ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮವಹಿಸಿ : ಬಿ.ಸಿ.ಪಾಟೀಲ

ತುಮಕೂರು:

     ಮುಂಗಾರು ಹಂಗಾಮಿನ ಕೃಷಿ ಪರೀಕ್ಷೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ರೈತರಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಕ್ರಮ ವಹಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆ ಹಾಗೂ ಪೂರ್ವ ಸಿದ್ಧತೆ ಕುರಿತು ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿತ್ತನೆ ಬೀಜಗಳನ್ನು ವಿತರಿಸುವಾಗ ಗುಣಮಟ್ಟ ಖಾತ್ರಿಪಡಿಸಿಕೊಂಡೇ ರೈತರಿಗೆ ಪೂರೈಸಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು ಎಂದು ನಿರ್ದೇಶಿದರು.

      ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಬೇಕು. ಎಲ್ಲಿಯೂ ರೈತರಿಗೆ ಬೀಜದ ಸಮಸ್ಯೆ ಎದುರಾಗಬಾರದು. ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಬೇಕು. ಬಿತ್ತನೆ ಬೀಜದ ಗ್ರೇಡಿಂಗ್ ನೂತನವಾಗಿರಬೇಕು. ಜೊಳ್ಳು ಬೀಜ ನೀಡಬಾರದು. ರೈತರಿಗೆ ಯಾವುದೇ ಕಾರಣಕ್ಕೂ ನಷ್ಟ ಉಂಟಾಗಬಾರದು ಎಂದು ಶೇಂಗಾ ಬಿತ್ತನೆ ಬೀಜ ಸರಬರಾಜುದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಬಹುಬೆಳೆ ಬೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರಿಗೆ ಉಚಿತವಾಗಿ ದ್ವಿದಳ ಧಾನ್ಯಗಳ 8 ಸಾವಿರ ಕಿಟ್ ನೀಡಿದ್ದು, ಏಕ ಬೆಳೆ ಬೆಳೆಯುವ ರೈತರಿಗೆ ವಿತರಿಸಿ ಸಮಗ್ರ ಕೃಷಿ ಅಳವಡಿಕೆಗೆ ಪ್ರೇರೇಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ, ಕೃಷಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ದಿನವಿಡೀ ತೆರೆಯಬೇಕು. ಯಾವುದಕ್ಕೂ ನಿಬರ್ಂಧ ಹೇರಬಾರದು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಎಣ್ಣೆಕಾಳು ಬೆಳೆ ಕಡಿಮೆಯಾಗಿದೆ. ಎಣ್ಣೆಕಾಳು ಬಿತ್ತನೆ ಬೀಜಕ್ಕೆ ರೈತರನ್ನು ಹೆಚ್ಚು ಪ್ರೇರೇಪಿಸಬೇಕು. ಜೊತೆಗೆ ಬಹುಬೆಳೆಗೆ ಆದ್ಯತೆ ನೀಡಬೇಕು. ವೈಜ್ಞಾನಿಕ ಆಧಾರದ ಮೇಲೆಯೇ ಬೆಳೆಗಳನ್ನು ಬೆಳೆಯುವುದಕ್ಕೆ ಒತ್ತು ಕೊಡಬೇಕು ಎಂದು ನಿರ್ದೇಶಿಸಿದರು.

      ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಶೇ.85ರಷ್ಟು ವಾಡಿಕೆ ಮಳೆಯಾಗಿದೆ. ತುಮಕೂರು ಮಳೆಯಾಶ್ರಿತ ಜಿಲ್ಲೆಯಾಗಿದ್ದು, ಯಾವುದೇ ನೀರಾವರಿ ಮೂಲವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮತ್ತು ಬಿತ್ತನೆ ಕಾರ್ಯ ಆರಂಭವಾಗಿದೆ. ರೈತ ಸಂಪರ್ಕ ಕೇಂದ್ರದಿಂದ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ವಿತರಣೆಗೂ ಸೂಕ್ತ ಕ್ರಮ ವಹಿಸಲಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ಗೊಬ್ಬರ ದಾಸ್ತಾನು ಮಾಡಿಕೊಂಡು ಹಂಚಿಕೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

      ಸಭೆಗೂ ಮುನ್ನ ನಿಧನರಾದ ಮಾಜಿ ಸಚಿವ ಸಿ.ಎಂ.ಉದಾಸಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮೌನಾಚರಣೆ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದರು.

      ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತುಮಕೂರು ಜಿಲ್ಲೆಯಲ್ಲಿ ವಾಸ್ತವದಲ್ಲಿ ಉತ್ತಮ ಮಳೆಯಾಗಿದೆ. ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆಯಾಗದಂತೆ ಬೇಡಿಕೆಗೆ ಅವಶ್ಯಕತೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳಲಾಗಿದೆ. ದಿನಪೂರ್ತಿ ಎಲ್ಲಾ ಕೃಷಿ ಚಟುವಟಿಕೆಗಳು ತೆರೆದಿರುತ್ತವೆ.
ಚೀನಾದಿಂದ ಬೀಜ ವಿತರಣೆ ಮಾಡಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಈವರೆಗೂ ಚೀನಾದಿಂದ ಬೀಜ ವಿತರಣೆ ಸಂಬಂಧ ಯಾವುದೇ ಪ್ರಕರಣ ವರದಿಯಾಗಿಲ್ಲ. ಅಂತೆಯೇ ಸಿರಿ ಧಾನ್ಯ ಬೆಳೆಯಲು ಪ್ರೋತ್ಸಾಹ ಧನವಾಗಿ 10 ಸಾವಿರ ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ 163245.87 ಬಿತ್ತನೆ ಬೀಜ ಹಾಗೂ 1224650 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ತಿಳಿಸಿದರು.

(Visited 2 times, 1 visits today)

Related posts

Leave a Comment