ಗ್ರಾಪಂ 15ನೇ ಹಣಕಾಸು ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ಬಳಸಿ : ಸಿಇಓ

ತುಮಕೂರು:

ಬೇಸಿಗೆ ಸಮೀಪಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿಗಳು 15ನೇ ಹಣಕಾಸಿನ ಶೇ.25ರಷ್ಟು ಅನುದಾನವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

     ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಮಿಷನ್‍ನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ರಾಮ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಅಂತಹ ಪಂಚಾಯತಿಗಳು 15ನೇ ಹಣಕಾಸು ಯೋಜನೆಯ ಶೇಕಡಾ 25%ರಷ್ಟು ಅನುದಾನವನ್ನು ಕುಡಿಯುವ ನೀರು ಪೂರೈಕೆಗೆ ವಿನಿಯೋಗಿಸಬೇಕೇಂದು ಇಓ ಮತ್ತು ಪಿಡಿಓಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.

      ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಮೂರು ಜಿಲ್ಲೆಗಳ ಸಮನ್ವಯದಿಂದ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಬಂದಿರುವ ಅನುದಾನವನ್ನು ಸಮಪರ್ಕವಾಗಿ ಖರ್ಚು ಮಾಡಬೇಕು, ಜಲ ಜೀವನ ಮಿಷನ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನಕ್ಕೆ ಟೋಟಲ್ ಸ್ಟೇಷನ್ ಸರ್ವೆ ಆಗಬೇಕು ಇದಕ್ಕೆ ಸೂಕ್ತ ಯೋಜನೆ ರೂಪಿಸಬೇಕೆಂದು ಪಿಆರ್‍ಇಡಿ ಇಇ ನೀರು ಸರಬರಾಜು ಮುತ್ತಪ್ಪ ಅವರಿಗೆ ನಿರ್ದೇಶನ ನೀಡಿದರು. ಬೇಸಿಗೆ ಸಮೀಪಿಸುತ್ತಿರುವುದರಿಂದ ಏಪ್ರೀಲ್- ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ನೇಮಿಸಿರುವ ನೋಡೆಲ್ ಅಧಿಕಾರಿಗಳು ತಾಲ್ಲೂಕಿನ ಇಓ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ಜಿಲ್ಲಾ ಕಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಡಿ.ಡಿ.ಪಿ.ಐ ನಂಜಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ಪಿ.ಆರ್.ಇಡಿ ಇಇ ರವೀಶ್, ಡಿಸಿಎಫ್ ನಾಗರಾಜ್, ಸಮಿತಿಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 5 times, 1 visits today)

Related posts

Leave a Comment