50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ||ಹನುಮಕ್ಕನವರ ಸೇವೆ ಅನನ್ಯ

ತುಮಕೂರು : 

      ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ದೊಡ್ಡಮನೆ ನರ್ಸಿಂಗ್ ಹೋಂ ಮುಂದಾಗಿದ್ದು, 50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿರುವ ಡಾ.ಹನುಮಕ್ಕ ಅವರ ಸೇವೆ ಅನನ್ಯವಾದದ್ದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.

      ನಗರದ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊಡ್ಡಮನೆ ನರ್ಸಿಂಗ್ ಹೋಂನ ಮುಖ್ಯಸ್ಥರಾಗಿರುವ ಡಾ.ಹನುಮಕ್ಕ ಅವರ ಸೇವೆಯಲ್ಲಿ 50 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿದ್ದಾರೆ, ಅವರೇ ದೊಡ್ಡ ಸಂಸ್ಥೆಯಾಗಿದ್ದಾರೆ ಎಂದರು.

      ಸುತ್ತಮುತ್ತಲ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿರುವ ದೊಡ್ಡಮನೆ ನರ್ಸಿಂಗ್ ಹೋಂನಲ್ಲಿ ಪ್ರಾರಂಭಗೊಂಡಿರುವ ಅತ್ಯಾಧುನಿಕ ಐಸಿಯು, ಎಕ್ಸರೇ ಘಟಕದಿಂದ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಿದ್ದು, ಡಾ.ಹನುಮಕ್ಕ ಅವರ ತಂಡಕ್ಕೆ ಶುಭ ಹಾರೈಸಿದರು.

   ಸರ್ಕಾರಕ್ಕೆ ಸಮಸ್ಯೆ ಇಲ್ಲ:

      ಖಾತೆ ಬದಲಾವಣೆಯಲ್ಲಿ ಗೊಂದಲ ಉಂಟಾಗಿರುವುದು ನಿಜ, ಮುಖ್ಯಮಂತ್ರಿಗಳು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ, ಸರ್ಕಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ, ಖಾತೆ ಮುನಿಸಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

      ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಕಾಯ್ದೆ ರೈತರ ಸದೃಢತೆ ಹೆಚ್ಚಿಸುವುದರೊಂದಿಗೆ ಸಬಲೀಕರಣವಾಗಲಿದೆ, ರೈತರಿಗೆ ಒಳ್ಳೆಯದು ಆಗಬಾರದು ಎನ್ನುವ ಉದ್ದೇಶದೊಂದಿಗೆ ಕೆಲವರು ಮುಂದಾಗಿದ್ದಾರೆ, ಗಣರಾಜ್ಯೋತ್ಸವದಂತಹ ಮಹತ್ವದ ದಿನದಂದು ರೈತ ಸಂಘಟನೆಗಳು ಹಿಂಸಾಚಾರಕ್ಕೆ ಇಳಿಯಬಾರದಿತ್ತು, ಇದು ಕಪ್ಪು ಚುಕ್ಕೆ ಎಂದು ಹೇಳಿದರು.

      ದೊಡ್ಡಮನೆ ನರ್ಸಿಂಗ್ ಹೋಂ ಉದ್ಘಾಟನೆಗೊಂಡು 26 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸದಾಗಿ ಕೀಲುಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಮಾ.31ರವರೆಗೆ ಉಚಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಉಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಕೆ.ವಿಜಯಕುಮಾರ್ ತಿಳಿಸಿದರು.

      ವೈದ್ಯಕೀಯ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಿರುವ ದೊಡ್ಡಮನೆ ನರ್ಸಿಂಗ್ ಹೋಂ, ಪ್ರಸೂತಿ ಹಾಗೂ ಮಹಿಳೆ ಸಂಬಂಧಿತ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದು, ಈಗ ಕೀಲು ಮೂಳೆ, ಬೆನ್ನುಮೂಳೆಗೆ ಸಂಬಂಧಿಸಿದ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು.

      ಬೆಂಗಳೂರಿನಲ್ಲಿ ಸಿಗುತ್ತಿದ್ದ ಟ್ರೋಮಾ ಚಿಕಿತ್ಸೆಯನ್ನು ತುಮಕೂರಿನಲ್ಲಿ ಕಡಿಮೆ ದರದಲ್ಲಿ ನೀಡುವ ದೃಷ್ಠಿಯಿಂದ ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ, ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕೆಂಬ ಮುಂದಾಲೋಚನೆಯಿಂದ ಸುಸಜ್ಜಿತ ಐಸಿಯು ಒಳಗೊಂಡಿರುವ ಅತ್ಯಾಧುನಿಕ ಕೀಲು ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

      ಈ ವೇಳೆ ಡಾ.ಹನುಮಕ್ಕ, ಡಾ.ವಿಜಯಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕೃಷ್ಣಪ್ಪ, ಜಯಲಕ್ಷ್ಮೀ, ಐಶ್ವರ್ಯ ದೊಡ್ಡಮನೆ, ಶಾಸಕ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸುರೇಶ್‍ಗೌಡ, ವಿದ್ಯೋದಯ ಕಾನೂನು ಕಾಲೇಜಿನ ಮುಖ್ಯಸ್ಥ ಶೇಷಾದ್ರಿ, ಆಡಿಟರ್ ರಾಮಚಂದ್ರಪ್ಪ, ಬೋರೇಗೌಡ, ಮುರುಗಪ್ಪ ಸೇರಿದಂತೆ ಇತರರಿದ್ದರು.

(Visited 5 times, 1 visits today)

Related posts

Leave a Comment