ತುಮಕೂರು:
ನಗರದ ನಾಗರಿಕರಿಗೆ ಅತ್ಯಾಧುನಿಕ ರೀತಿಯಲ್ಲಿ ಸ್ಮಾರ್ಟ್ ರಸ್ತೆ, ಮಲ್ಟಿ ಯುಟಿಲಿಟಿ ಮಾಲ್, ಸ್ಮಾರ್ಟ್ ಲಾಂಜ್, ಎಲ್‍ಇಡಿ ಲೈಟ್ಸ್, ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ಸ್ಮಾರ್ಟ್ ಉದ್ಯಾನವನ ಹೀಗೆ ಅಗತ್ಯವಿರುವ ಹಲವಾರು ಸೌಲಭ್ಯ ಹಾಗೂ ಸಂಪರ್ಕ ಸಾಧನಗಳನ್ನು ಒದಗಿಸಲು ಹೊರಟಿರುವ ಸ್ಮಾರ್ಟ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಸದ್ದಿಲ್ಲದೆ ಲ್ಯಾಬ್ ಆನ್ ಬೈಕು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ.
ಏನಿದು ಲ್ಯಾಬ್ ಆನ್ ಬೈಕು:
ಕಾರ್ಯಕ್ರಮದಲ್ಲಿ ವಿಜ್ಞಾನ ಬೋಧಕರು ತಮ್ಮ ಮೊಬೈಲ್ ಲ್ಯಾಬ್ ಕಿಟ್‍ಗಳೊಂದಿಗೆ ದ್ವಿಚಕ್ರದಲ್ಲಿ ಒಂದು ಶಾಲೆಯಿಂದ ಮೊತ್ತೊಂದು ಶಾಲೆಗೆ ಪ್ರಯಾಣಿಸಿ ಮಕ್ಕಳಿಗೆ ಹಸ್ತಸ್ಪರ್ಶಿ ವಿಧಾನದ ಮೂಲಕ ವಿಜ್ಞಾನ ಶಿಕ್ಷಣದ ಬೋಧನೆ ಹಾಗೂ ತರಬೇತಿ ನೀಡಿದ್ದಾರೆ. ಇದಕ್ಕಾಗಿ 9 ಬೋಧನಾ ಸಿಬ್ಬಂದಿಯೊಂದಿಗೆ ಒಂದು ಮೊಬೈಲ್ ಸೈನ್ಸ್ ಲ್ಯಾಬ್ ಹಾಗೂ 3 ಬೈಕ್‍ಗಳನ್ನು ಬಳಸಿಕೊಳ್ಳಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಾತ್ರ:
ನಗರದ ಎಲ್ಲ ಸರ್ಕಾರಿ ಶಾಲೆಗಳ 5 ರಿಂದ 10ನೇ ತರಗತಿ ಮಕ್ಕಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಅರಿವು ಮೂಡಿಸಿ ಸೃಜನಶೀಲತೆಯನ್ನು ಬೆಳೆಸಲು ಈ ವಿನೂತನ ಕಾರ್ಯಕ್ರಮವನ್ನು ನಡೆಸಲಾಗಿದೆ. ಈಗಾಗಲೇ ಫೆಬ್ರುವರಿ 13ರಿಂದ ಆರಂಭಗೊಂಡಿರುವ ಸುಮಾರು 70 ಸರ್ಕಾರಿ ಶಾಲೆಗಳ 8000 ಮಕ್ಕಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಪ್ರಾತ್ಯಕ್ಷಿಕೆ ಮೂಲಕ ಬೋಧನೆ:
ಕಾರ್ಯಕ್ರಮದಲ್ಲಿ ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ಸಂಸ್ಥೆ ವತಿಯಿಂದ ತರಬೇತಿ ಪಡೆದ ಬೋಧಕರಿಂದ ಸರಳವಾದ ವೈಜ್ಞಾನಿಕ ಪ್ರಯೋಗಗಳನ್ನು ಶಾಲಾ ಮಕ್ಕಳಿಗೆ ಪ್ರದರ್ಶಿಸಲಾಗುತ್ತದೆಯಲ್ಲದೆ ವಿಜ್ಞಾನ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಮತ್ತು ಗಣಿತದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಬೋಧಿಸಲಾಗಿದೆ. ಪ್ರಾತ್ಯಕ್ಷಿಕೆಯಲ್ಲಿ ಸೂಕ್ಷ್ಮದರ್ಶಕ ಯಂತ್ರದ ಬಳಕೆ, ಬೆಳಕಿನ ವಕ್ರೀಭವನ, ನಿಮ್ನ ದರ್ಪಣ/ಪೀನ ಮಸೂರದಲ್ಲಿ ಪ್ರತಿಫಲನ, ಶಬ್ದ/ಬೆಳಕಿನ ಪ್ರತಿಫಲನ, ಡೈನಮೋ ಮಾದರಿ, ಇಂಜಿನ್‍ಗಳ ಮಾದರಿ, ಗಣಿತದ ಸೂತ್ರಗಳನ್ನು ಹಸ್ತಸ್ಪರ್ಶಿ ವಿಧಾನದ ಮೂಲಕ ಮಾಹಿತಿ ನೀಡಲಾಗಿದೆ. ಇಂಥ ವಿಜ್ಞಾನ ಬೋಧನೆಗಳಿಂದ ಮಕ್ಕಳಲ್ಲಿ ಸರಳ ಪ್ರಯೋಗಗಳ ಮೂಲಕ ಪ್ರಶ್ನಿಸುವ ಮನೋಭಾವನೆ ಬೆಳೆಯುತ್ತದೆ. ಅಲ್ಲದೆ ಅನುಭವಪೂರಿತ ಕಲಿಕಾ ಪದ್ಧತಿ ಮತ್ತು ಪ್ರಾಯೋಗಿಕ ವಿಧಾನವನ್ನು ಉತ್ತೇಜಿಸಿದಂತಾಗುತ್ತದೆ .
ವಿಜ್ಞಾನ ಮೇಳ:
ಒಂದು ಶಾಲೆಯು 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದಿದ್ದರೆ, ಅಂಥ ಶಾಲೆಯಲ್ಲಿ ವಿಜ್ಞಾನ ಮೇಳಗಳನ್ನೂ ಸಹ ಆಯೋಜಿಸಲಾಗಿದೆ. ಮೇಳದಲ್ಲಿ ಆಯ್ದ ಮಕ್ಕಳಿಗೆ ವಿಜ್ಞಾನ ಬೋಧಿಸಲಾಗುವುದು. ಇದರಿಂದ ಕಲಿತ ಮಕ್ಕಳು ಇತರ ಮಕ್ಕಳಿಗೆ ವಿಜ್ಞಾನ ವಿಷಯಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ನಗರದ ಎಂಪ್ರೆಸ್ ಶಾಲೆ, ದೇವರಾಯಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾ ಕಾಲೇಜಿನಲ್ಲಿ ವಿಜ್ಞಾನ ಮೇಳವನ್ನು ಹಮ್ಮಿಕೊಂಡು ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲಾಗಿದೆ.
ಮೊದಲ ಹಂತದಲ್ಲಿ 70 ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ 2ನೇ ಹಂತದಲ್ಲಿ ಅನುದಾನಿತ ಶಾಲೆಗಳಿಗೂ ವಿಸ್ತರಿಸುವ ಆಶಯ ಹೊಂದಲಾಗಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ. ಅಜಯ್ ತಿಳಿಸಿದ್ದಾರೆ.