ತೊಡಕುಗಾಗಿ ಮಾಂಸ ಪ್ರಿಯರ ನೂಕು-ನುಗ್ಗಲು : ಏರಿಕೆಯಾದ ಮಾಂಸದ ಬೆಲೆ

ಹುಳಿಯಾರು:

     ಬೆಳಕು ಹರಿಯುವ ಮುನ್ನವೇ ಬುಧವಾರ ಮಾಂಸದ ಅಂಗಡಿಗಳ ಮುಂದೆ ಜನ ಜಾತ್ರೆ ಪ್ರಾರಂಭವಾಗಿತ್ತು. ಕೈಯಲ್ಲಿ ಬ್ಯಾಗ್ ಹಿಡಿದ ಮಾಂಸ ಪ್ರಿಯರು ಯುಗಾದಿ ಹಬ್ಬದ ವರ್ಷ ತೊಡಕು ಆಚರಣೆಗೆ ಮಾಂಸ ಖರೀದಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು.

      ಮಾಂಸಾಹಾರಿ ಪ್ರೇಮಿಗಳು ಯುಗಾದಿಗಿಂತ ಯುಗಾದಿ ಮಾರನೆಯ ದಿನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತ ಬಂದಿದ್ದು ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಾಗಾಗಿ ಹಬ್ಬದ ವರ್ಷ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ವಿವಿಧ ಮಾಂಸಾಹಾರಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಜರಿಯಾಗಿ ನಡೆಯಿತು.

     ಪಟ್ಟಣದ ಪ್ರವಾಸಿಮಂದಿರದ ರಸ್ತೆ, ಟಿ.ಎಸ್.ಹಳ್ಳಿ ರಸ್ತೆ, ಹೊಸದುರ್ಗ ರಸ್ತೆ ಹಾಗೂ ರಾಮಗೋಪಾಲ್ ಸರ್ಕಲ್‍ನಲ್ಲಿ ಕೋಳಿ ಅಂಗಡಿಗಳಲ್ಲಿ, ಮಸೀದಿ ರಸ್ತೆ, ಬನಶಂಕರಮ್ಮನ ದೇವಸ್ಥಾನ ರಸ್ತೆಗಳಲ್ಲಿನ ಮಾಂಸದ ಅಂಗಡಿಗಳ ಮುಂದೆ ಜಾತ್ರಾ ವಾತಾವರಣ ಉಂಟಾಗಿತ್ತು. ಹಳ್ಳಿಗಳಲ್ಲಿನ ಕೋಳಿ ಅಂಗಡಿಗಳಲ್ಲಿ ಬೆಳಗ್ಗೆ 9 ಗಂಟೆಗೆ ಕೋಳಿಗಳೆಲ್ಲವೂ ಖಾಲಿಯಾಗಿತ್ತು. ಪರಿಣಾಮ ಕುರಿ, ಕೋಳಿ ಕೊಳ್ಳಲು ಅಕ್ಕ-ಪಕ್ಕದ ಹಳ್ಳಿಗಳ ಜನ ಪಟ್ಟಣಕ್ಕೆ ಬಂದು ಮಾಂಸ ಖರೀದಿಗೆ ಮುಗಿ ಬಿದ್ದಿದ್ದರು. ಕೋಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದಿದ್ದರಿಂದ ಮಾಮೂಲಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಯಿತು. ಹಳ್ಳಿಗಳಿಂದ ಬಂದ ರೈತರು ಮೂರ್ನಾಲ್ಕು ಕೋಳಿ ನೇತು ಹಾಕಿಕೊಂಡು ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಗತ್ಯವಾದ ಕೊತ್ತಂಬರಿ ಸೊಪ್ಪು, ಪುದೀನ, ಹಸಿ ಶುಂಠಿ, ನಿಂಬೆ ಹಣ್ಣು ಮಾರಾಟವೂ ಜೋರಾಗಿ ನಡೆಯಿತು. ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೇರಿತ್ತು. ಚಿಕ್ಕ ಗಾತ್ರದ ಸೊಪ್ಪಿನ ಕಟ್ಟು 15 ರಿಂದ 20 ರವರೆಗೆ ಮಾರಾಟವಾಯಿತು. ಕುರಿ, ಮೇಕೆ, ಮೀನು, ಹಂದಿ ಮಾಂಸದ ವ್ಯಾಪಾರವೂ ಭರ್ಜರಿಯಾಗಿ ನಡೆಯಿತ್ತಲ್ಲದೆ ಬೆಲೆಯಲ್ಲಿ ಗಣನೀಯ ಏರಿಕೆ ಉಂಟಾಗಿತ್ತು.

 

(Visited 3 times, 1 visits today)

Related posts

Leave a Comment