ತುಮಕೂರು :  

      ಇಂಧನ ಬೆಲೆಗಳ ನಿರಂತರ ಹೆಚ್ಚಳ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಳಂಬದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಎತ್ತಿನಗಾಡಿ,ಜಟಕಾಗಾಡಿ, ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

       ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಗಾಡಿ,ಜಟಕಾಗಾಡಿ ಮತ್ತು ಸೈಕಲ್ ಜಾಥಾವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯಿದ್ ಅಹಮದ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು,ಅಂತರರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ನಿರಂತರ ವಾಗಿ ಇಂಧನ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ, ಕೋರೋನ ಸಂಕಷ್ಟದಲ್ಲಿರುವ ರೈತರನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಲಿಗೆ ಮಾಡುತ್ತಿವೆ.ಇಂಧನ ಬೆಲೆಗಳ ಹೆಚ್ಚಳದ ಪರಿಣಾಮ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿ, ಜನಸಾಮಾನ್ಯರು, ಅದರಲ್ಲಿ ಬಡವರು ಮತ್ತು ಮಧ್ಯಮವರ್ಗದ ಜನರು ಬದುಕುವುದೇ ಕಷ್ಟವಾಗಿದೆ.ಕೇಂದ್ರ ಸರಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.ಇದರ ವಿರುದ್ದ ಕಾಂಗ್ರೆಸ್ ನಿರಂತರ ಹೋರಾಟ ರೂಪಿಸಿದ್ದು, ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ದ ಪ್ರತಿಭಟನೆ ನಡೆಸಲಿದೆ ಎಂದರು.

      ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದೆ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಸರಕಾರ, ಸರಕಾರಿ ಸಾಮ್ಯದ ಸಾರಿಗೆ, ಟೆಲಿಕಾಂ,ಹೆಚ್.ಎ.ಎಲ್.ನಂತಹ ಕಂಪನಿಗಳನ್ನು ಮಾರಾಟ ಮಾಡಿ,ಅದಾನಿ,ಅಂಬಾನಿಯಂತಹ ದೊಡ್ಡ ಬಂಡವಾಳ ಗಾರರನ್ನು ಪೋಷಿಸುತ್ತಿದ್ದಾರೆ.ಗುಜರಾತ್ ನಲ್ಲಿ ಸರ್‍ದಾರ್ ವಲ್ಲಭಾಯಿ ಪಟೇಲ್ ಹೆಸರಿನಲ್ಲಿ ನಿರ್ಮಿಸಿದ್ದ ಕ್ರೀಡಾಂಗಣವನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡು,ಕ್ರಿಕೆಟ್ ಅಂಕಣದಲ್ಲಿ ಅದಾನಿ,ಅಂಬಾನಿ ಎಂಡ್‍ಗಳನ್ನು ಗುರುತಿಸಿ,ದೇಶದ ಜನರ ಜೊತೆ, ಕ್ರೀಡೆಯನ್ನು ಅಪಮಾನಿಸುತ್ತಿದ್ದಾರೆ.ಇದರ ವಿರುದ್ದ ಕಾಂಗ್ರೆಸ್ ಶಾಂತಿಯುತ ಹೋರಾಟ ರೂಪಿಸಲಿದೆ ಎಂದು ಸೈಯಿದ್ ಅಹಮದ್ ತಿಳಿಸಿದರು.

     ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು ತತ್ತರಿಸಿದ್ದು,ದಿನನಿತ್ಯ ಬಳಕೆ ವಸ್ತುಗಳಾದ ಗೋಧಿ, ಬೆಳೆ, ಬೆಲ್ಲ, ಅಕ್ಕಿ, ಕಾಳುಗಳು ಬೆಲೆಗಳು ಗಗನ ಮುಖಿಯಾಗಿದ್ದು, ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಇದರ ವಿರುದ್ದ ನಾವು ನಿರಂತರ ಪ್ರತಿಭಟನೆ ನಡೆಸಲಿದ್ದೇವೆ.ಯುಪಿಎ ಸರಕಾರವಿದ್ದಾಗ ಒಂದು ರೂ ಇಂಧನ ಬೆಲೆ ಹೆಚ್ಚಾದರೂ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಸಂಸದರು, ಶಾಸಕರು, ಮುಖಂಡರು, ಒಂದೇ ಸಮನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದರೂ ತುಟ್ಟಿ ಬಿಚ್ಚುತ್ತಿಲ್ಲ.ಇದು ಬಿಜೆಪಿಯ ಇಬ್ಬಗೆಯ ನೀತಿ.ಅಲ್ಲದೆ ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯ ಕಾಮಗಾರಿಗಳು ತೀರ ವಿಳಂಬದಿಂದ ಕೂಡಿದ್ದು, ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ.ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

      ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಕೆ.ಪಿ.ಸಿಸಿ.ವಕ್ತಾರರಾದ ಮುರುಳೀಧರ ಹಾಲಪ್ಪ,ಹೆಚ್.ಸಿ. ಹನುಮಂತಯ್ಯ ಮಾತನಾಡಿದರು.ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಅಲ್ಪಸಂಖ್ಯಾತರ ಘಟಕಕದ ಸಂಜೀವ್ ಕುಮಾರ್,ಶಿವಾಜಿ, ಥಾಮ್‍ಸನ್,ನಿಶಾ, ದಾದಾಪೀರ್,ಅಲ್ಲಾಉದ್ದಿನ್,ಮುಲ್ಲಾ ಇತರರು ಇದ್ದರು.

(Visited 14 times, 1 visits today)