ತುಮಕೂರು : ವಾರದಲ್ಲಿ ಮೂರು ದಿನ ಅಂಗಡಿ ತೆರೆಯಲು ಮನವಿ

ತುಮಕೂರು:

      ನಗರದ 26ನೇ ವಾರ್ಡಿನ ಕೋವಿಡ್ ನಿರ್ವಹಣಾ ಸಮಿತಿ ಹಾಗೂ ವಾರ್ಡಿನ ವರ್ತಕರು ಸರಕಾರದ ವಿಧಿಸಿರುವ ಲಾಕ್‍ಡೌನ್ ಮುಗಿಯುವವರೆಗೂ ವಾರದಲ್ಲಿ ಮೂರು ದಿನ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6-10ರವರೆಗೆ ಮಾತ್ರ ತೆರೆದಿರಲು ನಿರ್ಧರಿಸಿದ್ದು, ಉಳಿದ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್‍ಗೆ ಅನುಮತಿ ಕೋರಿ ಇಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

      ನಗರದ ಹೃದಯ ಭಾಗವಾದ ಅಶೋಕ ನಗರ, ಎಸ್.ಎಸ್.ಪುರಂ ಮತ್ತು ಎಸ್‍ಐಟಿ ಬಡಾವಣೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದಲ್ಲದೆ ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರೋಗ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ವರ್ತಕರು ಹಾಗೂ ಕೋವಿಡ್ ನಿರ್ವಹಣಾ ಸಮಿತಿಯ ಸದಸ್ಯರುಗಳು ಚರ್ಚೆ ನಡೆಸಿ, ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಮಾತ್ರ ಬೆಳಗ್ಗೆ 6 ರಿಂದ 10ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆದು ದಿನಸಿ, ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಗುರುವಾರದಿಂದ ಭಾನುವಾರದವರೆಗೆ ಹಾಲಿನ ಭೂತ್‍ಗಳನ್ನು ಹೊರತು ಪಡಿಸಿ ಉಳಿದ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದು, ಕಾರ್ಫೋರೇಟರ್ ಮಲ್ಲಿಕಾರ್ಜುನಯ್ಯ ಅವರ ಮೂಲಕ ಆಯುಕ್ತರಾದ ಶ್ರೀಮತಿ ರೇಣುಕಾ ಅವರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಸಹಕರಿಸುವಂತೆ ವಾಸವಿ ಶಾಲೆಯ ಆವರಣದಲ್ಲಿ ನಡೆದ ಸಾಂಕೇತಿಕ ಸಭೆಯಲ್ಲಿ ಮನವಿ ಸಲ್ಲಿಸಿದರು.

       26ನೇ ವಾರ್ಡಿನ ಕೋವಿಡ್ ನಿರ್ವಹಣಾ ಸಮಿತಿ ಮತ್ತು ವರ್ತಕರು ಮನವಿ ಆಲಿಸಿದ ಆಯುಕ್ತರು ಇದು ಒಂದು ಒಳ್ಳೆಯ ನಿರ್ಧಾರ, ಇಲ್ಲಿನ ವ್ಯಾಪಾರಸ್ಥರು ವ್ಯವಹಾರಿಕ ದೃಷ್ಟಿಯಿಂದ ನೋಡದೆ, ವಾರ್ಡಿನಲ್ಲಿ ಅದರಲ್ಲಿಯೂ ತಮ್ಮ ತಮ್ಮ ಬಡಾವಣೆಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಬೇಕೆಂಬ ಘನ ಉದ್ದೇಶದಿಂದ ಸ್ವಯಂ ಲಾಕ್‍ಡೌನ್‍ಗೆ ಮುಂದಾಗಿರುವುದು ಶ್ಲಾಘನೀಯ ಕೆಲಸ. ಇಲ್ಲಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಗರದೆಲ್ಲೆಡೆ ಇದೇ ರೀತಿಯ ವ್ಯವಸ್ಥೆ ಮುಂದುವರೆಸುವ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

       ನಗರದ 26ನೇ ವಾರ್ಡು ತೆರಿಗೆ ಕಟ್ಟುವುದು, ವ್ಯಾಕ್ಸಿನೇಷನ್, ಸ್ಯಾನಿಟೈಜರ್ ಸೇರಿದಂತೆ ಎಲ್ಲಾ ವಿಚಾರದಲ್ಲಿಯೂ ಮುಂದಿದ್ದರೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ.ಹಾಗಾಗಿ ಒಂದೊಂದು ಬೀದಿಯಲ್ಲಿಯೂ 25-30 ಜನ ಸೋಂಕಿತರಿದ್ದಾರೆ.ಇದು ಮತ್ತಷ್ಟು ಹೆಚ್ಚಾಗಬಾರದು ಎಂಬ ಹಿನ್ನೆಲೆಯಲ್ಲಿ ಇಲ್ಲಿನ ನಾಗರಿಕ ಸಮಿತಿ ತೆಗೆದುಕೊಂಡಿರುವ ನಿರ್ಧಾರ ಉತ್ತಮವಾಗಿದೆ. ಈಗಾಗಲೇ ವಾರ್ಡಿನಲ್ಲಿ ವ್ಯಾಕ್ಸಿನೇಷನ್ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿಯೂ 18 ವರ್ಷ ಮೇಲ್ಪಟ್ಟ, ಅದ್ಯತಾ ವಲಯ ಗಳಿಗೆ ಲಸಿಕೆ ಹಾಕಲಾಗುವುದು. ತಾವುಗಳನ್ನು ಪಡೆಯಬೇಕು ಎಂದು ಶ್ರೀಮತಿ ರೇಣುಕಾ ಸಲಹೆ ನೀಡಿದರು.

     ತುಮಕೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 35 ವಾರ್ಡುಗಳಿಂದ 46 ಜನ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ಮುಂಜಾಗ್ರತಾ ಸಲಕರಣೆಗಳನ್ನು ಮಾತ್ರ ನೀಡಲಾಗಿದೆ. ಪಾಲಿಕೆಯ ಎಲ್ಲಾ ಸದಸ್ಯರು ಹಾಗೂ ಸ್ವಯಂ ಸೇವಕರು, ನೋಡಲ್ ಅಧಿಕಾರಿಗಳ ಪರಿಶ್ರಮದ ಫಲವಾಗಿ ಮೊದಲಿಗೆ 700 ರಿಂದ 900ವರೆಗೆ ಇದ್ದ ಪ್ರಕರಣಗಳು ಈಗ 200ಕ್ಕೂ ಬಂದಿವೆ. ರೆಡ್ ಜ್ಹೋನ್‍ನಿಂದ ಎಲ್ಲೋ ಜ್ಹೋನ್‍ಗೆ ಬಂದಿದ್ದೇವೆ. ಇದೇ ರೀತಿ ನಿಯಂತ್ರಣಕ್ಕೆ ಬಂದರೆ ಶೀಘ್ರದಲ್ಲಿಯೇ ತುಮಕೂರು ನಗರ ಗ್ರೀನ್ ಜ್ಹೋನ್‍ಗೆ ಬರಲಿದೆ ಎಂಬ ವಿಶ್ವಾಸವನ್ನು ಆಯುಕ್ತರು ವ್ಯಕ್ತಪಡಿಸಿದರು.

      26ನೇ ವಾರ್ಡಿನ ಕಾರ್ಪೋರೇಟರ್ ಮಲ್ಲಿಕಾರ್ಜುನಯ್ಯ ಮಾತನಾಡಿ, ಕೋವಿಡ್ ನಿರ್ವಹಣಾ ಸಮಿತಿ ಮತ್ತು ವರ್ತಕರು, ಪಾಲಿಕೆಯೊಂದಿಗೆ ಸಹಕರಿಸಿ, ಪ್ರಕರಣಗಳು ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ವಾರದಲ್ಲಿ ಮೂರು ದಿನ ಅಂಗಡಿ ಮುಂಗಟ್ಟುಗಳನ್ನು ತೆರೆದು, ನಾಲ್ಕು ದಿನಗಳ ಕಾಲ ಸ್ವಯಂ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಜನರ ಆರೋಗ್ಯದ ದೃಷ್ಟಿಯಲ್ಲಿ ಇದು ಒಳ್ಳೆಯ ತೀರ್ಮಾನ ಎಂದ ಅವರು, ವಾರ್ಡಿನಲ್ಲಿ ಪ್ರಕರಣಗಳ ಗಣನೀಯ ಹೆಚ್ಚಳವನ್ನು ಕಡಿಮೆ ಮಾಡುವ ಉದ್ದೇಶದಿಂದ ಈಗಾಗಲೇ ಮೂರು ಬಾರಿ ಸ್ಯಾನಿಟೈಜರ್ ಮಾಡಲಾಗಿದೆ. ಲಸಿಕೆ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆಯುಕ್ತರು ವಾರ್ಡಿನ ಜನರ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ ಎಂದರು. ಈ ವೇಳೆ ವರ್ತಕರಾದ ದಿವ್ಯಪಾಲ್, ಸೋಹನ್‍ಲಾಲ್, ರತನ್, ಗೋವಿಂದ, ರಮೇಶ್, ದರ್ಶನ್, ನಾಗರಾಜು, ಮಧುಸೂಧನ್, ಹೇಮಂತ್, ಅರುಣ್‍ಕುಮಾರ್ ಇದ್ದರು.

(Visited 1 times, 1 visits today)

Related posts

Leave a Comment