ತುಮಕೂರು :
ಜ್ಞಾನ ಮತ್ತು ಅನುಭವಗಳ ವಿನಿಮಯದೊಂದಿಗೆ ಅಭಿವೃದ್ಧಿ ಸಾಧಿಸುವ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಾಗೂ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ರಾಜತಾಂತ್ರಿಕ ಕಚೇರಿ ಅಧಿಕಾರಿಗಳ ನಡುವೆ ಬುಧವಾರ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಯಿತು.
ಬೆಂಗಳೂರಿನಲ್ಲಿ ಬುಧವಾರ ಕಾನ್ಸುಲೇಟ್ ಜನರಲ್ ಆಫ್ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಡೆಪ್ಯುಟಿ ಕನ್ಸಲ್ ಜನರಲ್ Philipp Ehlerding ಇವರ ನೇತೃತ್ವದ ತಂಡ, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಅವರೊಂದಿಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶಾಲಿನಿ ರಜನೀಶ್ ತುಮಕೂರು ಸ್ಮಾರ್ಟ್‍ಸಿಟಿಗಳ ಪರಿಕಲ್ಪನೆ ಮತ್ತು ಉದ್ದೇಶಗಳನ್ನು ವಿವರಿಸಿ ತುಮಕೂರು ನಗರ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಯೋಗದೊಂದಿಗೆ ತುಮಕೂರು ನಗರದ ಸಂಪೂರ್ಣ ಅಭಿವೃದ್ಧಿಯನ್ನು ಎಲ್ಲರ ಸಹಕಾರ ಮತ್ತು ಸಹಯೋಗದೊಂದಿಗೆ (Inclusive growth) ಕೈಗೊಳ್ಳುವುದೇ ತುಮಕೂರು ಸ್ಮಾರ್ಟ್‍ಸಿಟಿಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಟಿ.ಭೂಬಾಲನ್ ಮಾತನಾಡಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರದಲ್ಲಿ ಕೈಗೊಳ್ಳುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಚರ್ಚೆಯಲ್ಲಿ ಡೆಪ್ಯುಟಿ ಕನ್ಸಲ್ ಜನರಲ್ ಅವರು ಮಾತನಾಡಿ ಪ್ರಸ್ತುತ ಇರುವ ಐಟಿಐ, ಪಾಲಿಟೆಕ್ನಿಕ್‍ಗಳ ಉನ್ನತೀಕರಣ ಮತ್ತು ಹೊಸ ಐಟಿಐಗಳನ್ನು ಪ್ರಾರಂಭಿಸುವ ಮೂಲಕ ಯುವಜನರ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸಿ ಲಾಭದಾಯಕ ಉದ್ಯೋಗವನ್ನು ಹೊಂದುವಲ್ಲಿ ಸಹಕರಿಸುವ ಬಗ್ಗೆ ಆಸಕ್ತಿಯನ್ನು ತೋರಿದರು. ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ತಂಡದವರು ನೀರು ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಕೈಗಾರಿಕಾ ಅಭಿವೃದ್ಧಿ, ನವೀಕರಿಸಬಹುದಾದಂಥಹ ಶಕ್ತಿಗಳ ಮತ್ತು ಇತರೆ ಕ್ಷೇತ್ರಗಳ ಬಗ್ಗೆ ಉತ್ಸುಕತೆ ತೋರಿದ್ದು, ತುಮಕೂರು ನಗರವನ್ನು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಬವೇರಿಯ ನಗರದ ‘ಸಹೋದರಿ ನಗರ’ವನ್ನಾಗಿ ರೂಪಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಡೆಪ್ಯುಟಿ ಕನ್ಸಲ್ ಜನರಲ್, ಇವರ ತಂಡ ಸದ್ಯದಲ್ಲಿಯೇ ತುಮಕೂರು ನಗರಕ್ಕೆ ಭೇಟಿ ನೀಡಲಿದ್ದು, ಪರಸ್ಪರ ಆಸಕ್ತ ಕ್ಷೇತ್ರಗಳ ಬಗ್ಗೆ ಮಾಹಿತಿಯನ್ನು ಪಡೆಯಲಿರುವುದಾಗಿ ತಿಳಿಸಿದರು.