ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ರೈತರಿಗೆ ಸಂಕಷ್ಟ

ತುಮಕೂರು : 

      ಕೃಷಿ ಕಾಯ್ದೆ ಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಸುಪ್ರಿಂಕೋರ್ಟ್ ರೈತ ವಿರೋಧಿ ಕಾಯ್ದೆಗಳನ್ನು ತಡೆ ಹಿಡಿಯಿರಿ ಎಂದು ಹೇಳುವ ಮೂಲಕ ಕಪಾಳಮೋಕ್ಷ ಮಾಡಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

      ಜನವರಿ 26 ರಂದು ದೆಹಲಿಯಲ್ಲಿ ಹೋರಾಟ ನಿರತ ರೈತರು ನಡೆಸುವ ಟ್ರಕ್‍ಮತ್ತು ಟ್ಯಾಕ್ಟರ್ ಪೇರೆಡ್‍ಗೆ ಪರ್ಯಾಯವಾಗಿ, ಕರ್ನಾಟಕದಲ್ಲಿಯೂ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಅವರು, ಪ್ರಜಾಸತ್ಮಾತ್ಮಕವಾಗಿ ಜನಾಭಿಪ್ರಾಯದ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ, ತರಬೇಕಾದ ಕಾಯ್ದೆಯನ್ನು ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆಯಿಂದ ಸುಗ್ರಿವಾಜ್ಞೆ ಮೂಲಕ ಜಾರಿಗೆ ಮಾಡುತ್ತಿರುವುದು ಸರಿಯಲ್ಲ.ಕೂಡಲೇ ಸದರಿ ಕಾಯ್ದೆಗಳ ಜಾರಿಯನ್ನು ತಡೆ ಹಿಡಿಯಿರಿ, ಇಲ್ಲವೇ ನಾವೇ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ,ಈ ಕಾಯ್ದೆಗಳು ಜನಪರವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಸಹ ಬಂದಿದೆ.ಇದಕ್ಕಾಗಿ ದೇಶದ ರೈತರ ಪರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಧನ್ಯವಾದಗಳು ಎಂದರು.

      ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು, ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್ ಮತ್ತು ಸಭೆಯಲ್ಲಿ ಪಾಸ್ ಆಗಬೇಕು ಎಂಬ ಅರಿವಾರದರೂ ಇರಬೇಕು,ಅದನ್ನು ಬಿಟ್ಟು ಕಾನೂನಿನ ಬಿಕ್ಕಟ್ಟು ಇದ್ದರು ಕಾಯ್ದೆ ಜಾರಿಗೆ ರಾಜ್ಯಪಾಲರು ಸಹಿ ಹಾಕುವ ಮೂಲಕ ತಮ್ಮ ಹುದ್ದೆಗೆ ಅಗೌರವ ತರುವ ರೀತಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜ.26ರಂದು ನಡೆಯಲಿರುವ ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಆದರೆ, ರಾಷ್ಟ್ರಧ್ವಜದೊಂದಿಗೆ ದೆಹಲಿಯಲ್ಲಿ ಟ್ರಾಕ್ಟರ್, ಟ್ರಕ್ ಗಳೊಂದಿಗೆ ಪರೇಡ್ ಮಾಡುತ್ತೇವೆ.ಬೆಂಗಳೂರಿನಲ್ಲಿಯೂ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.ಸದ್ಯದಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಲಾಗುವುದು ಎಂದರು.

       ರೈತರ ಸಂಕಷ್ಟಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿಲ್ಲ. ಕಾನೂನು ಮಂತ್ರಿಗಳಿಗೂ ಗೊತ್ತಿಲ್ಲದಂತೆಯೇ ಜಾನುವಾರು ಹತ್ಯೆ ನಿಷೇದ ಕಾಯ್ದೆ ರೂಪಿಸಲಾಗುತ್ತಿದೆ.ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ಬಗ್ಗೆ ಸಂಸದರು ಮತ್ತು ಶಾಸಕರುಗಳಿಗೆ ಮಾಹಿತಿಯೇ ಇಲ್ಲ. ಎಲ್ಲವನ್ನು ಕಾರ್ಪೋರೇಟ್ ಕಂಪನಿಗಳು ನಿರ್ಧರಿಸುತ್ತಿದ್ದು, ಮೋದಿ ಅವುಗಳ ಗುಲಾಮರಂತೆ ವರ್ತಿಸುತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ರೈತರಿಗೆ ಕರ್ನಾಟಕ ಸರಕಾರ ಸುಳ್ಳು ಭರಸವೆಯ ಕೋಟೆ ಕಟ್ಟುತ್ತಿದೆ. ಕೃಷಿ ಮಾರುಕಟ್ಟೆ ಮುಚ್ಚಿಸುವುದಿಲ್ಲ ಎಂದು ಎಪಿಎಂಸಿ ಬೈಪಾಸ್ ಕಾಯ್ದೆಯನ್ನು ಜಾರಿಗೆ ತಂದು ಕಾಪೆರ್Çೀರೇಟ್ ಮತ್ತು ಎಂಎನ್ಸಿಗಳಿಗೆ ಕೃಷಿ ಉತ್ಪನ್ನ ಖರೀದಿಸಲು ಮಾರಾಟ ಮಾಡಲು ಅವಕಾಶ ಕಲ್ಪಿಸಿ,ನಾಜೂಕಾಗಿ ರೈತರ ದಾರಿ ತಪ್ಪಿಸಿ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ.ಒಂದೆಡೆ ನಾವು ಕೃಷಿ ಮಾರಾಟ ವ್ಯವಸ್ಥೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ರಿಲೆಯನ್ಸ್ ಕಂಪನಿ ಹೇಳುತ್ತಿದೆ. ಆದರೆ ರಾಯಚೂರು, ಸಿಂಧನೂರು ರೈತರ ಬಳಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.ಈ ಬಗ್ಗೆ ಯಡಿಯೂರಪ್ಪನವರಿಗೆ ಗೊತ್ತಿಲ್ಲವೇ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.

      ಅಮೇರಿಕಾದ ಹಾಲು ಉತ್ಪನ್ನ ಖರೀದಿಸಿ, ದೇಶದ ಗ್ರಾಮೀಣ ಭಾಗದ ಹೈನುಗಾರಿಕೆ ಕೈಬಿಡಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ.ಎಂಎಸ್ ಪಿ ಇಲ್ಲದ ಮೇಲೆ ದರ ನಿಗದಿ ಪಡಿಸುವುದು ಹೇಗೆ,ಪಂಜಾಬ್‍ನಲ್ಲಿ ಯಾವುದೇ ಖರೀದಿದಾರ ಎಂಎಸ್ ಪಿಗಿಂತ ಕಡಿಮೆ ಖರೀದಿಸಿದರೆ ಜೈಲು ಶಿಕ್ಷೆಯ ಕಾಯ್ದೆ ತರಲಾಗಿದೆ.ಯಡಿಯೂರಪ್ಪ ಕರ್ನಾಟಕದಲ್ಲಿಯೂ ಈ ಕಾಯ್ದೆ ಜಾರಿ ಮಾಡಲು ಸಾಧ್ಯವೇ ಎಂದರು.

      ಕರ್ನಾಟಕದಲ್ಲಿ ಎಂಎಸ್ಪಿಗೆ ಯಾವುದೇ ಮಾನ್ಯತೆ ಇಲ್ಲ.ಅಲ್ಲದೆ ಎಪಿಎಂಸಿಯಿಂದ ಹೊರಗೆ ಖರೀದಿ ನಡೆದು ಅನ್ಯಾಯವಾದರೇ ಯಾರನ್ನು ಪ್ರಶ್ನಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ.ಎಪಿಎಂಸಿಯ ಯಾವ ಕಾಯ್ದೆಗಳು ರಿಲೆಯನ್, ಅಧಾನಿ ಗ್ರೂಪ್ ಕಂಪನಿಗಳಿಗೆ ಅನ್ವಯವಾಗಲ್ಲ. ಮೋಸ ಮಾಡುವವರ ಬೆನ್ನ ಹಿಂದೆ ಬಿಜೆಪಿ ನಿಂತಿದೆ, ರಿಲೆಯನ್ಸ್ ಸಹ ಕಾನೂನಿನ ಚೌಕಟ್ಟಿಗೆ ಒಳಪಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

      ಸುದ್ದಿಗೋಷ್ಠಿಯಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಬಸವರಾಪ್ಪ,ತುಮಕೂರು ಜಿಲ್ಲಾಧ್ಯಕ್ಷ ಆನಂದಪಟೇಲ್,ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು , ಪದಾಧಕಾರಿಗಳು ಉಪಸ್ಥಿತರಿದ್ದರು.

(Visited 4 times, 1 visits today)

Related posts

Leave a Comment