ತುಮಕೂರು  :

      ಕೋವಿಡ್ ಎರಡನೇ ಅಲೆ ಜಿಲ್ಲೆಗೆ ವ್ಯಾಪಿಸದಂತೆ ತಡೆಯಲು ಮುಂಜಾಗ್ರತಾ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

      ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ಎರಡನೇ ಅಲೆ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೊದಲನೇ ಹಂತದ ಕೋವಿಡ್-19 ನಿಯಂತ್ರಿಸಲು ಕೈಗೊಂಡ ಕ್ರಮಗಳಂತೆಯೇ ಕೋವಿಡ್-19 ಎರಡನೇ ಅಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಅವರು ನಿರ್ದೇಶಿಸಿದರು.

      ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹರಡಿದ್ದ ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಮೊದಲ ಹಂತದ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮಗಳು ಮತ್ತು ಸರಕಾರ ನೀಡಿದ ನಿರ್ದೇಶನಗಳನ್ನು ಪಾಲಿಸಿದ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಯಿತು. ಅದೇ ರೀತಿಯಲ್ಲಿಯೇ ಕೋವಿಡ್ ಎರಡನೇ ಅಲೆ ಜಿಲ್ಲೆಗೆ ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

      ಆಶಾ-ಅಂಗನವಾಡಿ ಕಾರ್ಯಕರ್ತರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ ಜ್ವರ, ಕೆಮ್ಮು, ತಲೆನೋವು, ಶೀತಾ ಇವುಗಳ ಬಗ್ಗೆ ನಿಗಾವಹಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ ಅವರನ್ನು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್ ಪಾಸಿಟೀವ್ ಬಂದರೆ ಅಂತಹವರನ್ನು 14 ದಿನಗಳ ಹೋಂ ಕ್ಯಾರಂಟೈನ್ ಮಾಡಬೇಕು. ಕೇರಳ, ಮಹಾರಾಷ್ಟ್ರ ಸೇರಿದಂತೆ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿರುವ ಮತ್ತಿತರ ಪ್ರದೇಶಗಳಿಂದ ಕಳೆದ 15 ದಿನಗಳಿಂದ ಜಿಲ್ಲೆಗೆ ಆಗಮಿಸಿರುವವರ ಮೇಲೆ ನಿಗಾವಹಿಸಬೇಕು ಎಂದು ನಿರ್ದೇಶಿಸಿದರು.

      ಮೊದಲ ಹಂತದ ಕೋವಿಡ್ ಸಮಯದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ನಿಯಂತ್ರಣ ಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಕೈಗೊಂಡು, ಗ್ರಾಮೀಣ ಭಾಗಕ್ಕೆ ಕೋವಿಡ್ ವ್ಯಾಪಿಸದಂತೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿಯೇ ಕೋವಿಡ್ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಪ್ರದೇಶಗಳಿಗೆ ಕೇರಳ, ಮಹಾರಾಷ್ಟ್ರ ಮತ್ತಿತರ ಸೋಂಕು ಕಂಡುಬಂದ ಪ್ರದೇಶಗಳಿಂದ ಬರುವವರ ಮೇಲೆ ನಿಗಾವಹಿಸುವಂತೆ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಇಒಗಳಿಗೆ ನಿರ್ದೇಶಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.

      ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು. ವೆಂಟಿಲೇಟರ್ ಸೇರಿದಂತೆ ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ತುಮಕೂರು ಹಾಗೂ ತಿಪಟೂರಿನಲ್ಲಿ ವೈರಲ್ ಲ್ಯಾಬ್‍ಗಳನ್ನು ಸ್ಥಾಪಿಸಿದೆ. ಪ್ರತಿನಿತ್ಯ 1,500ಕ್ಕೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆ ನಡೆಸುವ ಸಾಮಥ್ರ್ಯ ಹೊಂದಲಾಗಿದ್ದು, ಅದಲ್ಲದೆ ಲ್ಯಾಬ್ ಆನ್ ಮೊಬೈಲ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

     ಎಲ್ಲಾ ತಾಲೂಕು ಆಸ್ಪತ್ರೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿರಬೇಕು. ಗಂಭೀರ ಪ್ರಕರಣಗಳನ್ನು ಮಾತ್ರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.

      ಮೊದಲ ಹಂತದಲ್ಲಿನ ಕೋವಿಡ್ ನಿಯಂತ್ರಣಕ್ಕೆ ತಹಸೀಲ್ದಾರ್ ನೇತೃತ್ವದ ತಾಲೂಕು ಆಡಳಿತಗಳು ಮಹತ್ತರ ಪಾತ್ರ ವಹಿಸಿದ್ದವು. ಎರಡನೇ ಅಲೆ ನಿಯಂತ್ರಣಕ್ಕೂ ಅದೇ ರೀತಿ ಕಾರ್ಯನಿರ್ವಹಿಸಲು ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ನಿರ್ದೇಶಿಸಿದರು.

      ತುಮಕೂರು ನಗರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿರುವ ವಾರ್ಡ್‍ಗಳ ಕಡೆಯೂ ಹೆಚ್ಚು ನಿಗಾ ವಹಿಸಬೇಕು. ಕೋವಿಡ್ ನಿಯಂತ್ರಣದ ಜೊತೆಗೆ ಇತರೆ ಖಾಯಿಲೆಗಳ ನಿಯಂತ್ರಣಗಳಿಗೂ ಒತ್ತು ಕೊಡಬೇಕು. ಜನರಲ್ಲಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಶಿಬಿರ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಹಾಗೂ ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯ ಅವರಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಮನವಿ: ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿರುವ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸುವವರ ಬಗ್ಗೆ ನಿಗಾವಹಿಸಿ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವೈ,ಎಸ್. ಪಾಟೀಲ ಅವರು ಮನವಿ ಮಾಡಿದರು.

     ಸೋಂಕು ಕಾಣಿಸಿಕೊಂಡಿರುವ ರಾಜ್ಯಗಳಿಂದ ಹಳ್ಳಿಗಳಿಗೆ ಆಗಮಿಸುವವರ ಮಾಹಿತಿಯನ್ನು ಜನರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದರೆ ಸೋಂಕು ನಿಯಂತ್ರಿಸಲು ಸಹಕಾರಿಯಾಗಲಿದೆ. ಜಿಲ್ಲೆಗೆ ಸೋಂಕು ವ್ಯಾಪಿಸದಂತೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಾಹಿತಿ ನೀಡಿದರೆ ಸೂಕ್ತ. ಹಾಗಾಗಿ ಹಳ್ಳಿಗಳಲ್ಲಿ ಟಾಂಟಾಂ ಹೊಡೆಸಿ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಾ. ಚೇತನ್, ಡಾ. ಮಹಿಮಾ, ಡಾ.ಮೋಹನ್‍ದಾಸ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಾಲರಾಜ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

(Visited 5 times, 1 visits today)