ತುಮಕೂರು : ಅಧಿಕಾರಿಗಳ ಬೇಜವಾಬ್ದಾರಿ ; ಮನೆಗಳಿಗೆ ಕೊಳಚೆ ನೀರು

ತುಮಕೂರು : 

      ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದ 2ನೇ ವಾರ್ಡ್ ಶಿರಾಗೇಟ್‍ನಿಂದ ಸತ್ಯಮಂಗಲ, ದೇವರಾಯನದುರ್ಗ ರಸ್ತೆಯಲ್ಲಿ ಕೊಳಚೆ ನೀರು ಮನೆಗಳಿಗೆ ಮತ್ತು ರಸ್ತೆಗೆ ನುಗ್ಗಿ ಈ ಭಾಗದ ನಾಗರೀಕರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

      ಶಿರಾಗೇಟ್‍ನಿಂದ ಸತ್ಯಮಂಗಲ, ದೇವರಾಯನದುರ್ಗ ರಸ್ತೆಯಲ್ಲಿರುವ ಹೆಚ್.ಕೆ.ಎಸ್. ಕಲ್ಯಾಣ ಮಂಟಪದ ಮುಂಭಾಗದಲ್ಲಿ ದೊಡ್ಡ ರಾಜಗಾಲುವೆ ಇದ್ದು, ಈ ರಾಜಗಾಲುವೆಯನ್ನು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಮುಚ್ಚಿ, ಚರಂಡಿ ನೀರು ಸರಾಗವಾಗಿ ಹರಿಯಲು ಯೋಜನೆ ರೂಪಿಸದೇ ಅವೈಜ್ಞಾನಿಕ ಕಾಮಗಾರಿ ನಿರ್ವಹಣೆ ಮಾಡಿರುವುದರಿಂದ ಚರಂಡಿ ನೀರು ಈ ಭಾಗದ ಮನೆಗಳಿಗೆ ಮತ್ತು ರಸ್ತೆಗೆ ನುಗ್ಗಿ ಸಂಕಷ್ಟ ಎದರಿಸುವಂತಾಗಿದೆ. ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

      ಈ ಬಗ್ಗೆ ಈ ಭಾಗದ ನಾಗರೀಕರು ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ಕೇಳಿದರೆ, ಇದು ನಮಗೆ ಸಂಬಂಧಪಟ್ಟಿದ್ದಲ್ಲ, ವಾಟರ್ ಬೋರ್ಡ್‍ನವರಿಗೆ ಸಂಬಂಧಿಸಿದ್ದು, ಅವರು ದುರಸ್ತಿ ಮಾಡಬೇಕಿದೆ ಎನ್ನುತ್ತಾರೆ. ವಾಟರ್‍ಬೋರ್ಡ್‍ನವರನ್ನು ಕೇಳಿದರೆ ಮಹಾನಗರಪಾಲಿಕೆಯ ಜೆಟ್‍ಮಿಷನ್ ಸರಿಯಿಲ್ಲ, ಅದಕ್ಕೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿಲ್ಲ ಎಂದು ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ದೂರುತ್ತಿದ್ದಾರೆಯೇ ವಿನಃ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ಕಳೆದ 15 ದಿನಗಳಿಂದಲೂ ಈ ಭಾಗದಲ್ಲಿ ಸಮಸ್ಯೆ ತೀವ್ರವಾಗಿದೆ ಎನ್ನುತ್ತಾರೆ ನಾಗರೀಕರು.

      ಮಳೆಗಾಲದಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ಸಂಬಂಧಪಟ್ಟವರಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಇಲ್ಲಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ಜನ ತಮ್ಮ ನೋವು ತೋಡಿಕೊಂಡಿದ್ದಾರೆ.

      ಪರ್ಯಾಯ ಯೋಜನೆ ರೂಪಿಸಬೇಕಿತ್ತು: ಸ್ಮಾರ್ಟ್‍ಸಿಟಿ ಅಧಿಕಾರಿಗಳು ರಾಜಗಾಲುವೆ ಮುಚ್ಚಬೇಕಾದರೆ ಆ ರಾಜಗಾಲುವೆಗೆ ಪರ್ಯಾಯವಾಗಿ ಯೋಜನೆ ರೂಪಿಸಿ ಚರಂಡಿಯ ಕೊಳಚೆ ನೀರು ಸರಾಗವಾಗಿ ಬೇರೆಡೆ ಹರಿಯಲು ಮಾರ್ಗಸೂಚಿಗಳನ್ನು ಮಾಡದೇ ಇರುವುದರಿಂದ ಈ ಭಾಗದಲ್ಲಿರುವ ನಾಗರೀಕರ ಮನೆಗಳಿಗೆ, ಮನೆಗಳ ಮುಂದೆ ಇರುವ ತೊಟ್ಟಿಗಳಿಗೆ, ಕಲುಷಿತ ಚರಂಡಿ ನೀರು ಮಿಶ್ರಣಗೊಂಡು, ಕಲುಷಿನ ನೀರನ್ನೇ ಬಳಸುವ ಪರಿಸ್ಥಿತಿ ಎದುರಾಗಿದೆ.

      ಅಧಿಕಾರಿಗಳ ಬೇಜವಾಬ್ದಾರಿ: ನಗರದ ಸ್ವಚ್ಚತೆಗೆ ಆಧ್ಯತೆ ನೀಡಬೇಕಿರುವ ಅಧಿಕಾರಿಗಳು ಶಿರಾಗೇಟ್ ಹೆಚ್.ಕೆ.ಎಸ್. ಕಲ್ಯಾಣ ಮಂಟಪದ ಮುಂಭಾಗ ದೊಡ್ಡ ರಾಜಗಾಲುವೆಯನ್ನು ಮುಚ್ಚಿ, ಅವೈಜ್ಞಾನಿಕ ಕಾಮಗಾರಿ ನಿರ್ವಹಣೆ ಮಾಡಿ, ಡ್ರೈನೇಜ್ ನೀರು ಮನೆಗಳಿಗೆ ನುಗ್ಗಿ, ಕಲುಷಿತ ನೀರು ಕುಡಿಯಯುವಂತಹ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬರುತ್ತಿರುವ ಹಿನ್ನಲೆಯಲ್ಲಿ ಮಳೆಯ ನೀರಿನೊಂದಿಗೆ ಡ್ರೈನೇಜ್ ನೀರು ಮನೆಗಳಿಗೆ ಸರಾಗವಾಗಿ ಹರಿದು ಬರುತ್ತಿದೆ. ಇದರಿಂದ ಈ ಭಾಗದಲ್ಲಿ ವಾಸಿಸುತ್ತಿರುವ ನಾಗರೀಕರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

      ಈಗಾಗಲೇ ಕೋವಿಡ್‍ನಿಂದ ಸಂಕಷ್ಟ  ಎದುರಿಸುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಶುದ್ಧ ಕುಡಿಯುವ ನೀರು ಕುಡಿಯಬೇಕಾದ ಸಂದರ್ಭದಲ್ಲಿ ಚರಮಡಿ ನೀರು ಮನೆಗಳಿಗೆ ಹಾಗೂ ಮನೆಗಳ ತೊಟ್ಟಿಗಳಿಗೆ ನುಗ್ಗಿ ಸಾಂಕ್ರಾಮಿಕ ರೋಗಗಳ ಸೃಷ್ಠಿಗೆ ಆಹ್ವಾನಿಸಿದಂತಾಗುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸುತ್ತಿಲ್ಲ, ಕಳೆದ 15 ದಿನಗಳಿಂದಲೂ ಸಮಸ್ಯೆ ಬಗೆ ಹರಿಸಿ ಎಂದು ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ನಾಗರೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

      ಕಲುಷಿತ ಚರಂಡಿ ನೀರು ಮನೆಗಳಿಗೆ ಮತ್ತು ಮನೆಗಳ ಮುಂದೆ ಇರುವ ತೊಟ್ಟಿಗಳಿಗೆ ಹರಿಯುತ್ತಿದ್ದು, ರಸ್ತೆಯಲ್ಲೂ ಕಲುಷಿತ ನೀರು ಹರಿಯುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ.

     ಈ ಭಾಗದ ನಾಗರೀಕರು ತಿರುಗಿಬೀಳುವ ಮುನ್ನ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ವಾರ್ಡಿನ ಮುಖಂಡರಾದ ಶ್ರೀನಿವಾಸ್, ಗಣೇಶ್, ಶಿವಣ್ಣ, ರಾಜಣ್ಣ, ಚಿಕ್ಕಸಿದ್ದಯ್ಯ, ನರಸೇಗೌಡ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

(Visited 6 times, 1 visits today)

Related posts

Leave a Comment