ತುಮಕೂರು : ಕೋವಿಡ್-೧೯ ನಿಯಂತ್ರಿಸಲು 4 ಚೆಕ್‍ಪೋಸ್ಟ್ ಗಳ ನಿರ್ಮಾಣ

ತುಮಕೂರು:

       ನಗರದಲ್ಲಿ ಕೊರೋನಾ ಕೊವಿಡ್-19 ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ವೈರಾಣು ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ತುಮಕೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲು ಮತ್ತು ತಪಾಸಣೆಗಾಗಿ ನಾಲ್ಕು ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ.

      ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಬರುವ 4 ಪ್ರಮುಖ ರಸ್ತೆಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಈ ಚೆಕ್‍ಪೋಸ್ಟ್‍ಗಳಲ್ಲಿ ಕಂದಾಯ ಇಲಾಖೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ತಲಾ ಇಬ್ಬರು ಸಿಬ್ಬಂದಿಗಳು 24×7 ಗಂಟೆಯೂ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹೊರಗಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವ ವಾಹನ/ವ್ಯಕ್ತಿಗಳನ್ನು ತೀವ್ರ ತಪಾಸಣೆ ಮಾಡಲಾಗುವುದು. ತಪಾಸಣೆ ಮಾಡಿದ ನಂತರ ಅವರ ಆರೋಗ್ಯ ಪರಿಸ್ಥಿತಿಯನ್ನು ಆಧರಿಸಿ ಹೋಂ ಕ್ವಾರಂಟೈನ್ ಅಥವಾ ಸಾಂಸ್ಥಿಕ ಕ್ವಾರಂಟೈನ್‍ಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

      ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ ಚೆಕ್‍ಪೋಸ್ಟ್‍ಗಳ ಸ್ಥಾಪನೆ ಮತ್ತು ಕಾರ್ಯವೈಖರಿಗಳ ಪರಿಶೀಲನೆ ನಡೆಸಿ ತುಮಕೂರು ನಗರಕ್ಕೆ ಬರುವ ಎಲ್ಲಾ ವ್ಯಕ್ತಿಗಳನ್ನು ಮತ್ತು ವಾಹನಗಳನ್ನು ಕಠಿಣ ತಪಾಸಣೆ ನಡೆಸಿ ಎಂದು ಚೆಕ್‍ಪೋಸ್ಟ್ ಕಾರ್ಯನಿರತ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

      ನಗರಕ್ಕೆ ಸಂಪರ್ಕವಿದ್ದ ಕೆಲವೊಂದು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸಲಾಗಿದ್ದು, ಸಿಟಿ ಸುತ್ತಲೂ 4 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಈ ಮುಖಾಂತರ ತುಮಕೂರು ನಗರಕ್ಕೆ ಜನ/ವಾಹನಗಳು ಪ್ರವೇಶ ಮಾಡಬೇಕು ಎಂದು ಅವರು ತಿಳಿಸಿದರು.

  ತುಮಕೂರು ನಗರದಲ್ಲಿ ನಾಲ್ಕು ಚೆಕ್‍ಪೋಸ್ಟ್ :

      1) ಶಿರಾಗೇಟ್, ಕನಕದಾಸ ಸರ್ಕಲ್. 2) ಗುಬ್ಬಿ ರಿಂಗ್ ರಸ್ತೆ ಜಂಕ್ಷನ್. 3) ಕುಣಿಗಲ್ ರಿಂಗ್ ರಸ್ತೆ ಜಂಕ್ಷನ್. 4) ಜಾಸ್‍ಟೋಲ್‍ಗೇಟ್ ಕ್ಯಾತ್ಸಂದ್ರ ಪೊಲೀಸ್ ಠಾಣೆ ಮುಂಭಾಗ.

      ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್‍ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸತಕ್ಕದ್ದು. ಕ್ಯಾತ್ಸಂದ್ರ ಸಿ.ಎಂ. ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ.ಎಲ್.ಎ.ರಾಜಣ್ಣ ಅವರ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ ಪ್ರವೇಶಿಸಬಹುದು. ಬೆಂಗಳೂರು ಕಡೆಯಿಂದ ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಗೆ ಹೋಗುವ ವಾಹನ ಸವಾರರು ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್ ಬಳಿಯ ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗತಕ್ಕದ್ದು. ಮೈಸೂರು-ಕುಣಿಗಲ್ ಕಡೆಯಿಂದ ಬರುವವರು ಕುಣಿಗಲ್ ಜಂಕ್ಷನ್ ಮೂಲಕ ತುಮಕೂರು ನಗರದ ಒಳಗಡೆ ಬರತಕ್ಕದ್ದು. ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ತುಮಕೂರು ನಗರದ ಒಳಗಡೆ ಬರುವವರು ಗುಬ್ಬಿ ರ್ರಿಂಗ್ ರಸ್ತೆ ಜಂಕ್ಷನ್ ಮೂಲಕ ಬರತಕ್ಕದ್ದು. ಶಿರಾ-ಚಿತ್ರದುರ್ಗ-ದಾವಣಗೆರೆ ಕಡೆಯಿಂದ ಬರುವವರು ಲಿಂಗಾಪುರ ಅಂಡರ್ ಪಾಸ್-ಹಳೇ ಎನ್‍ಹೆಚ್-4 ರಸ್ತೆ ಮೂಲಕ ಶಿರಾಗೇಟ್‍ಗೆ ತಲುಪಬಹುದು ಅಥವಾ ಅಂತರಸನಹಳ್ಳಿ ಬ್ರಿಡ್ಜ್ ಸರ್ವೀಸ್ ರಸ್ತೆ ಮುಖಾಂತರ ಶಿರಾಗೇಟ್‍ಗೆ ಪ್ರವೇಶಿಸಬಹುದು.

      ಗುಬ್ಬಿ-ತಿಪಟೂರು-ಚಿಕ್ಕನಾಯಕನಹಳ್ಳಿ-ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನ ಸವಾರರು ಗುಬ್ಬಿ ರಿಂಗ್ ರಸ್ತೆ ಜಂಕ್ಷನ್- ರಿಂಗ್ ರಸ್ತೆ ಮೂಲಕ ಕ್ಯಾತ್ಸಂದ್ರ ಜಾಸ್‍ಟೋಲ್‍ಗೇಟ್ ಮೂಲಕ ಹೋಗತಕ್ಕದ್ದು. ತುಮಕೂರು ನಗರದಿಂದ ಬೆಂಗಳೂರು ಕಡೆಗೆ ಹೋಗುವವರು ಬಟವಾಡಿ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿ-48 ರಸ್ತೆ ಮೂಲಕ ಮತ್ತು ಗುಬ್ಬಿ ರಿಂಗ್ ರಸ್ತೆ ಮೂಲಕ ಹೋಗಬಹುದಾಗಿದೆ.

      ತುಮಕೂರು ನಗರದಿಂದ ಶಿರಾ ಕಡೆಗೆ ಮತ್ತು ವಸಂತನರಸಾಪುರದ ಕಡೆಗೆ ಹೋಗುವವರು ಶಿರಾಗೇಟ್ ಮೂಲಕ ಶ್ರೀದೇವಿ ಮೆಡಿಕಲ್ ಕಾಲೇಜ್ ಮುಂದಿನ ಹಳೇ ಎನ್.ಹೆಚ್.-4 ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ-48 ರಸ್ತೆಯಲ್ಲಿ ಹೋಗಬಹುದಾಗಿದೆ. ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಟಗೆರೆ, ಮಧುಗಿರಿ ಕಡೆಗೆ ಹೋಗುವವರು ಶಿರಾಗೇಟ್-ಅಂತರಸನಹಳ್ಳಿ ಅಂಡರ್‍ಪಾಸ್ ಮೂಲಕ ಹೋಗಬಹುದಾಗಿರುತ್ತದೆ.

      ಒಟ್ಟಾರೆ ರಾಷ್ಟ್ರೀಯ ಹೆದ್ದಾರಿಯಿಂದ ಬರುವವರು ಲಿಂಗಾಪುರ ಬ್ರಿಡ್ಜ್ ಮುಖಾಂತರ ಶಿರಾಗೇಟ್/ ಅಂತರಸನಹಳ್ಳಿ ಬ್ರಿಡ್ಜ್ ಮುಖಾಂತರ ಶಿರಾಗೇಟ್‍ಗೆ ಹಾಗೂ ಗುಬ್ಬಿ ರಿಂಗ್ ರಸ್ತೆ ಮುಖಾಂತರ ತುಮಕೂರು ನಗರಕ್ಕೆ ಪ್ರವೇಶ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

      ತುಮಕೂರು ನಗರದೊಳಗೆ ಸಾರ್ವಜನಿಕರಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ತುಮಕೂರು ನಗರದೊಳಗೆ ಬರುವವರು ಈ ಮಾರ್ಗಗಳಲ್ಲಿಯೇ ಸಂಚರಿಸಲು ಸೂಚಿಸಿದ್ದು, ಅನಾವಶ್ಯಕವಾಗಿ ಬೇರೆಕಡೆಯಿಂದ ತುಮಕೂರು ನಗರಕ್ಕೆ ಪ್ರವೇಶಿಸುವವರಿಗೆ ಮಾತ್ರ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.

      ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತ ಟಿ.ಭೂಬಾಲನ್, ಹೆಚ್ಚುವರಿ ಎಸ್.ಪಿ. ಉದೇಶ್, ಉಪವಿಭಾಗಾಧಿಕಾರಿ ಅಜಯ್, ಡಿ.ವೈ.ಎಸ್.ಪಿ. ತಿಪ್ಪೆಸ್ವಾಮಿ, ತಹಶೀಲ್ದಾರ್ ಮೋಹನ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಶೇಷಾದ್ರಿ, ನವೀನ್ ಇದ್ದರು.

(Visited 10 times, 1 visits today)

Related posts