ತುಮಕೂರು : ಬಸ್ ಸಂಚಾರ ಆರಂಭ : ಮಾಸ್ಕ್ ಇಲ್ಲದೆ ಪ್ರವೇಶವಿಲ್ಲ

ತುಮಕೂರು:

      ಹೊರ ರಾಜ್ಯಗಳಿಂದ 439 ಜಿಲ್ಲೆಗೆ ಆಗಮಿಸಿದ್ದು, ಅವರನ್ನು ವಸತಿ ಶಾಲೆ, ಹೋಟೆಲ್‍ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಈಗಾಗಲೇ ಗಂಟಲು ದ್ರಾವ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಕೆಲವರ ವರದಿ ನೆಗೆಟಿವ್ ಬಂದಿವೆ. ಇನ್ನು ಕೆಲವು ಮಾದರಿಗಳ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ಈವರೆಗೂ 4 ಕೋವಿಡ್-19 ಸಕ್ರಿಯ ಪ್ರಕರಣಗಳಿದ್ದು, ಶೀಘ್ರವಾಗಿ ಗುಣಮುಖರಾಗಲು ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಮ್ಮೆ ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುವುದು. ನೆಗೆಟಿವ್ ಬಂದಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದರು.

      ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಖಾಸಗಿ ವಾಹನಗಳ ಮಾಡಲು ಅನುಮತಿ ನೀಡಲಾಗಿದೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ್ ಜಿಲ್ಲೆಗೆ ಪ್ರಯಾಣಿಸಲು ಯಾವುದೇ ಪಾಸ್ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಭಾನುವಾರದಂದು ಸಂಪೂರ್ಣ ಲಾಕ್‍ಡೌನ್ ಮಾಡುವುದರಿಂದ ಅಗತ್ಯ ಸೇವೆ(ಆಸ್ಪತ್ರೆ, ಮೆಡಿಕಲ್, ಇನ್ನಿತರೆ)ಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶವಿರುವುದಿಲ್ಲ. ಅಂತರ್ ರಾಜ್ಯದಿಂದ ಜಿಲ್ಲೆಗೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸುವ ಸಲುವಾಗಿ ಸಾರ್ವಜನಿಕರು ಹೊರ ರಾಜ್ಯದಿಂದ ಬಂದವರ ಮಾಹಿತಿಯನ್ನು ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ನೀಡಬೇಕೆಂದು ಅವರು ಮನವಿ ಮಾಡಿದರು.

(Visited 17 times, 1 visits today)

Related posts