ರೈಲ್ವೆ ನಿಲ್ದಾಣ ರಸ್ತೆ ದುರಸ್ತಿ, ಕಸವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹ

 ತುಮಕೂರು:

      ನಗರದ 15ನೇ ವಾರ್ಡು ಹಲವು ಸಮಸ್ಯೆಗಳ ಆಗರವಾಗಿದ್ದು,ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಯುಜಿಡಿ ಸಮಸ್ಯೆ ಹಾಗೂ ರಸ್ತೆಗೆ ಡಾಂಬರೀಕರಣ,ಉಪ್ಪಾರಹಳ್ಳಿ ಅಂಡರ್‍ಪಾಸ್ ಬಳಿಯ ಕಸವಿಲೇವಾರಿ ಘಟಕದ ಸ್ಥಳಾಂತರ ಮತ್ತು ಜನರಿಗೆ ರೈಲ್ವೆ ಹಳಿ ದಾಟಲು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಒತ್ತಾಯಿಸಿದ್ದಾರೆ.

      ಗುರುವಾರ ಬೆಳಗ್ಗೆ ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ್ ಬಳಿ ಆ ಭಾಗದ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ ನಂತರ ಮಾತನಾಡಿದ ಅವರು,ರೈಲ್ವೆ ನಿಲ್ದಾಣ ರಸ್ತೆಗೆ ಡಾಂಬರು ಹಾಕಿ ಹತ್ತಾರು ವರ್ಷಗಳೇ ಕಳೆದಿದೆ. ಹಲವು ಬಾರಿ ಮನವಿ ಮಾಡಿದ ನಂತರ ಲೋಕಸಭಾ ಚುನಾವಣೆಗೂ ಮೊದಲು ರಸ್ತೆಯ ಅಗಲೀಕರಣಕ್ಕೆ ಸಂಸದರು ಮತ್ತು ಸ್ಥಳೀಯ ಶಾಸಕರು ಗುದ್ದಲಿಪೂಜೆ ನೆರವೇರಿಸಿದ್ದರು.ಆದರೆ ಇದುವರೆಗೂ ಕೆಲಸ ಆರಂಭವಾಗಿಲ್ಲ.ಇದರಿಂದ ರಸ್ತೆಯಲ್ಲಿ ಒಡಾಡುವ ಜನರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ.ಅಲ್ಲದೆ ಕೆಲ ತಿಂಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆ ಸಹ ಹಾಳಾಗಿದ್ದು, ಲಕ್ಷಾಂತರ ರೂ ಖರ್ಚು ಮಾಡಿದರೂ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲವೆಂದು ಆರೋಪಿಸಿದರು.

      ಕಸವಿಲೇವಾರಿ ಘಟಕ ಸ್ಥಳಾಂತರಿಸಿ:ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ ಮತ್ತು ಮೇಲ್ಸೇತುವೆ ಬಳಿ ನಗರಪಾಲಿಕೆ ವತಿಯಿಂದ ಕಸ ವಿಲೇವಾರಿ ಘಟಕ ನಡೆಯುತ್ತಿದ್ದು,ಸುಮಾರು ಐದಾರು ವಾರ್ಡುಗಳ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಸದರಿ ಜಾಗದಲ್ಲಿ ಒಣ ಮತ್ತು ಹಸಿ ಕಸ ವಿಂಗಡಿಸುವ ಕೆಲಸ ನಡೆಯುತ್ತದೆ.ಹಸಿ ಕಸ ಕೊಳೆತು ಕೆಟ್ಟ ವಾಸನೆ ಬಂದು ಸುತ್ತ ಮುತ್ತಲ ನಾಗರಿಕರು ಬದುಕುವುದು ಕಷ್ಟವಾಗಿದೆ.ಒಣ ಕಸವಾದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳ ಗಾಳಿಯಲ್ಲಿ ಚೆಲ್ಲಾಪಿಲ್ಲಿ ಯಾಗಿ ಚರಂಡಿ ಸೇರುತ್ತಿದ್ದು,ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಕಸವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ನಗರಪಾಲಿಕೆ ಕ್ರಮ ಕೈಗೊಳ್ಳಬೇಕೆಂದು ಗಿರಿಜಾ ಧನಿಯಕುಮಾರ್ ಒತ್ತಾಯಿಸಿದರು.

       ಪಾದಚಾರಿ ಮೇಲ್ಸೇತುವೆಗೆ ಮನವಿ:ಸಾರ್ವಜನಿಕರ ಒತ್ತಾಯದ ಮೇರೆಗೆ ರೈಲ್ವೆ ಇಲಾಖೆ ಅಂಡರ್‍ಪಾಸ್ ನಿರ್ಮಿಸಿದೆ. ಆದರೆ ಅಂಡರ್‍ಪಾಸ್‍ನಿಂದ ದ್ವಿಚಕ್ರ ಮತ್ತು ಆಟೋಗಳ ಓಡಾಟಕ್ಕೆ ಅನುಕೂಲವಾಗಿರುವುದನ್ನು ಬಿಟ್ಟರೆ,ಪಾದಚಾರಿಗಳಿಗೆ ಕಿಂಚಿತ್ತು ಅನುಕೂಲವಾಗಿಲ್ಲ.ಇರುವ ಚಿಕ್ಕ ಜಾಗದಲ್ಲಿ ಎರಡು ಕಡೆಯಿಂದ ಬರುವ ವಾಹನಗಳು ಓಡಾಡುವುದರಿಂದ ಪಾದಚಾರಿಗಳು ಅಂಡರ್ ಪಾಸ್‍ನಲ್ಲಿ ತಿರುಗಾಡಲು ಭಯಪಡುವಂತಾಗಿದೆ.ಉಪ್ಪಾರಹಳ್ಳಿ,ವಿಜಯನಗರ,ಶಾಂತಿನಗರ,ಶಿವಮೂಕಾಂಬಿಕ ನಗರ, ಗೆದ್ದಲಹಳ್ಳಿ ರಸ್ತೆಯ ಇಕ್ಕೆಲಗಳ ಜನರು ಸಾರಾಗವಾಗಿ ರಸ್ತೆ ಹಳಿ ದಾಟುವಂತಾಗಲು ಸದರಿ ಜಾಗದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಒಂದು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.

     ನಲ್ಲಿಗಳಲ್ಲಿ ಆಶುದ್ದ ನೀರು: 

      ಕಳೆದ ಎರಡು ದಿನಗಳಿಂದ ವಾರ್ಡಿನ ಕೆಲ ಬಡಾವಣೆಗಳಲ್ಲಿ ಆಶುದ್ದ, ಕೆಟ್ಟ ವಾಸನೆಯುಕ್ತ ನೀರು ಪಾಲಿಕೆಯಿಂದ ಸರಬರಾಜಾಗುತ್ತಿದ್ದು,ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ.ನಗರದ ಹಲವೆಡೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದು,ಅಶುದ್ದ ನೀರು ಸೇರಿರುವ ಸಾಧ್ಯತೆ ಇದೆ.ಅಲ್ಲದೆ ನೀರು ಶುದ್ದೀಕರಣ ಘಟಕದಲ್ಲಿ ಅಲಂ ಪೌಡರ್ ಬಳಸದೇ ಶುದ್ದೀಕರಿಸಿರುವ ಅನುಮಾನವಿದ್ದು,ನಗರಪಾಲಿಕೆ ಕೂಡಲೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಶುದ್ದ,ಕೆಟ್ಟ ವಾಸನೆ ರಹಿತ ನೀರು ಸರಬರಾಜು ಮಾಡುವಂತೆ ಪಾಲಿಕೆ ಅಧಿಕಾರಿಗಳನ್ನು ಶ್ರೀಮತಿ ಗಿರಿಜಾ ಧನಿಯಕುಮಾರ್ ಒತ್ತಾಯಿಸಿದರು. 

      ಈ ವೇಳೆ ರೈಲ್ವೆ ನಿಲ್ದಾಣ ರಸ್ತೆಯ ಮನೆಗಳ ಜನರು ರಸ್ತೆಯನ್ನು ರಿಪೇರಿ ಮಾಡುವಂತೆ,ಯುಜಿಡಿ ಸಮಸ್ಯೆಯನ್ನು ಬಗೆಹರಿಸುವಂತೆ ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಕುಮಾರ್ ಅವರಿಗೆ ಮನವಿ ಮಾಡಿದರು.

(Visited 20 times, 1 visits today)

Related posts

Leave a Comment