ಡಾ.ಸೂಲಗಿತ್ತಿ ನರಸಮ್ಮ ಗದ್ದುಗೆಯನ್ನು ಪ್ರವಾಸಿ ತಾಣವಾಗಿಸಬೇಕು

ತುಮಕೂರು:

      ಕಡುಬಡತನದಲ್ಲಿ ಹುಟ್ಟಿ, ತಮ್ಮ ಅಜ್ಜಿಯಿಂದ ಕಲಿತ ಸೂಲಗಿತ್ತಿ ಕಸುಬಿನಿಂದ ಬರುವ ಯಾವುದೇ ಪ್ರತಿಫಲಕ್ಕೆ ಆಸೆ ಪಡದೆ, ಸಾವಿರಾರು ಹೆರಿಗೆಗಳನ್ನು ಮಾಡಿ ತಾಯಿ ಮತ್ತು ಮಗುವಿಗೆ ಜೀವ ನೀಡಿದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಗದ್ದುಗೆಯನ್ನು ಒಳಗೊಂಡಂತೆ ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಹಾಗೂ ಸರಕಾರ ಮುಂದಾಗುವಂತೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಸಲಹೆ ನೀಡಿದ್ದಾರೆ.

      ನಗರದ ಗಂಗಸಂದ್ರ ಬಳಿ ಇರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ.ಸೂಲಗಿತ್ತಿ ನರಸಮ್ಮ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಡಾ.ಸೂಲಗಿತ್ತಿ ನರಸಮ್ಮ ಅವರು, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿ,ತನ್ನ ಕಾಯಕದ ಮೂಲಕವೇ ದೆಹಲಿಯವರಗೂ ಹೆಸರು ಮಾಡಿದರು. ಸಮಾಧಿಯ ಪಕ್ಕದಲ್ಲಿಯೇ ಇರುವ ಕೆರೆಯನ್ನು ಸ್ವಚ್ಚಗೊಳಿಸಿ,ಇದೊಂದು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವ ಕೆಲಸ ಆಗಬೇಕು. ಈಗಾಗಲೇ ಸ್ಥಳೀಯ ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ಸರಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅವರ ಕೆಲಸ ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಗುರುತರ ಕಾರ್ಯಗಳು ಈ ಭಾಗದಲ್ಲಿ ಆಗಬೇಕೆಂಬ ಆಶಯವನ್ನು ಶ್ರೀಸಿದ್ದಲಿಂಗಸ್ವಾಮೀಜಿ ವ್ಯಕ್ತ ಪಡಿಸಿದರು.

      ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಸರಕಾರ ಡಾ.ಸೂಲಗಿತ್ತಿ ನರಸಮ್ಮ ಅವರ ಸೇವೆಯನ್ನು ಗುರುತಿಸಿ, ಈ ಭಾಗದಲ್ಲಿ ಸುಮಾರು 1 ಎಕರೆ ಭೂಮಿಯನ್ನು ನೀಡಿದೆ.ಸ್ಮಾರಕದ ಕಾರ್ಯವೂ ಆರಂಭವಾಗಿದೆ.ಮುಂದಿನ ದಿನಗಳಲ್ಲಿ ಈ ಭಾಗದಲ್ಲಿರುವ ಕೆರೆಯನ್ನು ಸ್ವಚ್ಚಗೊಳಿಸಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ದಿ ಪಡಿಸಲು ಸರಕಾರಕ್ಕೆ ಒತ್ತಾಯಿಸಲಾಗುವುದು. ನರಸಮ್ಮ ಅವರ ಸೇವೆಗೆ ನಾವುಗಳು ಏನು ಮಾಡಿದರೂ ಕಡಿಮೆಯೆ ಎಂದರು.

      ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಶತಮಾನೋತ್ಸವ ಸಮಾರಂಭದಲ್ಲಿ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅವರು,ಮದುವೆಗಿಂತ ಹೆರಿಗೆಗಳು ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ, ನಯಾಪೈಸೆ ಕರ್ಚಿಲ್ಲದೆ ಸಾವಿರಾರು ಹೆರಿಗೆಗಳನ್ನು ಮಾಡಿಸಿ,ಹೊಸ ಜೀವಕ್ಕೆ ಅಹ್ವಾನ ನೀಡುವುದರ ಜೊತೆಗೆ,
ತಾಯಿಗೆ ಮರುಜನ್ಮ ನೀಡುವ ಕಾಯಕ ಮಾಡಿದ ಡಾ.ಸೂಲಗಿತ್ತಿ ಪುಟ ನರಸಮ್ಮ ಅವರ ಕಾರ್ಯ ನಮ್ಮೆಲ್ಲರಿಗೂ ಮಾದರಿ.ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದರೆ ಹಳ್ಳಿಗಾಡಿನಲ್ಲಿ ಸೂಲಗಿತ್ತಿಯರಿಂದ ಹೆರಿಗೆ ಮಾಡಿಸಿ ಕೊಂಡಿರವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಸಹಜ ಹೆರಿಗೆಗಳಿಗಿಂತ,ಸಿಜರಿಯನ್ ಹೆರಿಗೆಗಳ ಸಂಖ್ಯೆಯೇ ಹೆಚ್ಚಿದೆ.ಅದರಲ್ಲಿಯೂ ಖಾಸಗಿ ಆಸ್ಪತ್ರೆಗಳಲ್ಲಿ ಇವುಗಳ ಸಂಖ್ಯೆ ತೀರ ಹೆಚ್ಚಾಗಿದೆ.ಹೆರಿಗೆ ಎನ್ನುವುದು ದುಬಾರಿಯಾಗದಂತೆ ಸರಕಾರ ಎಚ್ಚರ ವಹಿಸಬೇಕಾಗಿದೆ ಎಂದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಪಾವಗಡ ಶ್ರೀರಾಮ ಮಾತನಾಡಿ, ಕುಗ್ರಾಮವೊಂದರಲ್ಲಿ ಹುಟ್ಟಿ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಶಾಶ್ವತವಾಗಿ ಜನರಲ್ಲಿ ಉಳಿಯುವಂತೆ ಮಾಡಲು ಪ್ರತಿವರ್ಷ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜನಪರವಾಗಿ ದುಡಿದ ವ್ಯಕ್ತಿಗಳನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲು ಕಾರ್ಯ ಮಾಡಲಾಗುತ್ತಿದೆ.ಅಲ್ಲದೆ ನರಸಮ್ಮ ತಮ್ಮ ಸೂಲಗಿತ್ತಿ ಕಾಯಕಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಒಳಗೊಂಡ ಮ್ಯೂಸಿಯಂ ನಿರ್ಮಾಣ ಹಾಗು ಆಸಕ್ತರಿಗೆ ಸಂಪ್ರಾದಾಯಕ ಸೂಲಗಿತ್ತಿ ವೃತ್ತಿ ತರಬೇತಿ ನೀಡುವ ಕಾರ್ಯವನ್ನು ಈ ಜಾಗದಲ್ಲಿ ಮಾಡಲು ಟ್ರಸ್ಟ್ ಮುಂದಾಗಿದೆ ಎಂದರು.

      ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ,ಸಾಹಿತಿಗಳಾದ ಅನ್ನಪೂರ್ಣವೆಂಕಟನಂಜಪ್ಪ, ಎನ್.ಡಿ. ವೆಂಕಮ್ಮ, ತತ್ವಪದ ಗಾಯಕರಾದ ಅಕ್ಷತಾ ಬಣ್ಣದ ಬಾವಿ ಅವರಿಗೆ ಡಾ.ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ಹಾಗೂ ಚಿತ್ರಕಲಾವಿದ ಮಹಮದ್ ರಫಿ ಅವರಿಗೆ ಡಾ.ಸೂಲಗಿತ್ತಿ ನರಸಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಲ್ಲದೆ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನಡೆಸಲಾಯಿತು.

      ವೇದಿಕೆಯಲ್ಲಿ ಹರಿಕಥಾ ವಿದ್ವಾನ ಡಾ.ಲಕ್ಷ್ಮಣದಾಸ್,ಜಿ.ಪಂ.ಸದಸ್ಯ ಕೆಂಚಮಾರಯ್ಯ,ನರಸೀಯಪ್ಪ,ರೇವಣ್ಣಸಿದ್ದಯ್ಯ, ವೈ.ಎಂ.ರೆಡ್ಡಿ,ಮಡಕಶಿರದ ಕೊಂಕಲ್ ಮಠದ ಶ್ರೀಓಂಕಾರಮುನಿಸ್ವಾಮೀಜಿ, ಡಾ.ವೆಂಕಟಸ್ವಾಮಿ, ಕೇಶವಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು

(Visited 5 times, 1 visits today)

Related posts

Leave a Comment