ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ಎಚ್ಚರಿಕೆ ಅಗತ್ಯ

ತುಮಕೂರು;
ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯ, ಮೆದುಳು ಜ್ವರದಂತಹ ರೋಗವಾಹಕ ಆಶ್ರಿತ ರೋಗಗಳ ಬಗ್ಗೆ ನಾವು ಈಗಾಗಲೇ ಸಾಕಷ್ಟು ಪಾಠ ಕಲಿತಿದ್ದೇವೆ. ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಮೇ ತಿಂಗಳಿನಿಂದ ಡಿಸೆಂಬರ್‍ವರೆಗೆ ಇಂತಹ ರೋಗಗಳು ಹರಡುವ ಸಾಧ್ಯತೆ ಇದ್ದು, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ, ತಮ್ಮ ಸುತ್ತ-ಮುತ್ತಲಿನ ಪರಿಸರದ ಸ್ವಚ್ಛತೆ ಬಗ್ಗೆ ಗಮನಹರಿಸಿ ರೋಗ ನಿಯಂತ್ರಣಕ್ಕೆ ಸಹಕರಿಸುವಂತೆ ಜಿಲ್ಲಾ ಮುಖ್ಯ ಕಾರ್ಯನಿವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ವತಿಯಿಂದ “ರಾಷ್ಟ್ರೀಯ ಡೆಂಗ್ಯೂ ದಿನ”ದ ಪ್ರಯುಕ್ತ ನಡೆದ ‘ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್-19ರಿಂದ ನಾವು ಅನೇಕ ಸಮಸ್ಯೆಗಳನ್ನು ಈಗಾಗಲೇ ಎದುರಿಸಿದ್ದೇವೆ. ಜೀವನ ಪೂರ್ತಿ ಮರೆಯದ ಪಾಠ ಕಲಿತಿದ್ದೇವೆ. ಆದುದರಿಂದ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೋಗವಾಹಕ ರೋಗಗಳು ಎಲ್ಲೆಡೆ ಹೆಚ್ಚುವ ಸಾಧ್ಯತೆಗಳಿದ್ದು, ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣ, ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ, ಶಾಲಾ-ಕಾಲೇಜು ಸುತ್ತ-ಮುತ್ತ ನೀರು ನಿಲ್ಲದ ರೀತಿ ಎಚ್ಚರ ವಹಿಸುವುದು, ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವಿಕೆ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಟೈರುಗಳ ವಿಲೇವಾರಿ, ಪಾಲಿಕೆ ವ್ಯಾಪ್ತಿಯ ಚರಂಡಿ ಸ್ವಚ್ಛತೆ, ಕಸ ವಿಲೇವಾರಿ, , ಮನೆಯಲ್ಲಿರುವ ನೀರು ಶೇಖರಣೆಯ ಸಿಮೆಂಟ್ ತೊಟ್ಟಿಗಳು, ಬ್ಯಾರಲ್‍ಗಳು, ಡ್ರಂಗಳು, ಹೂವಿನ ಕುಂಡ, ಮನೆಯ ಸುತ್ತ-ಮುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪುಗಳು ಟೈರುಗಳು, ಎಳನೀರು ಚಿಪ್ಪುಗಳಲ್ಲಿ ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿದಲ್ಲಿ ಸಾಮೂಹಿಕ ಜವಾಬ್ದಾರಿ ಮೂಡುತ್ತದೆ ಎಂದರು.
ರೋಗವಾಹಕ ಆಶ್ರಿತ ರೊಗಗಳು ಮತ್ತು ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪಾತ್ರ ಬಹುಮುಖ್ಯವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವತಿಯಿಂದ ಗುಂಡಿಗಳು ಹಾಗೂ ತಗ್ಗುಗಳನ್ನು ಮುಚ್ಚಿಸುವುದು, ನೀರು ಸರಬರಾಜು ಮಾಡುವ ಮೊದಲು ಸೂಕ್ತ ಪ್ರಮಾಣದಲ್ಲಿ ಕ್ಲೋರಿನ್ ಬಳಕೆ, ನಗರಾಭಿವೃದ್ಧಿ ಇಲಾಖೆ ವತಿಯಿಂದ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿಯುವಿಕೆ, ವಾರಕ್ಕೊಮ್ಮೆ ಸೊಳ್ಳೆ ನಾಶಕ ದ್ರಾವಣ ಸಿಂಪಡಿಕೆ, ಶಿಕ್ಷಣ ಇಲಾಖೆ ವತಿಯಿಂದ ಶಾಲೆಗಳಲ್ಲಿ ಲಾರ್ವ ಪ್ರಾತ್ಯಕ್ಷಿಕೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ಗೃಹ ಕಿಟಕಿಗಳಿಗೆ ಜಾಲರಿ ಅಳವಡಿಕೆ, ಹಾಸ್ಟಲ್ ಆವರಣದಲ್ಲಿ ಪರಿಸರ ನೈರ್ಮಲ್ಯ, ಕೈಗಾರಿಕಾ ಇಲಾಖೆ ವತಿಯಿಂದ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ, ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ, ಮೀನುಗಾರಿಕೆ ಇಲಾಖೆ ವತಿಯಿಂದ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೂಸಿಯಾ ಇವುಗಳನ್ನು ಬೆಳೆಸಿ ರಾಜ್ಯಾದ್ಯಂತ ಲಭ್ಯವಾಗುವಂತೆ ನೋಡಿಕೊಳ್ಳುವುದು, ಕೆರೆ-ಕಟ್ಟೆ, ಕೊಳ, ಬಾವಿ, ಝರಿ ಇತ್ಯಾದಿ ಜಿಲ್ಲಾವಾರು ಜಿಐಎಸ್ ನಕ್ಷೆ ತಯಾರಿಸುವುದು, ಕಂದಾಯ ಇಲಾಖೆ ವತಿಯಿಂದ ಎಲ್ಲಾ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಸರಬರಾಜು, ಇಲಿಗಳ ನಿಯಂತ್ರಣ ಹಾಗೂ ಪರಿಸರ ನೈರ್ಮಲ್ಯ, ಮಹಾನಗರಪಾಲಿಕೆ ವತಿಯಿಂದ ನಗರದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡುವುದು, ಮುಂತಾದ ಕ್ರಮಗಳನ್ನು ಎಲ್ಲಾ ಇಲಾಖಾ ಮುಖ್ಯಸ್ಥರು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸಿಇಓ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಟಿ.ಎನ್.ಪುರುಷೋತ್ತಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)

Related posts