ಜ.30ರಿಂದ ಜಿಲ್ಲಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

 ತುಮಕೂರು  :

     ಜಿಲ್ಲಾದ್ಯಂತ ಜನವರಿ 30 ರಿಂದ ಫೆಬ್ರುವರಿ 13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಆಚರಿಸಲಾಗುತ್ತಿದ್ದು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕುಷ್ಠರೋಗ ಪತ್ತೆ ಹಾಗೂ ರೋಗದ ನಿಯಂತ್ರಣದ ಬಗ್ಗೆ ಹಾಗೂ ಅಗತ್ಯ ಕ್ರಮಗಳನ್ನು ಈ ಆಂದೋಲನದಲ್ಲಿ ನಡೆಸಲು ಸೂಚಿಸಿದರು.

      ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು 15 ದಿನಗಳ ಕಾಲ ನಡೆಯುವ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ತಾಯಂದಿರ ಸಭೆ, ಗುಂಪು ಸಭೆಗಳು ಗ್ರಾಮ ಸಭೆಗಳು ಹಾಗು ಶಾಲೆಗಳಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವಂತೆ ತಿಳಿಸಿದರಲ್ಲದೆ ಎಲ್ಲಾ ತಾಲ್ಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಈ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕುಷ್ಠರೋಗದ ಚಿಹ್ನೆಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪರೀಕ್ಷೆ ಮಾಡಿಸಬೇಕು ಎಂದು ಅವರು ಸೂಚಿಸಿದರು.

      ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಎಲ್ಲೆಲ್ಲಿ ಅವಶ್ಯಕತೆ ಇರುತ್ತದೆಯೋ, ಅಲ್ಲಿ ಭಾಗವಹಿಸಲು ನಿರ್ದೇಶನ ನೀಡಿದರಲ್ಲದೆ ಜನವರಿ 30 ರಿಂದ ಫೆಬ್ರವರಿ 13 ರವರೆಗೆ ನಡೆಯುವ ಆಂದೋಲನ ಅವಧಿಯಲ್ಲಿ ಎಲ್ಲಾ ಸಿಬ್ಬಂದಿಗಳು ಸಹಕರಿಸುವಂತೆ ಅವರು ತಿಳಿಸಿದರು.

      ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ|| ಚೇತನ್ ಎಂ., ಅವರು, ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ 30 ರಿಂದ ಫೆಬ್ರವರಿ 13 ರವರಗೆ ಆಯೋಜಿಸಿರುವ ಬಗ್ಗೆ ತಿಳಿಸುತ್ತಾ ದೈಹಿಕ ಅಂಗವೈಕಲ್ಯದ ಕಾರಣಗಳಲ್ಲಿ ಕುಷ್ಠರೋಗವು ಒಂದು ಪ್ರಮುಖ ಕಾರಣವಾಗಿದೆ. 2020-21 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 28 ಜನ ಚಿಕಿತ್ಸೆ ಪಡೆಯುತ್ತಿದ್ದು, 60 ಜನ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಆರ್.ಸಿ.ಹೆಚ್ ಅಧಿಕಾರಿ ಡಾ|| ಕೇಶವ್ ರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ, ಎಪಿಡೊಮೋಲೊಜಿಸ್ಟ್ ಡಾ|| ರಕ್ಷಿತಾ, ಜಿಲ್ಲಾ ಆಶಾ ಮೇಲ್ವಿಚಾರಕಿ ಮಂಜುಳಾ, ಪುಷ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿಯ ವಾಸುದೇವ್ ಕುಮಾರ್, ಸತೀಶ್ ಬಾಬು, ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

     ನಂತರ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಕರಪತ್ರ, ಬಿತ್ತಿಪತ್ರಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಬಿಡುಗಡೆಗೊಳಿಸಿದರು.

(Visited 3 times, 1 visits today)

Related posts

Leave a Comment