ಕೋವಿಡ್‍ನಿಂದ ಅನಾಥವಾದ ಮಕ್ಕಳ ಭವಿಷ್ಯಕ್ಕೆ ಆದ್ಯತೆ ನೀಡಿ: ಸಚಿವೆ

ತುಮಕೂರು :

     ಕೋವಿಡ್ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿಯೂ ಸಜ್ಜಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ ನೀಡಿದರು.

      ಕೊರೋನಾ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗರೂಕ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಎದುರಾದಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡು ಸಜ್ಜಾಗಿರಬೇಕು ಎಂದು ನಿರ್ದೇಶಿಸಿದರು.

      ಕೋವಿಡ್ ಮೂರನೇ ಅಲೆಗೆ ಹೆಚ್ಚಿನ ಮಕ್ಕಳು ಬಾಧಿತರಾಗುವ ನಿರೀಕ್ಷೆಯಿದ್ದು, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ವ್ಯವಸ್ಥೆ, ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳುವುದರೊಂದಿಗೆ ಶಿಶುತಜ್ಞ ವೈದ್ಯರನ್ನು ನೇಮಕ ಮಾಡಿಕೊಂಡು ವೈದ್ಯಕೀಯ ಸೌಲಭ್ಯ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಾಥ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ಜಿಲ್ಲೆಯಲ್ಲಿ ಕೋವಿಡ್‍ನಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಅನಾಥವಾಗುವ ಅಥವಾ ಒಬ್ಬರು ಪೋಷಕರನ್ನು ಕಳೆದುಕೊಂಡು ಏಕ ಪೋಷಕತ್ವದಲ್ಲಿರುವ ಮಕ್ಕಳಿಗೆ ಪಾಲನಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಂತಹ ಮಕ್ಕಳಿಗಾಗಿ ಸರ್ಕಾರದಿಂದ ಜಾರಿಗೊಳಿಸಿರುವ ಬಾಲ ಸೇವಾ ಯೋಜನೆ, ಮಾಸಾಶನ, ಉಚಿತ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಉನ್ನತ ಶೈಕ್ಷಣಿಕ ದೃಷ್ಟಿಯಿಂದ ಲ್ಯಾಪ್‍ಟಾಪ್ ವಿತರಣೆ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಮಕ್ಕಳು ಅನ್ಯಾಯಕ್ಕೆ ಒಳಗಾಗಬಾರದು ಎಂದು ಸೂಚಿಸಿದರು.
ಮಕ್ಕಳ ಭವಿಷ್ಯ ರೂಪಿಸಲು ಕೊಂಡಿ:
ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ, ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ಇಲಾಖೆಯು ಕೊಂಡಿಯಾಗಿ ಕಾರ್ಯನಿರ್ವಹಿಸಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಹೆಚ್ಚು ಅರಿವು ಮೂಡಿಸಿ: ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿಯೂ ಮಕ್ಕಳು ಕೋವಿಡ್ ಬಾಧಿತರಾಗಿದ್ದು, ಮೂರನೆ ಅಲೆಯ ಕೋವಿಡ್ ನಿಂದ ಮಕ್ಕಳನ್ನು ಮುಕ್ತಗೊಳಿಸಲು ಪೋಷಕರಿಗೆ ಹೆಚ್ಚು ಅರಿವು ಮೂಡಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.
ಮಕ್ಕಳ ಸಂರಕ್ಷಣೆ ಕ್ರಮ: ಸಭೆಯಲ್ಲಿದ್ದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ಸಂರಕ್ಷಣೆಗಾಗಿ ಎಲ್ಲಾ ರೀತಿಯಲ್ಲಿಯೂ ಕ್ರಮ ವಹಿಸಲಾಗಿದೆ. ಚಿಕಿತ್ಸಾ ವ್ಯವಸ್ಥೆಯನ್ನೂ ಸಹ ಎಲ್ಲ ರೀತಿಯಲ್ಲಿಯೂ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹತ್ತು ಸಾವಿರ ಮಕ್ಕಳಿಗೆ ಕೋವಿಡ್: ಮೊದಲನೆ ಅಲೆಯ 2020-21ನೇ ಸಾಲಿನಲ್ಲಿ 2382 ಮಕ್ಕಳಿಗೆ ಅದಾದ ಬಳಿಕ 2021ರ ಏಪ್ರಿಲ್ ನವರೆಗೆ 2386 ಹಾಗೂ 2021ರ ಮೇ ವರೆಗೆ 5273 ಸೇರಿ ಒಟ್ಟು ಎರಡನೇ ಅಲೆಯಲ್ಲಿ 7659 ಹಾಗೂ ಕೋವಿಡ್ ಪ್ರಾರಂಭವಾದಾಗಿನಿಂದ ಈವರೆಗೆ ಒಟ್ಟು 10041 ಮಕ್ಕಳಿಗೆ ಕೋವಿಡ್ ದೃಢವಾಗಿದೆ. ಆದರೆ, ಯಾವುದೇ ಮಗು ಸಾವನ್ನಪ್ಪಿಲ್ಲ. ಬಹುತೇಕ ಎಲ್ಲಾ ಮಕ್ಕಳು ಚೇತರಿಸಿಕೊಂಡಿದ್ದಾರೆ. ಹಾಗೇ ಯಾವುದೇ ಮಗುವಿನಲ್ಲೂ ಬ್ಲಾಕ್ ಫಂಗಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ಒದಗಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜಯರಾಮ್,ಬಿ.ಸಿ.ನಾಗೇಶ್, ಎಂ.ಆರ್. ರಾಜೇಶ್ ಗೌಡ, ತಿಪ್ಪೇಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಅನುರಾಧ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಸ್ವಿರುಲಿನಾ ಚಿಕ್ಕಿ, ಸ್ವಿರುಲಿನಾ ಕಾಳುಗಳನ್ನು ಸಾಂಕೇತಿಕವಾಗಿ ಸಚಿವೆ ಶಶಿಕಲಾ ಜೊಲ್ಲೆ ವಿತರಿಸಿದರು.

(Visited 6 times, 1 visits today)

Related posts