ಸ್ವಾತಂತ್ರ್ಯ ಭಾರತದ ನೈಜ ಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯೋಣ

ತುಮಕೂರು : 

      ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸಿ, ಎಲ್ಲರಿಗೂ ಎಲ್ಲರಂತೆ ಬಾಳುವ ಹಕ್ಕು ನೀಡಿ ವಿಶ್ವದಲ್ಲಿಯೇ ವಿಶಿಷ್ಟ ಹೆಗ್ಗಳಿಕೆ ಪಡೆದಿರುವ ದೇಶದ ಸಂವಿಧಾನದ ಆಶಯ ಹಾಗೂ ಸ್ವಾತಂತ್ರ್ಯ ಭಾರತದ ನೈಜ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯೋಣ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿಂದು ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಅವರು ಸಂದೇಶ ನೀಡಿದರು.

ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಮಹಾತ್ಮಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಉದಾತ್ತ ಧ್ಯೇಯವನ್ನಿಟ್ಟುಕೊಂಡು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಅವರು ಹಾಕಿಕೊಟ್ಟ ಮಾದರಿ ಹಾದಿಯಲ್ಲಿ ನಡೆಯೋಣ, ಸ್ವಾತಂತ್ರ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸೋಣ ಎಂದು ನುಡಿದರು.

      ದೇಶದಲ್ಲಿ ಆಹಾರ ಮತ್ತು ಶೈಕ್ಷಣಿಕ ಕ್ರಾಂತಿಯಾಗಿದೆ. ವಿಶ್ವದಲ್ಲಿ ಭಾರತವು ಆಹಾರ ಸಾಮಾಗ್ರಿ ಶೇಖರಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಭವಿಷ್ಯದಲ್ಲಿ ಎದುರಾಗಬಹುದಾಗಿದ್ದ ಆಹಾರ ಸಮಸ್ಯೆ ಆತಂಕ ದೂರವಾಗಿದೆ. ಶೈಕ್ಷಣಿಕ ಕ್ರಾಂತಿಯಲ್ಲಿಯೂ ದೇಶ ವಿಶ್ವ ಸ್ಥಾನದಲ್ಲಿ ಪ್ರಗತಿಯ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.

ಸುಸ್ಥಿರ, ಸುಭೀಕ್ಷ ರಾಜ್ಯ ನಿರ್ಮಾಣಕ್ಕಾಗಿ ಆರೋಗ್ಯ, ಶಿಕ್ಷಣ, ವಸತಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ಈ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಶೇ. 10ರಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ ಎಂದರು.

      ದಿನೇ ದಿನೇ ಅಂತರ್ಜಲ ಕುಸಿಯುತ್ತಿದ್ದು, ಭವಿಷ್ಯದಲ್ಲಿ ಜಿಲ್ಲೆ ಮರಳುಗಾಡಾಗುವ ಆತಂಕ ಎದುರಾಗಿದ್ದು, ಅಂತರ್ಜಲ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ರೂಪಿಸಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹೇಮಾವತಿ ನೀರಿನಿಂದ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ಹೇಮಾವತಿಯಿಂದ ಜಿಲ್ಲೆಗೆ ಹರಿದಿದೆ. ಮುಂದಿನ ದಿನಗಳಲ್ಲಿ ಭದ್ರ ಮೇಲ್ಡಂಡೆ, ಎತ್ತಿನಹೊಳೆಯ ಮೂಲಕವೂ ಜಿಲ್ಲೆಗೆ ನೀರು ತಂದು ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು. 200ರಿಂದ300 ಅಡಿ ಅಂತರದಲ್ಲೇ ನೀರು ಚಿಮ್ಮುವಂತೆ ಅಂತರ್ಜಲ ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಕೈಗಾರಿಕಾಭಿವೃದ್ಧಿ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉದ್ಯೋಗ ಸೃಷ್ಠಿಗೊಳಿಸುವುದರ ಜೊತೆಗೆ ಹೇಮಾವತಿ, ಎತ್ತಿನಹೊಳೆ, ಭದ್ರ ಮೇಲ್ಡಂಡೆ ನೀರಾವರಿ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುವುದು. ರೆವಿನ್ಯೂ, ಪಿಂಚಣಿ ಅದಾಲತ್‍ಗಳನ್ನೂ ಕ್ರಮಬದ್ಧವಾಗಿ ನಡೆಸುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆ ಬಗೆಹರಿಸಲಾಗುವುದು. ಜಿಲ್ಲೆಯಲ್ಲಿ ಹಾದು ಹೋಗುವ ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ ರೈಲು ಮಾರ್ಗಗಳ ಅನುಷ್ಠಾನಕ್ಕೂ ಒತ್ತು ನೀಡಲಾಗಿದೆ. ಮೊದಲ ಆದ್ಯತೆಯಾಗಿ ಸ್ವಚ್ಚತೆ, ನೀರು, ವಿದ್ಯುತ್ ಪೂರೈಕೆಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

      ಕೃಷಿ, ತೋಟಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಜನರ ಬದುಕನ್ನು ಸ್ವಾಭಿಮಾನ ಬದುಕನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು. ವಲಸೆ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದ ಜನರ ಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದು ನುಡಿದರು.

      ಸಂದೇಶ ನೀಡುವುದಕ್ಕೂ ಮೊದಲು ಜೆ.ಸಿ. ಮಾಧುಸ್ವಾಮಿ ಅವರು ತೆರೆದ ಜೀಪಿನಲ್ಲಿ ಕವಾಯತು ತುಕಡಿಗಳನ್ನು ಪರಿವೀಕ್ಷಣೆ ಮಾಡಿದರು. ರಾಜ್ಯ ಮೀಸಲು ಪೊಲೀಸ್ ಪಡೆ, ಗೃಹ ರಕ್ಷಕದಳ, ಮಹಿಳಾ ಪೊಲೀಸ್ ತಂಡ 1, ಮಹಿಳಾ ಪೊಲೀಸ್ ಪಡೆ 2, ಮಹಿಳಾ ಪೊಲೀಸ್ ಪಡೆ 3, ಅರಣ್ಯ ರಕ್ಷಕ ತಂಡ, ಕಲ್ಪತರು ಪಡೆ ಶಿಸ್ತು ಬದ್ಧ ಪಥ ಸಂಚಲನ ನಡೆಸಿ, ಗೌರವ ಸಲ್ಲಿಸಿತು.
ಡಿಎಆರ್ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರ ಗೀತೆ ಹಾಗೂ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಶಾಸಕ ಬೆಮೆಲ್ ಕಾಂತರಾಜ್, ಮೇಯರ್ ಫರೀದಾ ಬೇಗಂ, ಜಿಪಂ ಉಪಾಧ್ಯಕ್ಷೆ ಶಾರಾದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

      ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಇನ್ನೊಂದು ವರ್ಷದಲ್ಲಿ ಸ್ಮಾರ್ಟ್‍ಸಿಟಿಯ ಬಹುತೇಕ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಎರಡು ವರ್ಷಗಳಲ್ಲಿ ಸ್ಮಾರ್ಟ್‍ಸಿಟಿಯ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿವೆ ಎಂದು ಹೇಳಿದರು.

      ಎಸ್‍ಇಪಿ-ಟಿಎಸ್‍ಪಿ ಯೋಜನೆಯಡಿ ಜಿಲ್ಲೆಗೆ ಬಂದಿರುವ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಲಾಗುವುದು. ಅಕ್ರಮವಾಗಿ ನಡೆಯುವ ಗಣಿಗಾರಿಕೆಗಳಿಗೆ ಕಡಿವಾಣ ಹಾಕಲಾಗುವುದು. ಗ್ರಾಮೀಣಾಭಿವೃದ್ಧಿ, ನೀರಾವರಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

(Visited 4 times, 1 visits today)

Related posts

Leave a Comment