ತುಮಕೂರು:
ಇಂಧನ ಬೆಲೆಗಳ ಹೆಚ್ಚಳ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ,ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಇಂಧನ ಬೆಲೆಗಳ ಹೆಚ್ಚಳವನ್ನು ಐದು ತಿಂಗಳ ಕಾಲ ಸ್ಥಗಿತ ಮಾಡಿದ್ದ ಬಿಜೆಪಿ, ಫಲಿತಾಂಶ ಪ್ರಕಟವಾದ ನಂತರ, ನಿರಂತರವಾಗಿ ಇಂಧ ಬೆಲೆಗಳನ್ನು ಹೆಚ್ಚಳ ಮಾಡಿ,ಜನಸಾಮಾನ್ಯರ ಕೈಗೆ ಎಟುಕದಂತೆ ಮಾಡಿವೆ.ಅಡುಗೆ ಅನಿಲ 1100ರ ಗಡಿ ದಾಟಿದೆ.ಇದಕ್ಕೆ ಪೂರಕವೆಂಬಂತೆ ಅಡುಗೆ ಎಣ್ಣೆ,ಅಕ್ಕಿ,ಬೆಳೆ ಬೆಲೆಗಳು ಹೆಚ್ಚಳವಾಗಿ ಜನಸಾಮಾನ್ಯರು ಬದುಕು ಕಷ್ಟಕರವಾಗಿದೆ.ಇದರಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಹಿಜಾಬ್,ಹಲಾಲ್ ಕಟ್,ಆಝಾನ್ ನಂತಹ ಧಾರ್ಮಿಕ ವಿಚಾರಗಳನ್ನು ಜನರ ಮದ್ಯೆ ತಂದು,ದೇಶದ ಕೋಮು ಸೌಹಾರ್ಧತೆಯನ್ನು ಕದಡುತ್ತಿದೆ.ಇದರ ವಿರುದ್ದ ಕಾಂಗ್ರೆಸ್ ಹೋರಾಟ ಆರಂಭಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ರೂಪಿಸಲಿದೆ ಎಂದರು.
ದೇಶದಲ್ಲಿ ನೂರಾರು ವರ್ಷಗಳಿಂದ ಹಿಜಾಬ್,ಹಲಾಲ್,ಅಝಾನ್ ಪದ್ದತಿ ಜಾರಿಯಲ್ಲಿದೆ.ಹಲಾಲ್ ಕಟ್ ಮಾಂಸ ತಿಂದು ಸಾವನ್ನಪ್ಪಿದ ನಿದರ್ಶನಗಳಿಲ್ಲ.ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಕೋಮು ಸಾಮಾರಸ್ಯ ಹಾಳು ಮಾಡಲು ಪ್ರಯತ್ನಿ ಸ್ತುರುವುದು ಸರಿಯಲ್ಲ.ಇಂತಹ ವಿಚಾರಗಳನ್ನು ಮುಂದಿಟ್ಟು ದಲಿತರಿಗೆ ದೊರೆಯುತ್ತಿರುವ ಮೀಸಲಾತಿಯನ್ನು ಸದ್ದಿಲ್ಲದೆ ತೆಗೆಯುವ ಪ್ರಯತ್ನವನ್ನು ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಮಾಡಲು ಹೊರಟಿವೆ.ಕೂಡಲೇ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು,ಇಂತಹ ವಿವಾದ ಹುಟ್ಟು ಹಾಕುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಒತ್ತಾಯಿಸಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಇಂಧನ ಬೆಲೆಗಳ ಹೆಚ್ಚಳದಿಂದ ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳಾದ ಇಟ್ಟಿಗೆ, ಸಿಮೆಂಟ್, ಕಬ್ಬಿಣದ ಬೆಲೆ ಜನಸಾಮಾನ್ಯರ ಕೈಗೆಟುಕದಂತೆ ಹೆಚ್ಚಾಗಿದೆ. ಇದರಿಂದ ಬಡವರು ಒಂದು ಸೂರು ಹೊಂದಬೇಕೆಂಬ ಆಸೆ ಮರಿಚೀಕೆಯಾಗಿಯೇ ಉಳಿಯುವಂತಹ ಸ್ಥಿತಿ ನಿರ್ಮಾಣ ವಾಗಿದೆ.ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಏಪ್ರಿಲ್ 11 ರ ಸೋಮವಾರ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದರು. ಪ್ರತಿಭಟನೆಯಲ್ಲಿ ಆಟೋ ರಾಜು, ಮೆಹಬೂಬ್ ಪಾಷ, ವಿಜಯಕುಮಾರ್, ರೇವಣ್ಣಸಿದ್ದಯ್ಯ, ಚಂದ್ರಶೇಖರಗೌಡ, ಮಂಗಳಮ್ಮ ಇದ್ದರು.

(Visited 21 times, 1 visits today)