ಮುನಿರತ್ನಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆಯಿದೆ : ಎಸ್.ಟಿ.ಸೋಮಶೇಖರ್

ತುಮಕೂರು:

      ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಯಾರಿಗೆ ಸಚಿವ ಸ್ಥಾನ ಕೊಡಬೇಕು, ಯಾರನ್ನು ಕೈ ಬಿಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

      ಈ ಹಿಂದೆ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಅವರು ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.

      ರಾಜರಾಜೇಶ್ವರಿ ನಗರದ ನೂತನ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬ ನಂಬಿಕೆ ನಮ್ಮೆಲ್ಲರಿಗೆ ಇದೆ. ಮುಖ್ಯಮಂತ್ರಿಗಳು ಇದುವರೆಗೂ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟಿದ್ದರೆ, ಸೋತವರಿಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಇನ್ನು ಉಳಿದವರಿಗೆ ಏನು ಮಾಡಬೇಕು ಎಂಬ ವಿಚಾರ ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಆ ಪ್ರಕಾರ ಅವರು ನಡೆದುಕೊಳ್ಳುತ್ತಾರೆ ಎಂದರು.

     ನಗರದ ಸಿದ್ದಗಂಗಾ ಮಠಕ್ಕೆ ನಿನ್ನೆ ಸಂಜೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರೊಂದಿಗೆ ಭೇಟಿ ನೀಡಿ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ 105 ಜನ ಶಾಸಕರಿದ್ದರು. ಅವರ ಜತೆಗೆ ನಾವು 17 ಜನ ಹೊಸದಾಗಿ ಸೇರ್ಪಡೆಯಾದೆವು. ಸಹಜವಾಗಿಯೇ ಅವರಿಗೂ ಸಚಿವ ಸ್ಥಾನ ಕೊಡುವ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ. ಹಾಗೆಯೇ ಹೊಸದಾಗಿ ಸೇರ್ಪಡೆ ಯಾಗಿರುವ 17 ಜನರಿಗೂ ಏನಾದರೂ ಮಾಡಬೇಕು ಎಂಬ ಹೊಣೆಯೂ ಅವರ ಮೇಲಿದೆ. ಹಾಗಾಗಿ ಎಲ್ಲವನ್ನೂ ಮುಖ್ಯಮಂತ್ರಿಗಳು ನಿಭಾಯಿಸುತ್ತಾರೆ. ಆ ನಂಬಿಕೆ ನಮೆಲ್ಲರಿಗೂ ಇದೆ ಎಂದರು.

      ನೂತನ ಶಾಸಕ ಮುನಿರತ್ನ ಮತ್ತು ತಮ್ಮ ನಡುವೆ ರಾಜಕೀಯ ಅಂತರ ಕಾಣುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ನಮ್ಮ ನಡುವೆ ಯಾವುದೇ ಅಂತರ ಇಲ್ಲ. ನಾವು ಮೂರು ಜನ ಒಂದೇ ಎಸ್‍ಬಿಎಂ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಕೂಡ ಇಲ್ಲ. ಮುನಿರತ್ನ ಅವರ ಕ್ಷೇತ್ರವೇ ಬೇರೆ, ನಮ್ಮ ಕ್ಷೇತ್ರವೇ ಬೇರೆ. ನಮ್ಮ ಮೂವರನ್ನು ಮೊದಲು ಎಸ್‍ಬಿಎಂ ಎಂದು ಕರೆಯುತ್ತಿದ್ದರು. ಬಸವರಾಜು ಮತ್ತು ನಾನು ಚುನಾವಣೆ ನಿಂತು ಗೆದ್ದ ಮೇಲೆ ಎಸ್‍ಬಿ ಎಂದು ಕರೆದರು. ಈಗ ಮತ್ತೆ ಮುನಿರತ್ನ ಕೂಡ ಸೇರಿಕೊಂಡಿದ್ದಾರೆ. ಈಗ ಹಿಂದಿನಂತೆಯೇ ಎಸ್‍ಬಿಎಂ ಎಂಬಂತೆಯೇ ಇರುತ್ತೇವೆ. ವಿನಾ ಕಾರಣ ಏನೇನೋ ವದಂತಿ ಹಬ್ಬಿಸುವುದು ಸರಿಯಲ್ಲ ಎಂದರು.

      ಮುಖ್ಯಮಂತ್ರಿಗಳು ಮರಾಠ ಅಭಿವೃದ್ಧಿ ನಿಗಮ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪತ್ರಿಕೆಗಳಲ್ಲಿ ಮಾತ್ರ ಓದಿದ್ದೇನೆ. ನನಗೆ ಸರಿಯಾದ ಮಾಹಿತಿ ಇಲ್ಲ. ಈ ಸಂಬಂಧ ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿದರು.

      ದಾವಣಗೆರೆ ಜಿಲ್ಲೆಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಶ್ರೀಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದೇವೆ. ಶ್ರೀಕ್ಷೇತ್ರಕ್ಕೆ ಆಗಿಂದಾಗ್ಗೆ ಬಂದು ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಇತ್ತೀಚೆಗೆ ಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ಬಂದು ಆಶೀರ್ವಾದ ಪಡೆದಿದ್ದೇವೆ ಎಂದರು.

  ಸ್ಮಾರ್ಟ್‍ಸಿಟಿ ಕಾಮಗಾರಿ ತ್ವರಿತ:

      ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರೊಂದಿಗೆ ಸಮಾಲೋಚನೆ ನಡೆಸಿ ಸಂದರ್ಭದಲ್ಲಿ ಶ್ರೀಗಳು ಸ್ಮಾರ್ಟ್‍ಸಿಟಿ ಕಾಮಗಾರಿಯನ್ನು ಗುಣಮಟ್ಟದಿಂದ ತ್ವರಿತವಾಗಿ ಮುಗಿಸುವ ಸಂಬಂಧ ಪ್ರಸ್ತಾಪಿಸಿದಾಗ, ಸಚಿವ ಬೈರತಿ ಬಸವರಾಜು, ತುಮಕೂರು, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಸ್ಮಾರ್ಟ್‍ಸಿಟಿ ಯೋಜನೆಗೆ ಒಳಪಟ್ಟಿರುವ ನಗರಗಳಿಗೆ ತಾವು ಆಗಿಂದಾಗ್ಗೆ ಭೇಟಿ ನೀಡುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗಿದೆ. ಹಾಗೆಯೇ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆಯೂ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

(Visited 4 times, 1 visits today)

Related posts

Leave a Comment