ತುಮಕೂರು:
ನಗರದ ಬಿ.ಹೆಚ್. ರಸ್ತೆಯಲ್ಲಿ ಕಳೆದ 11 ವರ್ಷದಿಂದ ಬೆಳೆಸಿದ್ದ ಬೇವಿನ ಮರಗಳನ್ನು ಗುತ್ತಿಗೆದಾರರು ಮತ್ತೆ ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಿ.ಹೆಚ್. ರಸ್ತೆಯ ಮಧ್ಯಭಾಗದಲ್ಲಿ ಕಳೆದ 11 ವರ್ಷಗಳಿಂದ ಮರಗಳನ್ನು ಬೆಳೆಸಲಾಗಿತ್ತು. ಈ ಪೈಕಿ ಬೇವಿನ ಮರಗಳು ಅತಿ ಹೆಚ್ಚಾಗಿದ್ದು, ಚೆನ್ನಾಗಿ ಬೆಳೆದು ನಿಂತಿದ್ದವು. ಆದರೆ ಪಾಲಿಕೆಯಿಂದ ಜಾಹೀರಾತು ನಾಮಫಲಕಗಳನ್ನು ಅಳವಡಿಸುವ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪಾಲಿಕೆಯಿಂದಾಗಲೀ ಅಥವಾ ಅರಣ್ಯ ಇಲಾಖೆಯಿಂದಾಗಲೀ ಯಾವುದೇ ಅನುಮತಿ ಪಡೆಯದೇ ಏಕಾಏಕಿ ರಾತ್ರಿ 11 ಬೇವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ.
ಮರಗಳ ಮಾರಣಹೋಮ ನಡೆಸಿರುವುದನ್ನು ಬೆಳಿಗ್ಗೆ ನೋಡಿದ ಪರಿಸರ ಪ್ರೇಮಿಗಳು ತಕ್ಷಣ ರಸ್ತೆಗಿಳಿದು ಮರಗಳನ್ನು ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಲೇಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಳೆದ 3 ತಿಂಗಳ ಹಿಂದೆ ಸದರಿ ಗುತ್ತಿಗೆದಾರ ಇದೇ ರೀತಿಯ ಬಿ.ಹೆಚ್. ರಸ್ತೆಯಲ್ಲಿ ಮರಗಳನ್ನು ಕಡಿದು ಹಾಕಿದ್ದರು. ಇದುವರೆಗೂ ಆತನ ವಿರುದ್ಧ ಯಾವುದೇ ಕ್ರಮ ಆಗದಿರುವುದು ಮತ್ತೆ ಈಗ ಮರಗಳ ಮಾರಣ ಹೋಮಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 11 ವರ್ಷದಿಂದ ಬೆಳೆಸಿದ ಸಾಲು ಬೇವಿನ ಮರಗಳನ್ನು ಜಾಹೀರಾತು ನಾಮಫಲಕ ಹಾಕುವ ಸಲುವಾಗಿ ಗುತ್ತಿಗೆದಾರ ರಾತ್ರೋರಾತ್ರಿ ಮರಗಳನ್ನು ಕಡಿಸಿ ಹಾಕಿದ್ದಾರೆ. ಮರ ಕಡಿದು ಹಾಕಿರುವ ಗುತ್ತಿಗೆದಾರ ಮತ್ತು ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ನಿವೃತ್ತ ಪೆÇ್ರಫೆಸರ್ ಸಿದ್ದಪ್ಪ ಮಾತನಾಡಿ, ಕಳೆದ 11 ವರ್ಷಗಳಿಂದ ಈ ಮರಗಳನ್ನು ಕಷ್ಟಪಟ್ಟು ಬೆಳೆಸಿದ್ದೇವೆ. ಈ ಮರಗಳನ್ನು ರಾತ್ರೋರಾತ್ರಿ ಕಡಿದು ಹಾಕಿರುವ ಗುತ್ತಿಗೆದಾರರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿ ಚಿಕ್ಕರಾಜೇಂದ್ರ ಅವರು ಪರಿಶೀಲನೆ ನಡೆಸಿ, ರಸ್ತೆಯಲ್ಲಿದ್ದ ಅದ್ಭುತವಾದ ಮರಗಳನ್ನು ಕಡಿದಿರುವುದು ಅಕ್ಷಮ್ಯ ಅಪರಾಧ. ಹಿಂದೆಯೂ 4 ಮರಗಳನ್ನು ಕಡಿಯಲಾಗಿತ್ತು. ಈ ಮರಗಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಮರ ಕಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸ್ಥಳಕ್ಕೆ ಧಾವಿಸಿದ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕಳೆದ 3 ತಿಂಗಳ ಹಿಂದೆ ಗುತ್ತಿಗೆದಾರ ಇದೇ ರೀತಿ ಮರಗಳನ್ನು ಕಡಿಸಿದ್ದರು. ಆ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಅರಣ್ಯ ಇಲಾಖೆಗೆ ದೂರು ನೀಡಿದ್ದೆವು. ಆದರೆ ಇದುವರೆಗೂ ಯಾವುದೇ ಕ್ರಮ ಆದಂತೆ ಕಂಡು ಬಂದಿಲ್ಲ. ಈ ಬಾರಿ ಕಠಿಣ ಕ್ರಮಕೈಗೊಳ್ಳುವಂತೆ ಮತ್ತೊಮ್ಮೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಕಳೆದ 2020 ರಲ್ಲಿ ಪಾಲಿಕೆ ವತಿಯಿಂದ ಜಾಹೀರಾತು ನಾಮಫಲಗಳನ್ನು ಅಳವಡಿಸಲು ಟೆಂಡರ್ ಗುತ್ತಿಗೆ ನೀಡಲಾಗಿದೆ. ಬಿ.ಹೆಚ್. ರಸ್ತೆ. ಎಂ.ಜಿ. ರಸ್ತೆ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಹೀರಾತು ನಾಮಫಲಕ ಅಳಪಡಿಸುವ ಗುತ್ತಿಗೆಯನ್ನು ಸುಮಾರು 15 ಲಕ್ಷ ರೂ.ಗಳಿಗೆ ನೀಡಲಾಗಿದೆ. ಆದರೆ ಇವರಿಗೆ ಕಡಿಯಲು ಯಾರೂ ಅನುಮತಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಹಾಜರಿದ್ದು ತಕ್ಷಣ ಮರ ಕಡಿದವರನ್ನು ಬಂಧಿಸಲೇಬೇಕು ಎಂದು ಪಟ್ಟು ಹಿಡಿದರು.

(Visited 24 times, 1 visits today)