ಬೆಳೆ ನಷ್ಟ ಅಂದಾಜು ಮಾಡಲು ಸಮಿತಿ ರಚಿಸುವಂತೆ ಆಗ್ರಹ

ತುಮಕೂರು:

      ಕೋರೋನ ಸಂಕಷ್ಟದಿಂದ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೆ ಆಗಿರುವ ನಷ್ಟವನ್ನು ಅಂದಾಜು ಮಾಡಲು ಸರಕಾರ ಕೂಡಲೇ ಒಂದು ಸಮಿತಿ ರಚಿಸಬೇಕು, ಕೋವಿಡ್‍ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂಗಳ ಪರಿಹಾರ ವಿತರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕರ್ನಾಟಕ ರೈತ ಸಂಘದ ಮತ್ತು ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

     ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಜಿಲ್ಲೆಯ ವಿವಿಧ ತಾಲೂಕುಗಳ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು, ಸರಕಾರ ರೈತ ವಿರೋಧಿ ನಡೆವಳಿಕೆಗಳ ವಿರುದ್ದ ಘೋಷಣೆ ಕೂಗಿದರು.

ಈ ವೇಳೆ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಎ.ಗೋವಿಂದರಾಜು, ಕೋರೋನ ಲಾಕ್‍ಡೌನ್ ರೈತರು ಸಾವಿರಾರು ಎಕರೆಯಲ್ಲಿ ಬೆಳೆದ ಹಣ್ಣು, ತರಕಾರಿ ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗದ ಪರಿಣಾಮ ಸುಮಾರು 1 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚು ನಷ್ಟ ಉಂಟಾಗಿದೆ.

      ಆದರೆ ಸರಕಾರ ಹೆಕ್ಟೇರ್‍ಗೆ 3500 ರೂ ಭೀಕ್ಷೆಯ ರೀತಿಯ ಪರಿಹಾರ ಘೋಷಿಸಿ, ಅದನ್ನು ಪಡೆಯಲು ಕಚೇರಿಗಳಿಗೆ ಅಲೆಯುವಂತೆ ಮಾಡಿದೆ ಎಂದು ದೂರಿದರು.
ಕೋರೋನ ಎರಡನೇ ಅಲೆಯ ಬಗ್ಗೆ ತಜ್ಞರು ವರದಿಯನ್ನು ನಿರ್ಲಕ್ಷಿಸಿ ಸರಕಾರ ಚುನಾವಣೆಗಳು ಮತ್ತು ಕುಂಬಮೇಳ ನಡೆಸಿದ್ದರ ಪರಿಣಾಮ ಇಂದು ದೇಶದಾದ್ಯಂತೆ ಕೋವಿಡ್‍ಗೆ ಲಕ್ಷಾಂತರ ಬಲಿಯಾದರು. ಇವರೆಲ್ಲರ ಸಾವಿಗೆ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದ ಗೋವಿಂದರಾಜು, ಸರಕಾರಕ್ಕೆ ಕೊಂಚ ಮಾನವೀಯತೆ ಇದ್ದರೂ ಕೋರೋನದಿಂದ ಸಾವನ್ನಪ್ಪಿ ರುವ ಎಲ್ಲಾ ಕಟುಂಬಗಳಿಗೆ ತಲಾ 5 ಲಕ್ಷ ರೂಗಳ ಪರಿಹಾರ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

      ಕೋವಿಡ್‍ನಿಂದ ಜನಸಾಮಾನ್ಯರು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವಾಗ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ನಿರಂತರವಾಗಿ ಇಂಧನ ಬೆಲೆಗಳನ್ನು ಹೆಚ್ಚಳ ಮಾಡಿ, ಜನರನ್ನು ಸಂಕಷ್ಟಕ್ಕೆ ದೂಡಿದೆ. ಇಂಧನ ಬೆಲೆಗಳ ಹೆಚ್ಚಳದಿಂದ ಕೃಷಿಗೆ ಬಳಸುವ, ರಸಗೊಬ್ಬರ, ಔಷಧ, ಕ್ರಿಮಿನಾಶಕ ಹಾಗು ಪರಿಕರಗಳ ಬೆಲೆ ಹೆಚ್ಚಳವಾಗಿ ರೈತರು ಬದುಕುವುದೇ ಕಷ್ಟವಾಗಿದೆ.ಆದ್ದರಿಂದ ಸರಕಾರ ಕೂಡಲೇ ತೈಲ ಬೆಲೆಗಳನ್ನು ಇಳಿಸಬೇಕೆಂಬುದು ರೈತರ ಸಂಘ ಮತ್ತು ಹಸಿರು ಸೇನೆಯ ಒತ್ತಾಯವಾಗಿದೆ ಎಂದು ಗೋವಿಂದರಾಜು ತಿಳಿಸಿದರು.

       ಕೋರೋನ ಮೂರನೇ ಅಲೆ ಬರುತ್ತದೆ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಗ್ರಾಮೀಣ ಭಾಗದಲ್ಲಿ ಕೋವಿಡ್ ಟೆಸ್ಟ್ ವ್ಯಾಪಕಗೊಳಿಸಬೇಕು, ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ. ಅಲ್ಲದೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು.ಕೇಂದ್ರ ಜಾರಿಗೆ ತಂದಿರುವ ರೈತರ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ನೀಡಿರವು ವರದಿ ಅನ್ವಯ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕೆಂಬುದು ರೈತರ ಆಗ್ರಹವಾಗಿದೆ ಎಂದರು.

      ಈ ಸಂಬಂಧ ಮನವಿ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್, ಶ್ರೀನಿವಾಸ್, ಲಕ್ಷ್ಮಣಗೌಡ, ರಂಗಹನುಮಯ್ಯ, ಮಹಮದ್ ಶಬ್ಬೀರ್, ಕೆಂಚಪ್ಪ, ಶಿವರಾಜು, ಕೆ, ಎಸ್.ಜಯಮ್ಮ, ಎ.ಜಿ.ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 6 times, 1 visits today)

Related posts