ಕೋವಿಡ್-19 ಮಾರ್ಗಸೂಚಿಯನ್ವಯ ವಿದ್ಯಾಗಮ ಪುನರಾರಂಭ

ತುಮಕೂರು : 

        ಕೋವಿಡ್-19ರ ಮಾರ್ಗಸೂಚಿಯನ್ವಯ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಜನವರಿ 1 ರಿಂದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಪುನರಾರಂಭಿಸಲಾಗುವುದು 10ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳನ್ನು ನಡೆಸಲಾಗುವುದು ಎಂದು ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ಧಪ್ಪ ಅವರು ತಿಳಿಸಿದ್ದಾರೆ.

      ಶಾಲಾ ಪ್ರಾರಂಭದ ದಿನ ತಳಿರು-ತೋರಣಗಳಿಂದ ಶಾಲೆಗಳನ್ನು ಸಿಂಗಾರ ಮಾಡುವುದರ ಜೊತೆಗೆ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರನ್ನು ಶಾಲೆಗೆ ಕರೆಸಿ ವಿದ್ಯಾಗಮ ಕಾರ್ಯಕ್ರಮವನ್ನು “ಶಾಲೆಗೆ ಬನ್ನಿ ಮಕ್ಕಳೇ ಮಹಾಮಾರಿ ಕೊರೋನಾ ಓಡಿಸೋಣ ಮಕ್ಕಳನ್ನು ಓದಿಸೋಣ” ಎಂಬ ಘೋಷ ವಾಕ್ಯದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುವುದು.
10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳನ್ನು ನಡೆಸುವಂತೆ ಎಲ್ಲಾ ಮುಖ್ಯ ಶಿಕ್ಷಕರು ಎಸ್.ಒ.ಪಿ ಅನುಸಾರ ಮತ್ತು ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯ ಸೂಚನೆಗಳಂತೆ ಅಗತ್ಯ ಪೂರ್ವ ಸಿದ್ದತಾ ಕ್ರಮಗಳನ್ನು ಕೈಗೊಳ್ಳುವ ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಈಗಾಗಲೇ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಎಲ್ಲಾ ಪಿ.ಡಿ.ಓಗಳಿಗೆ ಎಲ್ಲಾ ಶಾಲೆಗಳ ಸ್ವಚ್ಚತೆ ಮತ್ತು ಸ್ಯಾನಿಟೈಸ್ ಮಾಡುವ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

       ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಪತ್ರದ ಮುಖೇನ ಮನವಿ ಮಾಡಿ ನಗರ ಪ್ರದೇಶದ ಶಾಲೆಗಳಿಗೆ ಸ್ಯಾನಿಟೈಸ್ ಮಾಡಿಸಲು ಮನವಿ ಮಾಡಲಾಗಿದೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಶಾಲಾ ಸ್ವಚ್ಚತೆ ಮತ್ತು ಸ್ಯಾನಿಟೈಸ್ ಹಾಗೂ 10ನೇ ತರಗತಿ ಪ್ರಾರಂಭಿಸುವ ಹಾಗೂ ವಿದ್ಯಾಗಮ-2 ರ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ.

      ಖಾಸಗಿ ಆಡಳಿತ ಮಂಡಳಿಗಳ ಮುಖ್ಯ ಸ್ಥರು ಮತ್ತು ಆಯಾ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಮಕ್ಕಳx ಸುರಕ್ಷತೆ ವೇಳಾಪಟ್ಟಿ, ಗುಂಪುಗಳ ರಚನೆ, ಇತ್ಯಾದಿ ಅಂಶಗಳ ಬಗ್ಗೆ ತಿಳಿಸಿದ್ದು, ಕೋವಿಡ್-19ರ ಕಾರಣದಿಂದ 6 ರಿಂದ 9ನೇ ತರಗತಿವರೆಗೆ ಮಾತ್ರ ವಿದ್ಯಾಗಮ ಕಾರ್ಯಕ್ರಮವನ್ನು ನಡೆಸುವಂತೆ ಸೂಚಿಸಲಾಗಿದೆ.

       1 ರಿಂದ 5 ನೇ ತರಗತಿ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಶಾಲೆಗೆ ಕರೆಸದಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಮುಂದುವರೆದು ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡುವಂತೆ ಹಾಗೂ ಅವರಿಗೆ ಅನ್‍ಲೈನ್/ ಪರ್ಯಾಯ ವ್ಯವಸ್ಥೆಗಳ ಮೂಲಕ ಶಿಕ್ಷಣ ಮುಂದುವರೆಸುವಂತೆ ತಿಳಿಸಲಾಗಿದೆ. ಖಾಸಗಿ ಶಾಲೆಯವರು ವಿದ್ಯಾರ್ಥಿಗಳನ್ನು ಕರೆತರಲು ಬಸ್ ಬಳಸುವ ಪೂರ್ವದಲ್ಲಿ ಬಸ್ಸನ್ನು ಸ್ಯಾನಿಟೈಸ್ ಮಾಡಿಸುವುದು ಕಡ್ಡಾಯ ಹಾಗೂ ಬಸ್‍ನ್ನು ವಿದ್ಯಾರ್ಥಿಗಳ ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರವನ್ನು ಕಾಪಾಡುವುದು, ಬಸ್‍ನಲ್ಲಿ ಶೇಕಡ 50% ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಕರೆತರಲು ಸೂಚಿಸಲಾಗಿದೆ.

      ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಶಾಲೆಗಳ ಶಿಕ್ಷಕರ ಕೋವಿಡ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಬಿಇಓ ಗಳು ತಾಲ್ಲೂಕಿನ ಆರೋಗ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಕೋವಿಡ್ ಟೆಸ್ಟ್ ಮಾಡಿಸಲು ನಿಗದಿತ ಸ್ಥಳವನ್ನು ಗುರ್ತಿಸುವಂತೆ ಮನವಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

(Visited 2 times, 1 visits today)

Related posts

Leave a Comment