ಮಕ್ಕಳ ಮನರಂಜನೆಗಾಗಿ ಪುಟಾಣಿ ರೈಲು ಅಳವಡಿಕೆಗೆ ಚಿಂತನೆ

ತುಮಕೂರು :

     ನಗರದಲ್ಲಿ ಮಕ್ಕಳ ಮನರಂಜ ನೆಗಾಗಿ ಪುಟಾಣಿ ರೈಲು ಅಳವಡಿಸಲು ರಾಜ್ಯ ಬಾಲಭವನ ಚಿಂತನೆ ನಡೆಸಿದೆ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ತಿಳಿಸಿದರು.

ಜಿಲ್ಲಾ ಬಾಲಭವನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರ ಕೇಂದ್ರ ಭಾಗದಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿರುವ ಜಿಲ್ಲಾ ಬಾಲಭವನ ಆವರಣವನ್ನು ಮಕ್ಕಳ ಮನರಂಜನಾ ತಾಣವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಸ್ಪ್ರಿಂಗ್ ರೈಡರ್, ಡಕ್, ಪ್ಲಾಟ್ ಫಾರಂ ಮೆರಿಗೋ ರೌಂಡ್ಸ್, ವೇವ್ ಸ್ಟೇಡ್, ಸೈಡ್ ಬೈ ಸೈಡ್ ಸಿ, ರೈನ್‍ಬೋ ಕ್ಲೈಂಬರ್, ಸ್ಟಾಂಡರ್ಡ್ ಸ್ಪ್ರಿಂಗ್ ಸೇರಿದಂತೆ ಮತ್ತಿತರ ಆಟಿಕೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಮಕ್ಕಳಿಗೆ ಮತ್ತಷ್ಟು ಮನರಂಜನೆ ಒದಗಿಸಲು ಪುಟಾಣಿ ರೈಲು ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರಲ್ಲದೆ ಪುಟಾಣಿ ರೈಲು ಅಳವಡಿಕೆಗಾಗಿ ಸುಮಾರು 6-8 ಎಕರೆ ಪ್ರದೇಶದ ಅಗತ್ಯವಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ನಿವೇಶನ ಮಂಜೂರು ಮಾಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲಾ ಬಾಲಭವನದ ಆವರಣದಲ್ಲಿ ಈಗಾಗಲೇ ಆಟಿಕೆ ಅಳವಡಿಕೆ, ಆಟದ ಮೈದಾನ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯ ಬಾಲಭವನದಿಂದ 35ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿದೆಯಲ್ಲದೆ, ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಬಾಲಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಾಲಭವನ ಆವರಣದಲ್ಲಿ ಖಾಲಿಯಿರುವ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಈಜುಕೊಳ, ವಿಜ್ಞಾನಕೇಂದ್ರ, ಗ್ರಂಥಾಲಯ, ಪ್ಲೇ-ಸೆಂಟರ್, ಪಾರ್ಟಿ ಹಾಲ್, ಆಡಿಯೋ ಸೆಂಟರ್ ನಿರ್ಮಾಣಕ್ಕೆ 4 ಕೋಟಿ ರೂ.ಗಳನ್ನು ಒದಗಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಜಿಲ್ಲಾ ಬಾಲಭವನಗಳು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸೃಷ್ಟಿ ಮಾಡುವ ದೃಷ್ಟಿಯಿಂದ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿವೆ. ಈ ಚಟುವಟಿಕೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ರಾಜ್ಯದ ಎಲ್ಲ ಬಾಲಭವನಗಳ ಉನ್ನತೀಕರಣಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರಲ್ಲದೆ ಹಣವಂತರ ಮಕ್ಕಳಿಗೆ ಸಾಕಷ್ಟು ಸೌಕರ್ಯಗಳಿರುವುದರಿಂದ ಕಲೆ, ಕ್ರೀಡೆ, ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶಗಳಿದ್ದು, ಮಧ್ಯಮ ವರ್ಗ ಹಾಗೂ ಬಡ ವರ್ಗದ ಮಕ್ಕಳು ಇಂತಹ ಚಟುವಟಿಕೆಗಳಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಮಕ್ಕಳಲ್ಲಿ ಹುದುಗಿರುವ ಕಲೆ, ನೈಪುಣ್ಯತೆ, ಪ್ರತಿಭೆಯನ್ನು ಗುರುತಿಸಿ ಉದಯೋನ್ಮುಖರಾಗಿ ಹೊರ ಹೊಮ್ಮಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

      ಬಾಲಭವನದ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಅವರ ಉತ್ತಮ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಬಾಲಭವನ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಹಾಗೂ ಬಯಲು ರಂಗಮಂದಿರವನ್ನು ಅಭಿವೃದ್ಧಿಗೊಳಿಸಲು ಕಾರ್ಯೋನ್ಮುಖರಾಗಬೇಕೆಂದು ಸೂಚಿಸಿದರು.

     ಈ ಸಂದರ್ಭದಲ್ಲಿ ಬಾಲಭವನ ಸಮಿತಿ ಸದಸ್ಯ ನರಸಿಂಹಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು. ನಂತರ ಜಿಲ್ಲಾ ಬಾಲಭವನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮತ್ತಿತರ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

(Visited 19 times, 1 visits today)

Related posts

Leave a Comment