ತುಮಕೂರು : ಕೋವಿಡ್-19 ನಿಯಂತ್ರಣ : ಉಸ್ತುವಾರಿ ಸಚಿವರಿಂದ ಪರಿಶೀಲನೆ

ತುಮಕೂರು :

        ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಕ್ಷೇತ್ರಗಳ ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿದರು.

       ತಾಲೂಕುಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ, ಆಮ್ಲಜನಕ ಮತ್ತು ರೆಮಿಡಿಸಿವರ್ ಸಮರ್ಪಕವಾಗಿ ಲಭ್ಯವಾಗುತ್ತಿರುವ ಮತ್ತು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಹಳ್ಳಿಗಳಲ್ಲಿ ಕೋವಿಡ್ ವ್ಯಾಪಕವಾಗುವುದಕ್ಕೆ ಕಡಿವಾಣ ಹಾಕಬೇಕು. ಹಾಗಾಗಿ ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್‍ಗೆ ಸ್ಥಳಾಂತರಿಸಬೇಕು. ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರ ಮನೆಯವರ ಸ್ವಾಬ್ ಸಂಗ್ರಹ ಮಾಡಿ ವರದಿ ಬರುವವರೆಗೂ ಅವರನ್ನು ಕ್ವಾರಂಟೈನ್ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರ್ ಟಿಪಿಸಿಆರ್ ವರದಿ ಇಲ್ಲದೇ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇತರೆ ಕಾಯಿಲೆಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಆಸ್ಪತ್ರೆಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ತಾಲೂಕು ತಹಸೀಲ್ದಾರ್‍ಗಳಿಗೆ ನಿರ್ದೇಶಿಸಿದರು.

        ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಆಕ್ಸಿಜನ್ ಮತ್ತು ರೆಮಿಡಿಸಿವರ್ ಕೊರತೆಯಾಗದಂತೆ ಸಮರ್ಕವಾಗಿ ತಾಲೂಕಿಗೆ ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಶಿರಾ ಶಾಸಕ ಡಾ.ರಾಜೇಶ್ ಗೌಡ ಮಾತನಾಡಿ, ಆರ್‍ಟಿಪಿಸಿಆರ್ ವರದಿ ತಡವಾಗಿ ಬರುತ್ತಿದ್ದು ಇದರಿಂದ ಸೋಂಕಿತರು ವರದಿ ಬರುವಷ್ಟರಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ವರದಿ ವಿಳಂಬವಾಗುತ್ತಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, 24 ಗಂಟೆಯೊಳಗೆ ವರದಿ ಬರುವಂತೆ ಕ್ರಮ ಕೈಗೊಳ್ಳಲಾಗಿದೆ. ತುಮಕೂರು ಹೊರತುಪಡಿಸಿದರೆ ಶಿರಾ ತಾಲೂಕಿನಲ್ಲಿಯೇ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ನಿಯಂತ್ರಣಕ್ಕೆ ಹೆಚ್ಚು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಿಪಟೂರು ಶಾಸಕ ಬಿ.ಸಿ. ನಾಗೇಶ್ ಮಾತನಾಡಿ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಆಕ್ಸಿಜನ್ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಹಾಸಿಗೆ ವ್ಯವಸ್ಥೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ತಿಪಟೂರು ತಾಲೂಕಿಗೆ ಹೆಚ್ಚುವರಿ 50 ಹಾಸಿಗೆಗಳ ವ್ಯವಸ್ಥೆ ಮಾಡುವ ಬಗ್ಗೆ ಮನವಿ ಮಾಡಲಾಗಿತ್ತು. ಈವರೆಗೂ ಹಾಸಿಗೆಗಳ ವ್ಯವಸ್ಥೆ ಆಗಿಲ್ಲ ಎಂದು ಪ್ರಶ್ನಿಸಿದಾಗ, ಸಚಿವರು ಮಾತನಾಡಿ, ತುಮಕೂರು, ತಿಪಟೂರು, ಶಿರಾ ತಾಲೂಕಿನ ಆಸ್ಪತ್ರೆಗಳಿಗೆ 50 ಹಾಸಿಗೆಗಳ ವ್ಯವಸ್ಥೆ ಮಾಡಲು ತೀರ್ಮಾನ ಮಾಡಲಾಗಿದ್ದು, 50 ಹಾಸಿಗೆಗಳಿಗೂ ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾದಾಗ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಗುಬ್ಬಿ ತಾಲೂಕಿನಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಸೋಂಕಿತರನ್ನು ರೆಫರ್ ಮಾಡುವುದನ್ನು ಕಡಿಮೆ ಮಾಡಬೇಕು. ಇತ್ತೀಚೆಗೆ ತಾಲೂಕಿನಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದೇ ವೇಳೆ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಗುಬ್ಬಿ ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ಕಡೆ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ, ಸೋಂಕಿತರನ್ನು ಕೋವಿಡ್ ಕೇರ್‍ಗೆ ಸ್ಥಳಾಂತರಿಸಬೇಕು. ಹೋಬಳಿವಾರು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವುದು ಉತ್ತಮವೆಂದು ಸಲಹೆ ನೀಡಿದಾಗ ಪ್ರತಿಕ್ರಿಯಿಸಿದ ಸಚಿವರು ಮೊದಲು ಹೆಚ್ಚು ಪ್ರಕರಣಗಳಿರುವ ಚೇಳೂರು ಮತ್ತು ನಿಟ್ಟೂರಿನಲ್ಲಿ ಕೋವಿಡ್ ಕೇರ್ ಸ್ಥಾಪಿಸಿ ಸೋಂಕಿತರನ್ನು ಸ್ಥಳಾಂತರಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸೋಂಕಿತರು ಗಂಭೀರ ಸ್ಥಿತಿಗೆ ತಲುಪುತ್ತಿರುವಾಗ ಮಾತ್ರ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ರೆಫರ್ ಮಾಡಬೇಕು. ಅಲ್ಲಿವರೆಗೂ ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಎಲ್ಲಾ ಆಕ್ಸಿಜನ್ ಲೈನ್‍ಗಳನ್ನು ಸಮರ್ಪಕವಾಗಿ ಪರೀಕ್ಷೆ ಮಾಡಬೇಕು. ಆಕ್ಸಿಜನ್ ಖಾಲಿಯಾಗುವವರೆಗೂ ಕಾಯಬಾರದು. 25% ಖಾಲಿಯಾದ ತಕ್ಷಣ ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಅನಗತ್ಯವಾಗಿ ಆಕ್ಸಿಜನ್ ಬಳಕೆ ಮಾಡಬಾರದು. ಗೈಡ್‍ಲೈನ್ ನಂತೆಯೇ ಸೋಂಕಿತರಿಗೆ ಆಕ್ಸಿಜನ್ ಮತ್ತು ರೆಮಿಡಿಸಿವರ್ ಕೊಡಬೇಕು. ಅನಗತ್ಯವಾಗಿ ಆಕ್ಸಿಜನ್ ಕೊರತೆಯಾಗಿ ಸಮಸ್ಯೆ ಉಂಟಾಗಿ ದೂರುಗಳು ಕೇಳಿಬಂದರೆ ನಿರ್ದಾಕ್ಷಿಣ್ಯವಾಗಿ ತಾಲೂಕು ಕಾರ್ಯಪಡೆಯನ್ನೇ ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

 

(Visited 6 times, 1 visits today)

Related posts

Leave a Comment