ಲಾಟರಿ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ

 ತುಮಕೂರು :

      ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನವಾಗುವ ವಿವಿಧ ಯೋಜನೆಗಳಡಿ ನೀಡುವ ಸಾಲ-ಸಹಾಯಧನ ಸೌಲಭ್ಯಕ್ಕಾಗಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ , ಲಿಂಗತ್ವ ಅಲ್ಪಸಂಖ್ಯಾತರ ಫಲಾನುಭವಿಗಳ ಆಯ್ಕೆ ಸಮಿತಿ, ಧನಶ್ರೀ ಫಲಾನುಭವಿಗಳ ಆಯ್ಕೆ ಸಮಿತಿ ಹಾಗೂ ದಮನಿತ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಅವರು ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದರು.
ಆಯ್ಕೆ ಪ್ರಕ್ರಿಯೆ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪಾರದರ್ಶಕತೆ ಇರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ವಿವರ/ದಾಖಲೆಗಳನ್ನು ಡಾಟಾ ಬೇಸ್‍ನಲ್ಲಿ ದಾಖಲಿಸಬೇಕು. ಡಾಟಾ ಬೇಸ್‍ನಲ್ಲಿ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತಿತರ ವಿವರಗಳನ್ನು ದಾಖಲಿಸುವುದರಿಂದ ಫಲಾನುಭವಿಗಳು ಪುನರಾವರ್ತಿತರಾಗುವುದಿಲ್ಲ. ಇಲ್ಲದಿದ್ದರೆ ಯೋಜನೆಯ ಪ್ರಯೋಜನ ಪಡೆದ ಫಲಾನುಭವಿಗಳೇ ಮತ್ತೊಮ್ಮೆ ಪಡೆಯುವ ಸಾಧ್ಯತೆಯಿರುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಜಾಹ್ನವಿ ಎಸ್. ಮಾತನಾಡಿ, ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು ಹಾಗೂ ಧನಶ್ರೀ ಫಲಾನುಭವಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ 50,000 ರೂ.ಗಳ ಸಾಲ-ಸಹಾಯಧನ ಸೌಲಭ್ಯ ನೀಡಲಾಗುವುದು. ಜಿಲ್ಲೆಯಲ್ಲಿ ಸಾಲ ಸೌಲಭ್ಯಕ್ಕಾಗಿ ಲಿಂಗತ್ವ ಅಲ್ಪಸಂಖ್ಯಾತರಿಂದ 26, ದಮನಿತ ಮಹಿಳೆಯರಿಂದ 65, ಧನಶ್ರೀ ಫಲಾನುಭವಿಗಳಿಂದ 27 ಅರ್ಜಿಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.

ಸಹಬಾಳ್ವೆ ಸಂಘದ ಅಧ್ಯಕ್ಷೆ ದೀಪಿಕ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಏಳ್ಗೆಗಾಗಿ ಶ್ರಮಿಸುತ್ತಿರುವ ಸಹಬಾಳ್ವೆ ಸಂಘದ ಚಟುವಟಿಕೆಗಳನ್ನು ನಡೆಸಲು ಕಛೇರಿ ಕಟ್ಟಡ ಅಗತ್ಯವಿದ್ದು, ನಿವೇಶನ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

      ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಮಕ್ಕಳ ರಕ್ಷಣಾ ಘಟಕದ ವಾಸಂತಿ ಉಪ್ಪಾರ್, ವಿವಿಧ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮತ್ತಿತರರು ಹಾಜರಿದ್ದರು.

(Visited 4 times, 1 visits today)

Related posts

Leave a Comment