ತುಮಕೂರು : 

     ದೇಶದಲ್ಲಿ ಪ್ರತಿನಿತ್ಯ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಂಬಂಧ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ವಿತ್ತ ಸಚಿವರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ತಿಳಿಸಿದರು.

ದೇಶದ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ಆರ್ಥಿಕ ಮಂತ್ರಿಗಳಿಗೆ ದೂರದೃಷ್ಠಿ ಚಿಂತನೆ ಇದೆ. ಹಾಗಾಗಿ ಅವರು ಎಲ್ಲದರ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

     ಪೆಟ್ರೋಲ್-ಡೀಸೆಲ್ ದರ ಏರಿಕೆಗೆ ರಾಜ್ಯ ಸರ್ಕಾರವಾದರೂ ತನ್ನ ವ್ಯಾಪ್ತಿಯಲ್ಲಿ ಕಡಿಮೆ ಮಾಡಬಹುದಲ್ಲವಾ ಎಂಬ ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿಗಳು ಈಗಾಗಲೇ ದರ ಏರಿಕೆ ಬಗ್ಗೆ ಗಮನ ಹರಿಸಿದ್ದು, ಎಲ್ಲ ಸಂಘ ಸಂಸ್ಥೆಗಳನ್ನು ಕರೆದು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳಿಗೆ 50 ವರ್ಷದ ರಾಜಕೀಯ ಅನುಭವ ಇದೆ. ರಾಜ್ಯದಲ್ಲಿ ಸಾಮಾನ್ಯ ಜನರಿಗೆ ಆಗುತ್ತಿರುವ ನೋವಿನ ಅರಿವು ಕೂಡಾ ಇದೆ. ಹಾಗಾಗಿ ಅವರು ಸಹ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನವನ್ನು ಮಾಡಲಿದ್ದಾರೆ ಎಂದರು.

ತುಮಕೂರಿಗೆ ಭೇಟಿ ನೀಡಿದಾಗಲೆಲ್ಲಾ ಶ್ರೀಮಠಕ್ಕೆ ಬರುವುದು ಕಳೆದ 40 ವರ್ಷಗಳಿಂದ ನಡೆದು ಬಂದಿರುವ ವಾಡಿಕೆ. ಅದರಂತೆ ಇಂದು ಸಹ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಮುಖಂಡ ರವಿಶಂಕರ್ ಹೆಬ್ಬಾಕ ಮತ್ತಿತರರು ಉಪಸ್ಥಿತರಿದ್ದರು.

(Visited 9 times, 1 visits today)