KSRTC ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ

 ತುಮಕೂರು : 

      ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ನೇತ್ರ ಮತ್ತು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್ ಬಸವರಾಜು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ನೇತ್ರ ಹಾಗೂ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

     ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ (ದಿ:18-01-2021 ರಿಂದ ದಿ:17-02-2021 ರವರೆಗೆ)“ರಸ್ತೆ ಸುರಕ್ಷತೆ-ಜೀವನ ರಕ್ಷೆ”“( Sadak Suraksha-Jeevan Raksha )” ಹಾಗೂ ಇಂಧನ ಉಳಿತಾಯ ಮಾಸಿಕ (16-01-2021 ರಿಂದ 15-02-2021 ರವರೆಗೆ) ಆಚರಣೆ ಮಾಡಿ ಅಪಘಾತಗಳನ್ನು ಕಡಿಮೆಗೊಳಿಸುವ ಅನೇಕ ಕಾರ್ಯಕ್ರಮ, ಶಿಬಿರಗಳನ್ನು ಘಟಕಮಟ್ಟದಲ್ಲಿ ನಡೆಸಲಾಗಿದೆ ಎಂದು ತಿಳಿಸಿದರು.

     ದ್ವಿಚಕ್ರ ವಾಹನ ಸವಾರರು/ ಪಾದಚಾರಿಗಳ ನಡುವೆ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು, ಸಂಸ್ಥೆಯ ಚಾಲಕರು ರಸ್ತೆಯಲ್ಲಿ ಸಂಚರಿಸುವ ಪಾದಚಾರಿ ಮತ್ತು ದ್ವಿಚಕ್ರ ವಾಹನಗಳನ್ನು (ಲಘು ವಾಹನಗಳು) ಸೂಕ್ಷ್ಮವಾಗಿ ನಿಗಾವಹಿಸಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು.
ಕಳೆದ ಸಾಲಿಗಿಂತ ಪ್ರಸ್ತುತ ಸಾಲಿನಲ್ಲಿ ಅಪಘಾತದಲ್ಲಿ ಮೃತರ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಮುಂದಿನ ಸಾಲಿನಲ್ಲಿ ಇದರ ಪ್ರಮಾಣ ಪೂರ್ಣ ಕಡಿಮೆಗೊಳಿಸುವಂತೆ ನಾವೆಲ್ಲ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸೋಣ ಎಂದು ಹೇಳಿದರು.

      ಶಿಬಿರದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ವೀರಭದ್ರಯ್ಯ, ವಿಭಾಗೀಯ ಸಂಚಲನಾಧಿಕಾರಿ ಫಕೃದ್ದೀನ್, ವಿಭಾಗೀಯ ಯಾಂತ್ರಿಕ ಅಭಿಯಂತರ ಆಸೀಪುಲ್ಲಾ ಷರೀಫ್, ಘಟಕ ವ್ಯವಸ್ಥಾಪಕರಾದ ತುಳಸೀರಾಮ್ ಹಾಗೂ ಸಂತೋಷ್ ಎಸ್.ಆರ್. ಹಾಗೂ ಅರಕ್ಷಕ ಉಪಾಧೀಕ್ಷಕರಾದ ಬಿ.ಜಿ ಶ್ರೀನಿವಾಸ್, ನವೀನ್ ಸೇರಿದಂತೆ ಇತರರಿದ್ದರು.

(Visited 4 times, 1 visits today)

Related posts

Leave a Comment