ನಿಗಧಿತ ಕಾಲಾವಧಿಯೊಳಗೆ ಬಿಲ್ಲು ಸಲ್ಲಿಸಲು ಇಂಜಿನಿಯರುಗಳಿಗೆ ಸೂಚನೆ

 ತುಮಕೂರು :

      ಜಿಲ್ಲಾ ಪಂಚಾಯತ್ ಅನುದಾನದಲ್ಲಿ ವಿವಿಧ ಇಲಾಖೆಗಳು ಕೈಗೊಂಡು ಪೂರ್ಣಗೊಳಿಸಿರುವ ಯೋಜನಾ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್ಲುಗಳ ಪಾವತಿಗಾಗಿ ಕೂಡಲೇ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಇಂಜಿನಿಯರುಗಳಿಗೆ ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪೂರ್ಣಗೊಂಡ ಕಾಮಗಾರಿಗಳ ಬಿಲ್ಲುಗಳನ್ನು ಸಕಾಲದಲ್ಲಿ ಸಲ್ಲಿಸದ್ದಿದ್ದರೆ ಅನುದಾನ ರದ್ದಾಗುತ್ತದೆ. ಅನುದಾನ ರದ್ದಾದರೆ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

      ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳ ವಿವಿಧ ಲೆಕ್ಕ ಶೀರ್ಷಿಕೆ/ಯೋಜನೆಗಳಡಿ ಅನುಮೋದಿತ ಕಾಮಗಾರಿಗಳನ್ನು ಬದಲಾವಣೆಗಾಗಿ ಸೂಕ್ತ ಕಾರಣ ನೀಡಿದಾಗ ಮಾತ್ರ ಬದಲಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗುವುದೆಂದರು.

     ಅನುದಾನ ಕೊರತೆ, ನ್ಯಾಯಾಲಯದ ದಾವೆ, ಏಜೆನ್ಸಿ ಬದಲಾವಣೆ ಮತ್ತಿತರ ಕಾರಣಗಳಿಂದ ಬದಲಿ ಕಾಮಗಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ, ಸಭೆಯ ಸರ್ವಸದಸ್ಯರೆಲ್ಲ ಬದಲಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.

ನಂತರ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಬದಲಿ ಕಾಮಗಾರಿಗಳನ್ನು ಶೀಘ್ರವೇ ಕೈಗೊಂಡು ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಪೂರ್ಣಗೊಂಡ ಕಾಮಗಾರಿಗೆ ಮಾತ್ರ ಬಿಲ್ಲುಗಳನ್ನು ಸಲ್ಲಿಸಬೇಕು. ಕಾಮಗಾರಿ ಪೂರ್ಣಗೊಳ್ಳದಿದ್ದರೆ ಬಿಲ್ಲನ್ನು ಸಲ್ಲಿಸುವಂತಿಲ್ಲವೆಂದು ನಿರ್ದೇಶನ ನೀಡಿದರು.

      ಜಿಲ್ಲಾ ಪಂಚಾಯತ್ ಸದಸ್ಯೆ ಗಾಯಿತ್ರಿ ಬಾಯಿ ಮಾತನಾಡಿ, ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ನಿಯೋಜಿತ ಏಜೆನ್ಸಿಗಳೇ ನಿರ್ವಹಣೆ ಮಾಡುತ್ತಿಲ್ಲ. ಕಾಮಗಾರಿ ವಿವರಗಳನ್ನು ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುತ್ತಿಲ್ಲವೆಂದು ಆರೋಪಿಸಿದಾಗ, ಪ್ರತಿಕ್ರಿಯಿಸಿದ ಸಿಇಒ ಒಂದು ವಾರದೊಳಗಾಗಿ ಸಂಬಂಧಿಸಿದ ಇಂಜಿನಿಯರುಗಳು ಅನುಸರಣೆ ಮಾಡಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.

      ಮತ್ತೋರ್ವ ಸದಸ್ಯರಾದ ಕೆಂಚಮಾರಯ್ಯ ಮಾತನಾಡಿ, ನರೇಗಾ ಕಾಮಗಾರಿ ಅನುಷ್ಠಾನ ಮಾಡುವ ಇಂಜಿನಿಯರುಗಳನ್ನು ಪದೇ ಪದೇ ವರ್ಗಾವಣೆ ಮಾಡಬೇಡಿ, ಇದರಿಂದ ಕಾಮಗಾರಿ ಪ್ರಗತಿ ಕುಂಠಿತವಾಗುತ್ತದೆ ಎಂದು ಸಲಹೆ ನೀಡಿದರು.

      ನಂತರ ಜಿಲ್ಲಾ ಪಂಚಾಯತಿಯ ಪ್ರತಿದಿನದ ಖರ್ಚು-ವೆಚ್ಚ, ಅನುದಾನ ಕೊರತೆ ಮತ್ತಿತರ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಅಪ್‍ಡೇಟ್ ಇರಬೇಕು. ವಾಕ್ ಶ್ರವಣದೋಷವುಳ್ಳ ಅಂಧರು ಸೇರಿದಂತೆ ವಿಕಲಚೇತನರಿಗೆ ಮೀಸಲಿರುವ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ ಎಂದು ಸದಸ್ಯರಾದ ವೈ.ಹೆಚ್.ಹುಚ್ಚಯ್ಯ ಅವರು ತಿಳಿಸಿದಾಗ, ಸಿಇಒ ಶುಭಾ ಕಲ್ಯಾಣ್ ಪ್ರತಿಕ್ರಿಯಿಸಿ ವಿಕಲಚೇತನರ ಅನುದಾನಕ್ಕೆ ಸಂಬಂಧಿಸಿದಂತೆ ತುಮಕೂರು ಹಾಗೂ ತಿಪಟೂರು ತಾಲೂಕಿನ ಕ್ರಿಯಾ ಯೋಜನೆ ತಯಾರಿಕೆ ಬಾಕಿಯಿದ್ದು, ಕೂಡಲೇ ಕ್ರಿಯಾ ಯೋಜನೆ ಸಿದ್ಧಪಡಿಸಲು ವಿಕಲಚೇತನ ಕಲ್ಯಾಣಾಧಿಕಾರಿ ರಮೇಶ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ಎಸ್.ನಟರಾಜ್ ಅವರಿಗೆ ನಿರ್ದೇಶನ ನೀಡಿದರು.

     ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳು 2019-20, 2020-21ನೇ ಸಾಲಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಯಾವುದೇ ಕೊಳವೆ ಬಾವಿ ಕೊರೆಯದೆ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಕಳೆದ 2018-19ನೇ ಸಾಲಿನಲ್ಲಿ ಕೊರೆಯಲಾದ ಕೊಳವೆ ಬಾವಿಗಳಿಗೆ ಪಂಪುಸೆಟ್ ಅಳವಡಿಸದೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಲ್ಲವೆಂದು ಸದಸ್ಯ ಕೆಂಚಮಾರಯ್ಯ ಸಭೆಯ ಗಮನಕ್ಕೆ ತಂದಾಗ ಕೊಳವೆ ಬಾವಿ ಕೊರೆಸಲು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮತ್ತೋರ್ವ ಸದಸ್ಯ ಚನ್ನಮಲ್ಲಪ್ಪ ಮಾತನಾಡಿ, ಹಾಲು ಉತ್ಪಾದಕ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಉಳಿದ ವಾಣಿಜ್ಯ ಬ್ಯಾಂಕುಗಳು ಸಾಲ ಸೌಲಭ್ಯ ನೀಡದೇ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರ ಗಮನ ಸೆಳೆದಾಗ ಸ್ಪಂದಿಸಿದ ಲತಾ ರವಿಕುಮಾರ್ ಸಾಲ ಸೌಲಭ್ಯ ನೀಡದಿರುವ ಬ್ಯಾಂಕುಗಳಿಗೆ ಮನವರಿಕೆ ಮಾಡಿ ಅರ್ಹ ಫಲಾನುಭವಿಗಳಿಗೆ ಸಾಲ ಒದಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಲೀಡ್‍ಬ್ಯಾಂಕ್ ಮ್ಯಾನೇಜರ್‍ಗೆ ನಿರ್ದೇಶನ ನೀಡಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಬಾಲರಾಜ್ ಮಾತನಾಡಿ, 2021-22ನೇ ಸಾಲಿನ 182166.56 ಲಕ್ಷ ರೂ.ಗಳ ಕರಡು ವಾರ್ಷಿಕ ಆಯವ್ಯಯವನ್ನು ಸಿದ್ಧಪಡಿಸಿದ್ದು, ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಕರಡು ಆಯವ್ಯಯದಲ್ಲಿ ಲೋಕೊಪಯೋಗಿ ಇಲಾಖೆಗೆ 674 ಲಕ್ಷ ರೂ., ಸಾಮಾನ್ಯ ಶಿಕ್ಷಣಕ್ಕಾಗಿ 118419 ಲಕ್ಷ ರೂ., ಕ್ರೀಡೆ ಮತ್ತು ಯುವಜನ ಸೇವೆಗಾಗಿ 230 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯ-6918 ಲಕ್ಷ ರೂ., ಕುಟುಂಬ ಕಲ್ಯಾಣಕ್ಕಾಗಿ 3551 ಲಕ್ಷ ರೂ., ನೀರು ಸರಬರಾಜು ಮತ್ತು ನೈರ್ಮಲ್ಯಕ್ಕಾಗಿ 131 ಲಕ್ಷ ರೂ., ಪ.ಜಾತಿ/ಪ.ಪಂಗಡ/ಇತರೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 16372 ಲಕ್ಷ ರೂ., ಕಾರ್ಮಿಕ ಮತ್ತು ಉದ್ಯೋಗಕ್ಕಾಗಿ 104 ಲಕ್ಷ ರೂ., ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕಾಗಿ 10614 ಲಕ್ಷ ರೂ., ಪೌಷ್ಠಿಕ ಆಹಾರಕ್ಕಾಗಿ 7632 ಲಕ್ಷ ರೂ., ಸಸ್ಯ ಸಂಗೋಪನೆಗಾಗಿ 3143 ಲಕ್ಷ ರೂ., ಜಲಸಂರಕ್ಷಣೆ-176 ಲಕ್ಷ ರೂ., ಪಶುಸಂಗೋಪನೆ-4492 ಲಕ್ಷ ರೂ., ಅರಣ್ಯ-1002 ಲಕ್ಷ ರೂ., ಮೀನುಗಾರಿಕೆ-236 ಲಕ್ಷ ರೂ., ಗ್ರಾಮೀಣಾಭಿವೃದ್ಧಿ-6144 ಲಕ್ಷ ರೂ., ಸಣ್ಣ ನೀರಾವರಿ-279 ಲಕ್ಷ ರೂ., ಗ್ರಾಮೀಣ ಮತ್ತು ಸಣ್ಣ ಉದ್ಯಮಗಳಿಗಾಗಿ 806 ಲಕ್ಷ ರೂ., ರಸ್ತೆ ಮತ್ತು ಸೇತುವೆಗಾಗಿ 1050 ಲಕ್ಷ ರೂ., ಸೇರಿದಂತೆ ಒಟ್ಟು 182166.56 ಲಕ್ಷ ರೂ.ಗಳಿಗೆ ಕರಡು ಆಯವ್ಯಯವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರಲ್ಲದೇ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಪ್ರಗತಿ ಮಾಹಿತಿ ನೀಡುತ್ತಾ, ಹೊಸದಾಗಿ 281 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 575.91 ಲಕ್ಷ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಸಭೆಗೆ ಗೈರು ಹಾಜರಾಗಿದ್ದ ವಿವಿಧ ನಿಗಮದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಬೇಕೆಂದು ಶುಭಾ ಕಲ್ಯಾಣ್ ಮುಖ್ಯ ಯೋಜನಾಧಿಕಾರಿಗೆ ನಿರ್ದೇಶನ ನೀಡಿದರಲ್ಲದೇ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದರಿಂದ ಅನುದಾನ ಖರ್ಚಾಗದೇ ಬಾಕಿ ಉಳಿದಿದ್ದು, ಉಳಿದಿರುವ ಹಣವಿದ್ದಲ್ಲಿ ವಿದ್ಯಾರ್ಥಿನಿಲಯಕ್ಕೆ ಅಗತ್ಯವಿರುವ ಹಾಸಿಗೆ ಖರೀದಿಸಲು ಅನುಮತಿ ನೀಡಬೇಕೆಂದು ಸದಸ್ಯರ ಅನುಮತಿ ಕೋರಿದಾಗ, ಹಣ ದುರ್ಬಳಕೆಯಾಗದಂತೆ ಸ್ಥಾಯಿ ಸಮಿತಿ ಅನುಮೋದನೆ ಪಡೆದು ಸದ್ವಿನಿಯೋಗ ಮಾಡಲು ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.

     ಸಭೆಯಲ್ಲಿ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ವಿವಿಧ ಸ್ಥಾಯಿ ಸಮಿತಿಗಳ ಚೌಡಪ್ಪ, ರಾಮಚಂದ್ರಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸದಸ್ಯರು, ಜನಪ್ರತಿನಿಧಿಗಳು ಹಾಜರಿದ್ದರು.

(Visited 7 times, 1 visits today)

Related posts

Leave a Comment