ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ!

ತುಮಕೂರು:

      ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಜನ ಜಾಗೃತಿ ಮೂಡಿಸಲು ಸಂಚರಿಸಲಿರುವ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ತುಮಕೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿಂದು ಚಾಲನೆ ನೀಡಲಾಯಿತು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ಅವರು ತಾಲ್ಲೂಕು ಮಟ್ಟದ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಹಸಿರು ನಿಶಾನೆ ತೋರಿಸವ ಮೂಲಕ ಚಾಲನೆ ನೀಡಿದರು. ಈ ಜಾಗೃತಿ ರಥವು ತುಮಕೂರು ತಾಲ್ಲೂಕಿನ 41 ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕುರಿತ ಮಾಹಿತಿ ನೀಡಲಿದೆ.

      ನಂತರ ಮಾತನಾಡಿದ ಶುಭಾ ಕಲ್ಯಾಣ ಅವರು ಈ ಯೋಜನೆಯಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ವಿವರ, ಗಂಡು ಮತ್ತು ಹೆಣ್ಣಿಗೆ 249/-ರೂ.ಗಳ ಸಮಾನ ಕೂಲಿ ನೀಡುವ ಕುರಿತು ಮಾಹಿತಿ ನೀಡಿದರು. ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ತಮಗೆ ಸಂಬಂಧಿಸಿದ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ಅಭಿವೃದ್ಧಿ ಹೊಂದುವಂತೆ ಜನರಲ್ಲಿ ಮನವಿ ಮಾಡಿದರು.

      ಜಿಲ್ಲಾ ಐಇಸಿ ಸಂಯೋಜಕ ಉಮೇಶ್ ಹುಲಿಕುಂಟೆ ಮಾತನಾಡಿ, ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರುಗಳಿಗೆ ಯೋಜನೆಯಡಿ ದೊರೆಯುವ ಉದ್ಯೋಗ ಮತ್ತು ವೈಯುಕ್ತಿಕ ಕಾಮಗಾರಿಗಳಾದ ದನದ ಕೊಟ್ಟಿಗೆ, ರೈತರ ಹೊಲದಲ್ಲಿ ಬದು, ಕೃಷಿ ಹೊಂಡ, ಎರೆಹುಳು ಸಾಕಾಣಿಕೆ ತೊಟ್ಟಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಕೃಷಿಯನ್ನು ಕೈಗೊಂಡು ಯೋಜನೆಯಿಂದ ಅನುಕೂಲ ಪಡೆದುಕೊಳ್ಳುವಂತೆ ಮಾಹಿತಿ ನೀಡುವುದೇ ಈ ಉದ್ಯೋಗ ವಾಹಿನಿ ಜಾಗೃತಿ ರಥದ ಉದ್ದೇಶವಾಗಿದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಹಾಜರಿದ್ದು, ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಗ್ರಾಮ ಪಂಚಾಯಿತಿ ನೌಕರರೊಂದಿಗೆ ಸಹಕರಿಸಲು ಕೋರಿದರು. ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಿ.ವೆಂಕಟೇಶ್, ಸಹಾಯಕ ನಿರ್ದೇಶಕ(ಗ್ರಾ.ಉ.) ಜಗಧೀಶ್, ತಾಲ್ಲೂಕು ಐಇಸಿ ಸಂಯೋಜಕರುಗಳು ಹಾಗೂ ತಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

(Visited 10 times, 1 visits today)

Related posts