ತುಮಕೂರು ಲೋಕಸಭಾ ಕ್ಷೇತ್ರ : 16 ಲಕ್ಷ ಮತದಾರರು!

 ತುಮಕೂರು :

      ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1608000 ಮತದಾರರು ಇದ್ದು, ಏಪ್ರಿಲ್ 18ರಂದು ನಡೆಯುವ ಚುನಾವಣಾ ಮತದಾನವನ್ನು ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

     ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2209780 ಮತದಾರರಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 803006 ಗಂಡಸರು, 804874 ಮಹಿಳೆಯರು, ಇತರೆ 120 ಒಟ್ಟು 1608000 ಮತದಾರರು ಇದ್ದಾರೆ.

      ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ ಸೇರುವ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 410867 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕುಣಿಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 190913 ಮತದಾರರು ಇದ್ದಾರೆ ಎಂದರು.

     ಈಗಾಗಲೇ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಮಾಡಿಫೈಡ್ ಓಟರ್‍ಸ್ಲಿಪ್‍ಗಳನ್ನು ಮನೆ ಮನೆಗೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 2684 ಮತಗಟ್ಟೆಗಳು ಇದ್ದು, ಈಗಾಗಲೇ ಒಟ್ಟು 12924 ಮತಗಟ್ಟೆ ಸಿಬ್ಬಂದಿಯನ್ನು ವಿಧಾನಸಭಾ ಕ್ಷೇತ್ರವಾರು ನೇಮಿಸಿದ್ದು, ಏಪ್ರಿಲ್ 17ರಂದು ಮತಗಟ್ಟೆ ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.

      ಏಪ್ರಿಲ್ 16ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರ ಅಲ್ಲದವರು ತಂಗುವಂತಿಲ್ಲ. ಅಂತಹವರನ್ನು ಕ್ಷೇತ್ರದಿಂದ ಹೊರಗೆ ಕಳುಹಿಸಲು ಪೊಲೀಸ್, ಅಬಕಾರಿ, ಸಹಾಯಕ ಚುನಾವಣಾಧಿಕಾರಿ ಹಾಗೂ ತಾಲ್ಲೂಕು ತಹಶೀಲ್ದಾರ್‍ಗಳಿಗೆ ಸೂಚನೆ ನೀಡಲಾಗಿದೆ. ವಸತಿ ಗೃಹ, ಹೋಟೆಲ್, ಕಲ್ಯಾಣ ಮಂಟಪ, ಇವುಗಳ ಮೇಲೆ ನಿಗಾವಹಿಸಿ ಕ್ಷೇತ್ರದ ಮತದಾರ ಅಲ್ಲದವರನ್ನು ಪರಿಶೀಲಿಸಿ ಹೊರಗೆ ಕಳುಹಿಸುವಂತೆ ಸೆಕ್ಟರ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

      ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಏಪ್ರಿಲ್ 16ರ ಸಂಜೆ 6 ಗಂಟೆಯಿಂದ ಏಪ್ರಿಲ್ 18ರ ಮಧ್ಯರಾತ್ರಿಯವರಗೆ ಜಿಲ್ಲೆಯಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಿದ್ದು, ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಬಹುದು. ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ತಡೆಗಟ್ಟಲು ಹಾಗೂ ಶಾಂತಿಯುತವಾಗಿ ಮತದಾನವನ್ನು ನಡೆಸಲು 35 ಚೆಕ್‍ಪೋಸ್ಟ್‍ಗಳು, 230 ಸೆಕ್ಟರ್ ಅಧಿಕಾರಿಗಳು, 165 ಸೆಕ್ಟರ್ ಮೊಬೈಲ್‍ಗಳು, 28 ಫ್ಲೈಯಿಂಗ್ ಸ್ವ್ಯಾಡ್‍ಗಳನ್ನು ರಚಿಸಲಾಗಿದ್ದು, ಇವು ಹದ್ದಿನ ಕಣ್ಣು ಇಡಲಿವೆ. ಇದರ ಜೊತೆಯಲ್ಲಿ ಜನರೇ ಚುನಾವಣಾ ಅಕ್ರಮವನ್ನು ಆಯೋಗಕ್ಕೆ ತಿಳಿಸಲು “ಸಿ-ವಿಜಿಲ್” ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ವಿಡಿಯೋ/ಫೋಟೋವನ್ನು ಅಪ್‍ಲೋಡ್ ಮಾಡಬಹುದು. ಕೇವಲ 20 ನಿಮಿಷದಲ್ಲಿ ಕಾರ್ಯಾಚರಣೆಯಲ್ಲಿರುವ ತಂಡಗಳು ಅಕ್ರಮ ನಡೆಯುವ ಸ್ಥಳಕ್ಕೆ ಧಾವಿಸಲಿವೆ. ಇದನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಅಧಿಕಾರಿಗಳ ಮೇಲೆ ಕ್ರಮ :-

      ಕೆಲವೊಂದು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ವಿಚಾರಣೆಗೆ ಆದೇಶಿಸಿದ್ದು, ಅಧಿಕಾರಿಗಳ ಲೋಪವಿದ್ದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದರು.

      ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸುಮಾರು 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 4100 ಪೊಲೀಸ್ ಸಿಬ್ಬಂದಿ, ನಾಲ್ಕು ಕಂಪನಿಗಳ ಆರ್ಮ್‍ಡ್ ಪೊಲೀಸ್, 13 ಕೆಎಸ್‍ಆರ್‍ಪಿ ತುಕಡಿಗಳು ಸೇರಿದಂತೆ 5ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಚುನಾವಣಾ ಮತದಾನಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಈಗಾಗಲೇ ಎಲ್ಲಾಕಡೆ ರೂಟ್‍ಮಾರ್ಕ್ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇಂದಿನಿಂದಲೇ ನಿಷೇಧಾಜ್ಞೆ ಜಾರಿ:-

      ಲೋಕಸಭಾ ಚುನಾವಣೆಯನ್ನು ಮುಕ್ತ, ನಿಷ್ಪಕ್ಷಪಾತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಏಪ್ರಿಲ್ 16ರ ಸಂಜೆ 6 ಗಂಟೆಯಿಂದ 18ರ ಮಧ್ಯ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯ ಸಂಹಿತೆ ಕಲಂ 144ರಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ನಿಷೇಧಾದೇಶವು ಏಪ್ರಿಲ್ 18ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ. ನಿಷೇಧಾವಧಿಯಲ್ಲಿ 5 ಜನರ ಮೇಲ್ಪಟ್ಟು ಗುಂಪುಗಾರಿಕೆ ಮಾಡುವುದು ಹಾಗೂ ಮತ್ತಿತರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಯಾವುದೇ ಸ್ಪೋಟಕ ವಸ್ತುಗಳು/ ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು ಅಥವಾ ಹಿಡಿದುಕೊಂಡು ಓಡಾಡುವಂತಿಲ್ಲ. ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆ ಮಾಡುವಂತಿಲ್ಲ. ಯಾವುದೇ ರೀತಿಯ ಮತೀಯ ಭಾವನೆಗಳನ್ನು ಕೆರಳಿಸುವಂತಹ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುವುದು/ ಘೋಷಣೆ ಕೂಗುವುದು/ ಭಿತ್ತಿಪತ್ರವನ್ನು ಪ್ರಕಟಿಸುವಂತಿಲ್ಲ. ಶಾಂತಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಭಂಗವನ್ನುಂಟು ಮಾಡುವ ಸುಳ್ಳು ವದಂತಿಗಳನ್ನು ಹಬ್ಬಿಸುವಂತಿಲ್ಲ. ಸಾರ್ವಜನಿಕ ಪ್ರಾಣ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗುವ ರೀತಿಯಲ್ಲಿ ವರ್ತಿಸುವಂತಿಲ್ಲ. ಶವ ಸಂಸ್ಕಾರ/ ಮದುವೆ/ ಧಾರ್ಮಿಕ ಕಾರ್ಯ ಹೊರತುಪಡಿಸಿ ಯಾವುದೇ ಸಭೆ/ ಸಮಾರಂಭ, ಮೆರವಣಿಗೆ ಮಾಡುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಮತ್ತಿತರರು ಹಾಜರಿದ್ದರು.

(Visited 9 times, 1 visits today)

Related posts

Leave a Comment