ಚಿಕ್ಕನಾಯಕನಹಳ್ಳಿ:

      ಹುಳಿಯಾರು, ಕಂದಿಕೆರೆ, ಶೆಟ್ಟಿಕೆರೆಗಳಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಿಸಲು ತಲಾ 25 ಲಕ್ಷ ರೂ. ಮಂಜೂರಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

       ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಹಿತರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನಾಂಗಕ್ಕೆ ಮನೆಗಳನ್ನು ನಿರ್ಮಿಸಲು ನಿವೇಶನದ ಕೊರತೆ ಇರುವುದರಿಂದ, ಹುಳಿಯಾರು ಹಾಗೂ ಕೆಂಕೆರೆ ಗ್ರಾಮಗಳಲ್ಲಿ ಒಬ್ಬರಿಗೆ ಒಂದು ಮನೆ ಕಟ್ಟಿಕೊಡುವ ಬದಲು ಕೆಳಮನೆ ಹಾಗೂ ಮೇಲಂತಸ್ತಿನ ಮನೆ ನಿರ್ಮಿಸಲು ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದರು.

      ಡಿಎಸ್‍ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಸರ್ಕಾರ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಶೇ.22.75% ರ ಅನುನಾನದಲ್ಲಿ ಶಿಕ್ಷಣಕ್ಕೆ ವೈಯಕ್ತಿಕವಾಗಿ ಹಾಗೂ ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣವನ್ನು ಸರಿಯಾಗಿ ಬಳಸಿ ಎಂದು ಸಲಹೆ ನೀಡಿದರು.

      ಪಟ್ಟಣದ ಎರಡು ಕಡೆ ಇರುವ ಅಂಬೇಡ್ಕರ್ ಭವನದಲ್ಲಿ ಶೌಚಾಲಯವಿಲ್ಲದೆ ಸಭೆ ಸಮಾರಂಭಗಳಿಗೆ ತೊಂದರೆಯಾಗುತ್ತಿದೆ ಎಂದು ಮಲ್ಲಿಕಾರ್ಜುನಯ್ಯ ಪ್ರಸ್ತಾಪಿಸಿದರು.

      ಕೂಡಲೇ ಅಂಬೇಡ್ಕರ್ ಭವನದಲ್ಲಿ ಪುರಸಭೆಯಿಂದ ಶೌಚಾಲಯವನ್ನು ನಿರ್ಮಿಸಿ ಎಂದು ಪುರಸಭಾ ಮುಖ್ಯಾಧಿಕಾರಿ ನಿರ್ವಾಣಯ್ಯನವರಿಗೆ ಶಾಸಕ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

      ತಾಲ್ಲೂಕಿನಲ್ಲಿ ಕೆಲವು ಕಡೆ ಎಸ್.ಸಿ, ಎಸ್.ಟಿ ಜನಾಂಗದವರು ಬಗರ್‍ಹುಕುಂ ಸಾಗುವಳಿಯಲ್ಲಿ ಜಮೀನು ಮಾಡಿದ್ದಾರೆ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಲುವೆ ಹೊಡೆದು ತೊಂದರೆ ಕೊಡುತ್ತಿದ್ದಾರೆ ಎಂದು ತೀರ್ಥಪುರ ಕುಮಾರ್ ಹೇಳಿದರು. ತಾಲ್ಲೂಕಿನಲ್ಲಿ ಹರಿಜನ, ಗಿರಿಜನ ಜನಾಂಗ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲದೆ ಪರದಾಡುವಂತಾಗಿದೆ ಆದ್ದರಿಂದ ರುದ್ರಭೂಮಿಗೆ ಜಮೀನು ನೀಡುವಂತೆ ಸಭೆಯಲ್ಲಿ ಚರ್ಚಿಸಿದರು.

      ಸಮಾಜ ಕಲ್ಯಾಣಾಧಿಕಾರಿ ರೇಣುಕದೇವಿ ಮಾತನಾಡಿ, ಈಗಾಗಲೇ 18ಗ್ರಾಮಗಳ ಪಟ್ಟಿಯನ್ನು ಸಿದ್ದಪಡಿಸಿದ್ದೇವೆ ಸರ್ಕಾರಕ್ಕೆ ಕಳಿಸಲಾಗುತ್ತಿದೆ ಎಂದು ತಿಳಿಸಿದರು.

      ಅಧಿಕಾರಿಗಳು ಯಾವ, ಯಾವ ಇಲಾಖೆಯಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ನೀಡುವ ಸವಲತ್ತುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಡಿ.ಎಸ್.ಎಸ್ ಮುಖಂಡರು ಹೇಳಿದಾಗ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಯಾವ, ಯಾವ ಇಲಾಖೆಗಳಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಬೇಕಾದ ಮಾಹಿತಿ ಹಾಗೂ ಯಾವ, ಯಾವ ದಾಖಲಾತಿ ಬೇಕು ಎಂಬುದರ ಬಗ್ಗೆ ನಾಮಫಲಕದಲ್ಲಿ ನಮೂದಿಸಿ ಎಂದರು.

      ಪಟ್ಟಣದ ಪುರಸಭೆಯಲ್ಲಿ ಸಕ್ಕಿಂಗ್ ವಾಹನ ಇದೆ ಆದರೂ ಕೆಲವೊಂದು ಬಾರಿ ಸಕ್ಕಿಂಗ್ ಮಿಷನ್ ಉಪಯೋಗಿಸದೆ ಕಾರ್ಮಿಕರೆ ಶೌಚವನ್ನು ತೆಗೆಯುತ್ತಾರೆ ಎಂದು ಮಲ್ಲಕಾರ್ಜುನ ಹೇಳಿದರು.

      ಇದಕ್ಕೆ ಗರಂ ಆದ ಶಾಸಕರು ಏನ್ರಿ ಮಾಡುತ್ತೀರಿ, ಇದರ ಬಗ್ಗೆ ನಿಮ್ಮ ಗಮನಕ್ಕೆ ಬಂದಿಲ್ಲವೇ ಸರಿಯಾದ ವ್ಯವಸ್ಥೆ ಮಾಡಿ ಇಲ್ಲದೆ ಹೋದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

      ಸಭೆಯಲ್ಲಿ ತಹಶೀಲ್ದಾರ್ ತೇಜಸ್ವಿನಿ, ಸಮಾಜ ಕಲ್ಯಾಣಾಧಿಕಾರಿ ರೇಣುಕದೇವಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಸ್ವಾಮಿ, ಮುಖಂಡರಾದ ಲಿಂಗದೇವರು, ಗೋವಿಂದಪ್ಪ, ತೀರ್ಥಪುರ ಕುಮಾರ್, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

(Visited 31 times, 1 visits today)