ಕೊರೋನಾ ವೈರಸ್ ಹೊಡೆದೋಡಿಸಲು ಸ್ವಯಂಪ್ರೇರಿತರಾದ ನಾಗರಿಕ ಸಮಿತಿ!

ತುಮಕೂರು:

      ಕೊರೋನಾ ವೈರಸ್(ಕೋವಿಡ್-19)ನಿಂದ ದೇಶ-ವಿದೇಶಗಳಲ್ಲಿ ಭಯಂಕರ ಸಾವು-ನೋವುಗಳು ಸಂಭವಿಸುತ್ತಿರುವುದರಿಂದ ತುಮಕೂರು ನಗರದ ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ನಾಗರಿಕರೆಲ್ಲ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕರೋನ ವೈರಸ್ ಅನ್ನು ಹೊಡೆದೋಡಿಸುವ ಪಣ ತೊಟ್ಟಿದ್ದಾರೆ.

       ಸುತ್ತೆಲ್ಲ ದೇಶಗಳಲ್ಲಿ ಮಹಾಮಾರಿ ಕೋವಿಡ್-19 ವೈರಾಣು ತನ್ನ ಕಬಂಧ ಬಾಹುಗಳಿಂದ ಅಸಂಖ್ಯಾತ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿರುವುದನ್ನು ಕಂಡು ಎಚ್ಚೆತ್ತ ಶ್ರೀನಗರ ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿಯು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಗಳನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಈ ಮಹಾಮಾರಿ ರೋಗವನ್ನು ತೊಲಗಿಸಬಹುದೆಂದು ಸ್ಥಳೀಯರೆಲ್ಲ ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ನಾಳೆ ಬನ್ನಿ :

      ಕೊರೋನಾ ವೈರಸ್‍ನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳವುದೇ ಉತ್ತಮ ಮಾರ್ಗೋಪಾಯವೆಂದು ಮಾನ್ಯ ಪ್ರಧಾನಿಗಳು ಮಾರ್ಚ್ 24ರ ಮಧ್ಯರಾತ್ರಿಯಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಎಷ್ಟೇ ಹತ್ತಿರದ ಸಂಬಂಧಿಕರಾಗಲೀ, ಆಪ್ತ ಸ್ನೇಹಿತರಾಗಲೀ ಮನೆಗೆ ಬರದ ಹಾಗೆ ಶ್ರೀನಗರ ಬಡಾವಣೆಯ ಪ್ರತೀ ಮನೆಯ ಮುಂದೆ “ನಾಳೆ ಬನ್ನಿ” ಎಂಬ ಭಿತ್ತಿ ಪತ್ರವನ್ನು ಅಂಟಿಸಲಾಗಿದೆಯಲ್ಲದೆ ಅಕ್ಕ-ಪಕ್ಕದ ಮನೆಯವರಿಗೂ ಸಹ ತಮ್ಮ ಮನೆಯೊಳಗೆ ಪ್ರವೇಶವನ್ನು ನಿಷೇಧಿಸಿದ್ದಾರೆ.

   ಸರದಿಯನುಸಾರ ಅಗತ್ಯ ಸಾಮಾನು ತರಲು ಅವಕಾಶ:

      ಈ ಬಡಾವಣೆಯಲ್ಲಿ 800 ಮನೆಗಳಿದ್ದು, ಇದನ್ನು 20 ಭಾಗಗಳಾಗಿ ವಿಂಗಡಿಸಿ ಕೇವಲ 40(5%) ಮನೆಗಳ ಸದಸ್ಯರು ಸರದಿಯಂತೆ 2 ಗಂಟೆಗಳ ಕಾಲ ಹೊರ ಹೋಗಿ ದಿನಸಿ, ಹಣ್ಣು, ತರಕಾರಿ ತರಲು ಅವಕಾಶ ಮಾಡಿಕೊಡಲಾಗಿದೆ. ಮೂರು ದಿನಗಳ ನಂತರ ಇವರಿಗೆ ಮತ್ತೊಮ್ಮೆ ತಮ್ಮ ಸರದಿ ಬರುತ್ತದೆ. ಸರದಿ ಬರುವವರೆಗೂ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರುವಂತಿಲ್ಲ. ಈ 40 ಮನೆಯವರು ಹೊರಗಡೆ ಇದ್ದಾಗ ಉಳಿದ 760(95%) ಮನೆಗಳ ಸದಸ್ಯರು ಮನೆಯೊಳಗೆ ಇರತಕ್ಕದ್ದು. ಒಂದು ಬ್ಯಾಚ್ ಹಾಗೂ ಮತ್ತೊಂದು ಬ್ಯಾಚ್ ಮಧ್ಯೆ ಒಮ್ಮೆ ದಿನಸಿ ಅಂಗಡಿಯ ಆವರಣವನ್ನು ಶುಚಿಗೊಳಿಸಬೇಕೆಂಬ ಷರತ್ತನ್ನು ಬಡಾವಣೆ ಜನರು ತಮಗೆ ತಾವೇ ಹಾಕಿಕೊಂಡಿದ್ದಾರೆ.

      ಪ್ರತಿ ಮನೆಯಿಂದ ಆಯ್ಕೆ ಮಾಡಿದ(18 ರಿಂದ 45 ವರ್ಷ) ವ್ಯಕ್ತಿಗಳು ಮಾತ್ರ ಅವರ ಸರದಿಯಲ್ಲಿ ಹೊರ ಬಂದು ದಿನಸಿ ಕೊಂಡು ಮನೆಗೆ ವಾಪಸ್ ತೆರಳಿದ ಕೂಡಲೇ ತಲೆಗೆ ಸ್ನಾನ ಮಾಡಬೇಕು. 50 ವರ್ಷ ಮೇಲ್ಪಟ್ಟವರು/ ಚಿಕ್ಕಮಕ್ಕಳು/ ಧೂಮಪಾನ, ಮದ್ಯಪಾನ ವ್ಯಸನಿಗಳು ಲಾಕ್‍ಡೌನ್ ಅವಧಿಯಲ್ಲಿ ಹೊರಗಡೆ ಬರಬಾರದು. ಪ್ರತಿ ಮನೆಯ ಮುಂದೆ ಒಂದು ಬಕೇಟ್ ಸೋಪಿನ ನೀರನ್ನು ಇಟ್ಟು ನಿತ್ಯ ಬರುವ ಹಾಲಿನ ಪ್ಯಾಕೇಟ್‍ನ್ನು ಸೋಪಿನ ನೀರಿನಲ್ಲಿ ಹಾಕಿ 5 ನಿಮಿಷಗಳ ನಂತರ ತೆಗೆದುಕೊಳ್ಳುವುದು ಎಂಬ ನಿರ್ಬಂಧವನ್ನು ಹಾಕಿಕೊಂಡಿದ್ದಾರೆ.

ಸ್ವಯಂ ಸೇವಕರ ನೇಮಕ:

      ಪ್ರತಿ 2 ಬೀದಿಗೆ ಸ್ವಯಂ ಸೇವಕ(ಯುವಕರು)ರನ್ನು ನೇಮಿಸಲಾಗಿದ್ದು, ನಾಗರಿಕರು ತಮ್ಮ ಅಗತ್ಯತೆಯನ್ನು ಸ್ವಯಂ ಸೇವಕರ ಮುಖೇನ ಪೂರೈಸಿಕೊಳ್ಳುತ್ತಿದ್ದಾರೆ. ಬಡಾವಣೆಯಲ್ಲಿರುವ 4 ದಿನಸಿ ಅಂಗಡಿ, 1 ಮೆಡಿಕಲ್ ಸ್ಟೋರ್‍ನವರನ್ನು ಹೊರತುಪಡಿಸಿ ಉಳಿದಂತೆ ಯಾವ ನಾಗರಿಕರು ಬಡಾವಣೆಯಿಂದ ಹೊರ ಹೋಗುತ್ತಿಲ್ಲ. ಹಿರಿಯ ನಾಗರಿಕರು ಇರುವ ಮನೆಗಳಿಗೆ ಮಾತ್ರ 20 ದಿವಸದ ಪೂರ್ತಿ ಸರಬರಾಜಿನ ಜವಾಬ್ದಾರಿಯನ್ನು ಸ್ವಯಂ ಸೇವಕರೇ ನಿರ್ವಹಿಸುತ್ತಾರೆ. ಪ್ರತಿ ಬೀದಿಗೆ ಒಂದರಂತೆ ವಾಟ್ಸ್‍ಪ್ ಗ್ರೂಪ್‍ನ್ನು ರಚಿಸಲಾಗಿದ್ದು, ವಾಟ್ಸ್‍ಪ್ ಮೂಲಕ ತಮಗೆ ಬೇಕಾದ ಸಾಮಗ್ರಿಯ ಬಗ್ಗೆ ಒಂದು ದಿನ ಮುಂಚೆಯೇ ತಿಳಿಸಿ ಅಂಗಡಿಗಳಿಂದ ತರಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ.

ಸಿದ್ದಗಂಗಾ ಶ್ರೀಗಳ ಮೆಚ್ಚುಗೆ:

      ಕೊರೋನಾ ವೈರಸ್ ರೋಗವನ್ನು ದೂರವಿಡಲು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶ್ರೀನಗರ-ಬಂಡೇಪಾಳ್ಯ ಬಡಾವಣೆಯ ಜನತೆ ತಮಗೆ ತಾವೇ ಹಾಕಿಕೊಂಡಿರುವ ಈ ನಿರ್ಬಂಧಗಳು ನಿಜವಾಗಿಯೂ ಇತರರಿಗೆ ಮಾದರಿ ಹಾಗೂ ಶ್ಲಾಘನೀಯವಾದುದು ಎಂದು ಸಿದ್ದಗಂಗಾ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

      ಕೊರೋನಾ ವೈರಸ್ ರೋಗವು ತಂತ್ರ-ಮಂತ್ರಗಳಿಂದ ತೊಲಗುವ ಖಾಯಿಲೆಯಲ್ಲ. ವೈಯಕ್ತಿಕ ಹಾಗೂ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡಲ್ಲಿ ಈ ರೋಗದಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಬಹುದು. ಶ್ರೀನಗರ ಬಡಾವಣೆಯ ನಿವಾಸಿಗಳು ಅನುಸರಿಸುತ್ತಿರುವ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿರ್ಬಂಧವನ್ನು ತಮಗೆ ತಾವೇ ಹಾಕಿಕೊಳ್ಳುವುದರಿಂದ ವಿಶ್ವದಾದ್ಯಂತ ಹರಡುತ್ತಿರುವ ಮಾರಣಾಂತಿಕ ಕೋವಿಡ್-19 ವೈರಾಣುವಿನಿಂದ ಮುಕ್ತಿ ಹೊಂದಬಹುದಾಗಿದೆ.
ಸ್ವಯಂ ಸೇವಕರಾಗಿ ಮಹೇಶ್, ಹರೀಶ್, ರೇಣುಕ, ಚೇತನ್, ನಾಗೇಶ್, ನಾರಾಯಣಗೌಡ ಸೇರಿದಂತೆ 40 ಯುವಕರು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೇ ಬಡಾವಣೆಯ ಸಿಎಫ್‍ಟಿಆರ್‍ಐ.ನ ಬಯೋಟೆಕ್ನಾಲಜಿ ಇಂಜಿನಿಯರ್ ಮತ್ತು ರೀಸರ್ಚರ್ ಆರ್.ವಿ. ಮಹೇಶ್ ಅವರ ಸಲಹೆ ಸೂಚನೆಯನ್ವಯ ಈ ಮಹತ್ವದ ಮುಂದಡಿಯನ್ನು ಇಡಲಾಗಿದೆ ಎಂದು ಶ್ರೀನಗರ ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿ ತಿಳಿಸಿದೆ.

(Visited 12 times, 1 visits today)

Related posts