ತುಮಕೂರು : ವಾರದ ಸಂತೆಗಳಿಗೆ ನಿರ್ಬಂಧನೆ!!

ತುಮಕೂರು:

       ಕೋವಿಡ್ ಎರಡನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಜನಸಂದಣಿ, ನೂಕುನುಗ್ಗಲು ತಪ್ಪಿಸಲು ಮೇ 5 ರಿಂದ ಅನ್ವಯವಾಗುವಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇ ಶಿಸಿದ್ದಾರೆ.

      ಸಂತೆಗಳ ಬದಲಿಗೆ ಪ್ರತಿದಿನ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಪ್‍ಕಾಮ್ಸ್, ಎಲ್ಲಾ ರೀತಿಯ ಹಾಲಿನ ಬೂತ್‍ಗಳು, ತಳ್ಳುವ ಗಾಡಿ ಮೂಲಕ ಹಣ್ಣು ತರಕಾರಿಗಳನ್ನು ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಮಾರಾಟ ಮಾಡಲು ಸೂಚಿಸಿದ್ದಾರೆ. ಅಲ್ಲದೆ, ಕೊರೋನಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಎಪಿಎಂಸಿ ಮತ್ತು ದಿನಸಿ ಅಂಗಡಿಗಳನ್ನು ಪ್ರತಿ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ

ಕಳಪೆ ಗುಣಮಟ್ಟದ ವಸ್ತುಗಳ ಮಾರಾಟಗಾರರ ವಿರುದ್ಧ ಕ್ರಮ:

      ಜನತಾ ಕಫ್ರ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

      ಜಿಲ್ಲೆಯಲ್ಲಿ ಮೇ 12ರವರೆಗೆ ಜನತಾ ಕಫ್ರ್ಯೂ ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ನಿಗಧಿತ ಬೆಲೆ ಮತ್ತು ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಬೇಕು. ಕೃತಕ ಅಭಾವ ಸೃಷ್ಠಿಸಿ ಬೆಲೆಯಲ್ಲಿ ಹೆಚ್ಚಳ ಮಾಡುವುದು ಮತ್ತು ಗುಣಮಟ್ಟದ ವಸ್ತುಗಳನ್ನು ವಿತರಣೆ ಮಾಡದಿದ್ದಲ್ಲಿ ಕರ್ನಾಟಕ ಅಗತ್ಯ ವಸ್ತುಗಳ(ಲೆಕ್ಕಪತ್ರ ನಿರ್ವಹಣೆ ಹಾಗೂ ದರ ಪ್ರದರ್ಶನ) ಆದೇಶ 1981 ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆದೇಶ 2006ರ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಯಲ್ಲಿ ನಾನಾ ವಸ್ತುಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯ ದೂರವಾಣಿ ಸಂಖ್ಯೆ 821711452ಕ್ಕೆ ಕಛೇರಿ ಸಮಯದಲ್ಲಿ ದೂರು ನೀಡಬಹುದಾಗಿದೆ. ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿದ ಎಂಆರ್‍ಪಿ ದರದಲ್ಲಿ ಲಭ್ಯವಿದ್ದು, ಅದರ ಮೇಲೆ ತಿಳಿಸಿದ ದರಕ್ಕಿಂತ ಯಾರಾದರೂ ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಲ್ಲಿ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿಯ ಆಹಾರ ಶಾಖೆಯ ದೂರವಾಣಿ ಸಂಖ್ಯೆ 0816-2278348ಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

(Visited 5 times, 1 visits today)

Related posts

Leave a Comment