ತುಮಕೂರು :

      ಕೊರೊನಾ ಮಹಾಮಾರಿ ಆರ್ಭಟದ ನಡುವೆಯೂ ನಗರದ ವಿವಿಧ ಬಡಾವಣೆಗಳಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಇಲ್ಲಿನ ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆ.ಹೆಚ್.ಬಿ. ಕಾಲೋನಿಯಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಬೆಳಿಗ್ಗೆ 4 ಗಂಟೆ ಪಂಚಾಮೃತ ಅಭಿಷೇಕ, ಅಲಂಕಾರ, ಉಯ್ಯಾಲೆ ಸೇವೆ, ಪ್ರಕಾರೋತ್ಸವಗಳು ಜರುಗಿದವು.


ವೈಕುಂಠ ಏಕಾದರ್ಶಿ ದರ್ಶನಕ್ಕಾಗಿ ದೇವಾಲಯಕ್ಕೆ ಬಂದ ಭಕ್ತಾದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಮಾಸ್ಕ್ ಧರಿಸಿದ ಭಕ್ತರಿಗಷ್ಟೇ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ದೇವಾಲಯಕ್ಕೆ ಬಂದ ಭಕ್ತರು ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸ್ ಮಾಡಿಕೊಂಡು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.
ಈ ಸಂದರ್ಭದಲ್ಲಿ ಮಾತನಾಡಿದ ದೇವಾಲಯದ ಧರ್ಮಾಧಿಕಾರಿ ಟಿ.ಆರ್. ವೆಂಕಟೇಶ್, ಎಲ್ಲರೂ ಜೀವಕ್ಕಾಗಿ ಬೆಲೆ ಕೊಡಬೇಕು. ಜೀವ ಇದ್ದರೆ ಮುಂದೆ ದೇವರ ಸೇವೆ ಮಾಡಬಹುದು. ಹಾಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿದವರನ್ನೇ ಮಾತ್ರ ದೇಗುಲದ ಒಳಗೆ ದೇವರ ದರ್ಶನಕ್ಕಾಗಿ ಬಿಟ್ಟಿದ್ದೇವೆ. ದೇವಾಲಯವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದರು.
ವೈಕುಂಠ ಏಕಾದಶಿಯಲ್ಲಿ ಕೊರೊನಾಗಿಂತ ಮುನ್ನ ಭಕ್ತಾದಿಗಳ ಸಂಖ್ಯೆ ಅತಿ ಹೆಚ್ಚಾಗಿರುತ್ತಿತ್ತು. ಆದರೆ ಕೊರೊನಾ ಬಂದ ನಂತರದ ದಿನಗಳಲ್ಲಿ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಸಾಂಪ್ರದಾಯಿಕವಾಗಿ ವೈಕುಂಠ ಏಕಾದಶಿಯನ್ನು ಆಚರಣೆ ಮಾಡಿದ್ದೇವೆ. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಆದಷ್ಟು ಶೀಘ್ರ ಜಗತ್ತಿನಿಂದ ಮಹಾಮಾರಿ ಕೊರೊನಾ ದೂರವಾಗಲಿ ಎಂದು ಶ್ರೀಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇವೆ ಎಂದರು.
ಜಯನಗರ ಪಶ್ಚಿಮದಲ್ಲಿರುವ ಪದ್ಮಾವತಿ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೊರೊನಾ ಹಿನ್ನೆಲೆಯಲ್ಲಿ ಈ ದೇವಾಲಯದೊಳಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ದೇವಾಲಯದ ಹೊರ ಭಾಗದ ಗೇಟ್‍ನಿಂದಲೇ ಭಕ್ತಾದಿಗಳು ದೇವರ ದರ್ಶನ ಪಡೆದರು.
ಬಟವಾಡಿಯ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಇಡೀ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.
ದೇವಾಲಯದ ಡಿ.ಎಸ್. ಕುಮಾರ್ ಮಾತನಾಡಿ, ಮಾಸ್ಕ್ ಹಾಕದೆ ಇದ್ದ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ನೀಡಿಲ್ಲ. ಈ ಕಾರ್ಯಕ್ಕಾಗಿಯೇ ಒಂದು ತಂಡ ರಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕೊರೊನಾ ನಿಯಮಗಳನ್ನು ಪಾಲಿಸದೆ ಬರುವ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡುವುದಿಲ್ಲ. ವಾಪಸ್ ಕಳುಹಿಸುವಂತೆ ನಮ್ಮ ತಂಡಕ್ಕೆ ಸೂಚಿಸಲಾಗಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ವಿರಳವಾಗಿದೆ. ಶೀಘ್ರವಾಗಿ ಈ ಮಹಾಮಾರಿ ನಿವಾರಣೆಯಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಮಹಾಲಕ್ಷ್ಮಿ ದೇವಾಲಯದಲ್ಲಿ ಕೂಡ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಿರಾ ಗೇಟ್ ಸಮೀಪವಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ವೆಂಕಟೇಶ್ವರಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜಾದಿಗಳು ನೆರವೇರಿ, ಭಕ್ತರಿಗೆ ವೈಕುಂಠ ಏಕಾದಶಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

(Visited 2 times, 1 visits today)