ತುಮಕೂರು : ಸಾರಿಗೆ ನೌಕರರ ಮುಷ್ಕರ : ಪ್ರಯಾಣಿಕ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

 ತುಮಕೂರು :

       ಕೆಸ್ಸಾರ್ಟಿಸಿ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ಜಿಲ್ಲಾಡಳಿದಿಂದ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಹಾಗೂ ಇನ್ನಿತರ ಪರ್ಯಾಯ ವ್ಯವಸ್ಥೆಯೊಂದಿಗೆ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಖಾಸಗಿ ಬಸ್ ಮಾಲೀಕರು ಹಾಗೂ ಮ್ಯಾಕ್ಸಿ ಕ್ಯಾಬ್ ಇನ್ನಿತರ ವಾಹನಗಳ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

      ಜಿಲ್ಲೆಯಲ್ಲಿ ಕೆಸ್ಸಾರ್ಟಿಸಿ ಸಂಸ್ಥೆಯ 610 ಬಸ್‍ಗಳ ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದವು ಅಲ್ಲದೇ ಜಲ್ಲೆಯಲ್ಲಿ 485 ಪರವಾನಗಿ ಇರುವ ಖಾಸಗಿ ಬಸ್‍ಗಳು ಸಂಚಾರ ನಡೆಸುತ್ತಿವೆ. ಈಗಾಗಿ ಜಿಲ್ಲೆಯೊಳಗಡೆ ಸ್ಥಳೀಯವಾಗಿ ಪ್ರಯಾಣಿಕರ ಸಾರಿಗೆ ವ್ಯತ್ಯಯಲ್ಲಿ ಉಂಟಾಗುವುದಿಲ್ಲ. ಆದರೆ ತುಮಕೂರಿನಿಂದ ಬೆಂಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತಿತರ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದರು.

ಈ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗದಂತೆ ಜಿಲ್ಲೆಯಲ್ಲಿರುವ ಉತ್ತಮ ಗುಣಮಟ್ಟದ 85 ಸಿಸಿ ಬಸ್‍ಗಳನ್ನು ಕೆಸ್ಸಾರ್ಟಿಸಿ ಬಸ್ ನಿಲ್ದಾಣಗಳಿಂದ ಸಂಚಾರ ಸೌಲಭ್ಯ ಒದಗಿಸುವಂತೆ ಖಾಸಗಿ ಬಸ್ ಮಾಲೀಕರಿಗೆ ಸೂಚನೆ ನೀಡಿದರು. ಇದಕ್ಕಾಗಿ ವಿಶೇಷ ಪರವಾನಗಿಯನ್ನು ಸಾರಿಗೆ ಅಧಿಕಾರಿಗಳು ವಿತರಿಸಲಿದ್ದು, ಆ ಪರವಾನಗಿಯನ್ನು ಬಸ್ ಮೇಲೆ ಅಂಟಿಸುವಂತೆ ಅವರು ಹೇಳಿದರು.

        ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕೆಸ್ಸಾರ್ಟಿಸಿ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಖಾಸಗಿ ಬಸ್‍ಗಳನ್ನ ಓಡಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಹೊರೆಯಾಗದಂತೆ ಇಲಾಖೆ ನಿಗಧಿಪಡಿಸಿರುವ ದರದಲ್ಲಿ ಬಸ್ ಓಡಿಸಬೇಕು. ನಿಗಧಿತ ಸಂಖ್ಯೆಗಿಂತ ಪ್ರಯಾಣಿಕರನ್ನು ಬಸ್‍ಗಳಲ್ಲಿ ತುಂಬುವಂತಿಲ್ಲ ಒಂದು ವೇಳೆ ಮೋಟಾರು ಕಾಯ್ದೆ ಉಲ್ಲಂಘಿಸಿದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ವಂಶಿಕೃಷ್ಣ ಮಾತನಾಡಿ, ಯಾವುದೇ ಭಯವಿಲ್ಲದೇ ಖಾಸಗಿ ಬಸ್ ಮಾಲೀಕರು ಬಸ್‍ಗಳನ್ನು ಓಡಿಸಬಹುದು. ಇದಕ್ಕೆ ಇಲಾಖೆಯಿಂದ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ತುರ್ತು ಸಂದರ್ಭಕ್ಕಾಗಿ ಸ್ಥಳೀಯ ಪೊಲೀಸ್ ವ್ಯವಸ್ಥೆಯನ್ನು ನಿಯೋಜಿಸಿದ್ದು, ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.

      ಆರ್‍ಟಿಓ ರಾಜು ಅವರು ಮಾತನಾಡಿ, ಈಗಾಗಲೇ ಸಾರಿಗೆ ನೌಕರರ ಮುಷ್ಕರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್‍ಗಳು, ಮ್ಯಾಕ್ಸಿಕ್ಯಾಬ್, ಶಾಲಾ ವಾಹನ ಇನ್ನಿತರ ವಾಹನಗಳಿಗೆ ವಿಶೇಷ ಪರವಾನಗಿ ನೀಡಿ ಓಡಿಸಲು ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಈ ರೀತಿಯ ವಾಹನಗಳು ಲಭ್ಯವಿದೆ ಎಂದು ಸಭೆಗೆ ತಿಳಿಸಿದರು.

ಬಸ್‍ಗಳಿಗೆ ಭದ್ರತೆ:-

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳನ್ನು ರಸ್ತೆಗಿಳಿಸುತ್ತಿದ್ದು, ಹೊರ ಜಿಲ್ಲೆಗೆ ತೆರಳುವ ಈ ಬಸ್‍ಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಗುವುದು. ಅಲ್ಲದೇ ಯಾವುದೇ ಘಟನೆ ಸಂಭವಿಸುವ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸುವಂತೆ ಬಸ್ ಮಾಲೀಕರಿಗೆ ಸೂಚಿಸಿದ ಅವರು, ಪೊಲೀಸ್ ಅಧಿಕಾರಿ/ಠಾಣೆಗಳ ಸಂಪರ್ಕ ಸಂಖ್ಯೆಗಳನ್ನು ನೀಡಲಾಗುವುದು ಎಂದರು.

  144 ಜಾರಿ:

      ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕೆಸ್ಸಾರ್ಟಿಸಿ ಘಟಕಗಳು ಹಾಗೂ ಬಸ್ ನಿಲ್ದಾಣಗಳ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಮೆರವಣಿಗೆ, ಮುಷ್ಕರ, ಪ್ರತಿಭಟನೆಯಂತಹ ಚಟುವಟಿಕೆಗೆ ಮಾತ್ರ ಅನ್ವಯವಾಗುವಂತೆ(ಏಪ್ರಿಲ್ 6 ಮಧ್ಯರಾತ್ರಿ 12 ಗಂಟೆಯಿಂದ) ಕಲಂ 144 ನಿಷೇಧಾಜ್ಞೆಯನ್ನು ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ. ಈ ನಿಷೇಧಾಜ್ಞೆ ಅವಧಿಯಲ್ಲಿ 5 ಜನ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದು, ಇತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಯಾವುದೇ ಸ್ಪೋಟಕ ವಸ್ತುಗಳನ್ನು ಮತ್ತು ಮಾರಾಕಾಸ್ತ್ರಗಳನ್ನು ಕೊಂಡ್ಯುವುದು. ಹಿಡಿದುಕೊಂಡು ಓಡಾಡುವುದಾಗಲಿ ನಿಷೇಧಿಸಿದೆ.
ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆಯನ್ನು ಮಾಡುವಂತಿಲ್ಲ. ಈ ಆದೇಶವು ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಸ್ಸಾರ್ಟಿಸಿ ವಿಭಾಗೀಯ ಕಚೇರಿಯು ಸಮನ್ವಯಕ್ಕಾಗಿ ತುಮಕೂರಿನ ಸಹಾಯಕ ಸಂಚಾರ ಅಧೀಕ್ಷಕ-7022029983 ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕ-7760990911 ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಖಾಸಗಿ ಬಸ್ ಮಾಲೀಕರು/ಪ್ರಯಾಣಿಕರು ಇವರನ್ನು ಸಂಪರ್ಕಿಸಬಹುದಾಗಿದೆ.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ವಿಭಾಗೀಯ ಸಂಚಾರ ಅಧಿಕಾರಿ ಫಕ್ರುದ್ದೀನ್, ಖಾಸಗಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್ ಮಾಲೀಕರು, ಪಧಾಧಿಕಾರಿಗಳು ಸೇರಿದಂತೆ ಮತ್ತಿತರು ಹಾಜರಿದ್ದರು.

 

(Visited 2 times, 1 visits today)

Related posts

Leave a Comment