ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪ : 4 ವರ್ಷ ಸಜೆ

 ತುಮಕೂರು  :

     ತಮ್ಮ ಸೇವಾ ಅವಧಿಯಲ್ಲಿ ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ತುಮಕೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿವೈಎಸ್‍ಪಿ ಟಿ.ಆರ್.ಕೃಷ್ಣಮೂರ್ತಿ ಅವರಿಗೆ ಗೌರವಾನ್ವಿತ 7ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ್ ಅವರು ಮಾರ್ಚ್ 20ರಂದು 4 ವರ್ಷ ಸಾದಾ ಸಜೆ ಮತ್ತು 17 ಲಕ್ಷ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

     ಆರೋಪಿ ಡಿವೈಎಸ್‍ಪಿ ಟಿ.ಆರ್.ಕೃಷ್ಣಮೂರ್ತಿ ಅವರು ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಯನ್ನು ಹೊಂದಿರುವ ಬಗ್ಗೆ 2008ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ತನಿಖೆ ಕೈಗೊಂಡು ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು.

      ಆರೋಪಿ ಕೃಷ್ಣಮೂರ್ತಿ ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹೊಂದಿರುವುದು ದೀರ್ಘಕಾಲದ ವಿಚಾರಣೆಯಿಂದ ಸಾಬೀತಾಗಿರುವುದರಿಂದ ಆರೋಪಿತನಿಗೆ ಕಲಂ 248(2) ಸಿಆರ್‍ಪಿಸಿ ಅಡಿ 4 ವರ್ಷಗಳ ಸಾದಾ ಸಜೆ ಮತ್ತು 17 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 1 ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ.

      ತುಮಕೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮೇಗಣ್ಣನವರ್ ಈ ಪ್ರಕರಣದ ತನಿಖೆ ಕೈಗೊಂಡು, ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಪಿ.ಪ್ರಕಾಶ್ ವಾದ ಮಂಡಿಸಿರುತ್ತಾರೆ.

 

(Visited 4 times, 1 visits today)

Related posts

Leave a Comment