ತುಮಕೂರು : ಹಾಸಿಗೆಗಳನ್ನು ಮೀಸಲಿಡಲು ಆಸ್ಪತ್ರೆಗಳಿಗೆ ಡೀಸಿ ಸೂಚನೆ

 ತುಮಕೂರು :

     ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರಿ/ ಖಾಸಗಿ ಆಸ್ಪತ್ರೆ ಸೇರಿದಂತೆ ಮೆಡಿಕಲ್ ಕಾಲೇಜುಗಳಲ್ಲಿ ಶೇ. 75ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಆಕ್ಸಿಜನ್, ಬೆಡ್, ಐಸಿಯು, ವೆಂಟಿಲೇಟರ್ ಬೆಡ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಅವುಗಳ ಸಾಮಥ್ರ್ಯದ ಶೇ.75ರಷ್ಟು ಬೆಡ್‍ಗಳನ್ನು ಮೀಸಲಿಡಬೇಕೆಂದು ತಿಳಿಸಿದರು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಹಾಸಿಗೆಗಳು ಸಿಗದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಡ್‍ಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೋವಿಡ್ 2ನೇ ಅಲೆಯಲ್ಲಿದ್ದಷ್ಟು ಒತ್ತಡ 3ನೇ ಅಲೆಯಲ್ಲಿ ಕಂಡು ಬಂದಿಲ್ಲ ಎಂದರಲ್ಲದೆ, 1400 ಸಕ್ರಿಯ ಪ್ರಕರಣಗಳು ವರದಿಯಾಗಿದ್ದರೂ ಆಸ್ಪತ್ರೆಯಲ್ಲಿ 80 ಮಂದಿ ಮಾತ್ರ ದಾಖಲಾಗಿದ್ದು, ಮುಂದಿನ 2 ತಿಂಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದೆಂದು ಮನಗಂಡು ಹಾಸಿಗೆಗಳನ್ನು ಮೀಸಲಿಡಬೇಕೆಂದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾದ್ಯಂತ ಶಾಲಾ-ಕಾಲೇಜುಗಳ ಬಸ್‍ಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ಹೆಚ್ಚಾಗಿರುವ ಕಾರಣ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ, ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬಂದಿದ್ದು, ಅಧಿಕಾರಿಗಳು ಅಂತಹ ಕಡೆ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಬೇಕೆಂದು ಸೂಚಿಸಿದರು.
ಈವರೆಗೂ ಕೋವಿಡ್ ಮೊದಲ ಡೋಸ್ ತೆಗೆದುಕೊಳ್ಳದವರಿಗೆ ಅರಿವು ಮೂಡಿಸಿ ಲಸಿಕೆ ನೀಡಬೇಕು ಹಾಗೂ ಮುಂಚೂಣಿ ಕಾರ್ಯಕರ್ತರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮಾತನಾಡಿ, ಕನಿಷ್ಟ 10 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸುವುದರಿಂದ ಬಸ್‍ಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆಯನ್ನು ತಡೆಯಬಹುದಾಗಿದ್ದು, ಇದರಿಂದ ಮಕ್ಕಳಲ್ಲಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ನಗರದ ಸಿದ್ಧಾರ್ಥ, ಸಿದ್ಧಗಂಗಾ, ಶ್ರೀದೇವಿ, ಟಿಹೆಚ್‍ಎಸ್, ಆದರ್ಶ ಆಸ್ಪತ್ರೆ ಸೇರಿದಂತೆ ಮತ್ತಿತರ ಆಸ್ಪತ್ರೆಗಳ ಪ್ರತಿನಿಧಿಗಳು ಕೋವಿಡ್‍ಗೆ ಸಂಬಂಧಿಸಿದಂತೆ ಮೀಸಲಿಟ್ಟಿರುವ ಹಾಸಿಗೆಗಳ ಅಂಕಿ ಅಂಶ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಗೆ ವರದಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ: ಮೋಹನ್ ದಾಸ್, ಡಾ.ಮಹಿಮಾ, ಸೇರಿದಂತೆ ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಪ್ರತನಿಧಿಗಳು ಸಭೆಯಲ್ಲಿ ಹಾಜರಿದ್ದರು.

(Visited 4 times, 1 visits today)

Related posts