ಹಾಕಿಸುವ ಸಂಬಂಧ ಪಾಲಿಕೆ ವತಿಯಿಂದ ಎಲ್ಲಾ ರೀತಿಯ ನೆರವನ್ನು ಪಶುವೈದ್ಯಕೀಯ ಇಲಾಖೆಗೆ ನೀಡಲು ಸಿದ್ದ ಎಂದರು.

      ಡಿ.ಹೆಚ್.ಓ ಡಾ.ನಾಗೇಂದ್ರಪ್ಪ ಮಾತನಾಡಿ,ಪ್ರಾಣಿ ಜನ್ಯ ರೋಗಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಹಲವಾರು ಸವಲತ್ತುಗಳನ್ನು ಸರಕಾರ ನೀಡಿದೆ.ಹುಚ್ಚು ನಾಯಿ ಕಡಿತದ ವಿರುದ್ದ ಲಸಿಕೆ ಸಾಕಷ್ಟು ಲಭ್ಯವಿದ್ದು,ಒಂದು ವೇಳೆ ತಾಲೂಕು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ತಕ್ಷಣವೇ ಕೊಂಡುಕೊಳ್ಳಲು ಅಗತ್ಯ ಮಂಜೂರಾತಿಯನ್ನು ನೀಡಲಾಗಿದೆ.ನಮ್ಮ ಇಲಾಖೆಯ ಆರೋಗ್ಯ ಶಿಕ್ಷಣ ವಿಭಾಗದಿಂದ ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

      ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಕ್ರೋಟೇಶಪ್ಪ ಮಾತನಾಡಿ,ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಇಲ್ಲದಿದ್ದರೆ ರೋಗವನ್ನು ತಡೆಗಟ್ಟುವುದು ಕಷ್ಟ.ಯೋರೋಪಿನ್ನ್‍ನ ಹಲವು ರಾಷ್ಟ್ರಗಳು ಈಗಾಗಲೇ ರೇಬಿಸ್ ಮುಕ್ತ ರಾಷ್ಟ್ರವಾಗಿವೆ. ರೋಗದ ವಿರುದ್ಧ ಲಸಿಕೆಯನ್ನು ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ಇಲಾಖೆವತಿ ಯಿಂದ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಸಾಕು ಪ್ರಾಣಿಗಳ ಮಾಲೀಕರು ಪಡೆದುಕೊಳ್ಳಬೇಕೆಂದರು. 

      ರೇಬಿಸ್ ರೋಗದ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ನವೀನ್ ಜವಳಿ,ಒಂದು ನಾಯಿಗೆ,ಮನಷ್ಯನಿಗೆ ಈ ರೋಗವಿದೆ ಎಂದು ತಿಳಿಯಲು ಅವುಗಳ ಚಲನವಲನಗಳನ್ನು ಗಮನಿಸಿದರೆ ತಿಳಿಯುತ್ತಿದೆ. ಬಾಯಿಯಲ್ಲಿ ಜೊಲ್ಲು, ನಿರಂತರ ವಾಗಿ ಬೊಳಗಳುವುದು, ಬೆಳಕಿಗೆ ಬರಲು ಹೆದರುವುದು ಸೇರಿದಂತೆ,ಮಂಕು ಬಡಿದಂತೆ ಕೂರುವುದು ಇದರ ಲಕ್ಷಣಗಳು ನಿಯಮಿತಿವಾಗಿ ಲಸಿಕೆ ಹಾಕಿಸುವ ಮೂಲಕ ಇದನ್ನು ಹತೋಟಿಗೆ ತರಬಹುದು ಎಂದರು.

      ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪಸಾದ್,ಹುಚ್ಚು ನಾಯಿ ಕಡಿತಕ್ಕೆ ಔಷಧಿ ಕಂಡು ಹಿಡಿದ ವಿಜ್ಞಾನಿ ಲೂಯಿ ಪ್ಯಾಶ್ಚರ್ ಅವರ ಪುಣ್ಯತಿಥಿಯನ್ನು ವಿಶ್ವ ರೇಬಿಸ್ ದಿನವನ್ನಾಗಿ 2007 ರಿಂದಲೂ ಆಚರಿಸಲಾಗುತ್ತಿದೆ. ದೊಡ್ಡವರಿಗಿಂತ 5 ರಿಂದ 14 ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಿ ದ್ದಾರೆ.ಒಮ್ಮೆ ರೋಗ ಬಂದರೆ ಚಿಕಿತ್ಸೆ ಇಲ್ಲ.ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾಕು ಪ್ರಾಣಿಗಳಿಗೆ ಈ ಲಸಿಕೆ ಹಾಕಿಸಬೇಕು.ಈ ವರ್ಷದ ದೇಹವಾಕ್ಯವಾದ “ಎಲ್ಲರೂ ಒಗ್ಗೂಡಿ ಲಸಿಕೆ ಹಾಕಿಸುವ ಮೂಲಕ ರೋಗ ತಡೆಗಟ್ಟೋಣ” ಕಟ್ಟು ನಿಟ್ಟಾಗಿ ಪಾಲಿಸೊಣ ಎಂದರು.

      ಕಾರ್ಯಕ್ರಮದಲ್ಲಿ ಕುರಿ ಅಭಿವೃದ್ದಿ ಮಂಡಳಿಯ ಉಪನಿರ್ದೇಶಕ ಡಾ.ನಾಗಣ್ಣ, ಇನ್ನರ್ ವ್ಹೀಲ್ ಕ್ಲಬ್‍ನ ಪ್ರಿಯಾ ಪ್ರದೀಪ್, ಡಾ.ಲಕ್ಷ್ಮಿನಾರಾಯಣ್,ಪಶುವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ದಿವಾಕರ್,ಡಾ.ಶಶಿಕಾಂತ್ ಬೂದಿಹಾಳ್,ಡಾ.ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

       ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಸಾಕು ಪ್ರಾಣಿಗಳಿಗೆ ಪಶುವೈದ್ಯರಾದ ಡಾ.ವೆಂಕಟೇಶಬಾಬು, ಡಾ.ವಿಶ್ವನಾಥ್, ಡಾ.ಪ್ರಿಯಾಂಕ ಮತ್ತು ಡಾ.ಶರ್ಮಿಳಾ ಅವರುಗಳು ಭಾಗವಹಿಸಿ, ಚಚುಮದ್ದು ನೀಡಿದರು.

(Visited 4 times, 1 visits today)

Related posts

Leave a Comment