ತುಮಕೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕಿತ ವ್ಯಕ್ತಿ ಸಾವು!!

ತುಮಕೂರು:

     ಕೊರೊನಾ ಸೋಂಕಿಗೆ ಜಿಲ್ಲೆಯ ಶಿರಾ ಮೂಲದ ಸುಮಾರು 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮನವಿ ಮಾಡಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವನ್ನಪ್ಪಿರುವ ಕೊರೊನಾ ಸೋಂಕಿತ ವ್ಯಕ್ತಿಯು ಮಾರ್ಚ್ 5ರಂದು ತುಮಕೂರಿನಿಂದ ಸಂಪರ್ಕಕ್ರಾಂತಿ ರೈಲಿನಲ್ಲಿ ದೆಹಲಿಗೆ ಪ್ರಯಾಣ. ದೆಹಲಿಯ ಜಾಮೀಯಾ ಮಸೀದಿಯ ಹೋಟೆಲ್ ರೂಂನಲ್ಲಿ ವಾಸ್ತವ್ಯ. ಮಾರ್ಚ್ 11ರಂದು ಕೊಂಗು ಎಕ್ಸ್‍ಪ್ರೆಸ್‍ನಲ್ಲಿ ಯಶವಂತಪುರಕ್ಕೆ ಪ್ರಯಾಣ, ಅಲ್ಲಿಂದ ಮಾರ್ಚ್ 14ರಂದು ಚಿತ್ರದುರ್ಗ ಕಡೆ ಹೋಗುವ ಬಸ್ ಮೂಲಕ ಶಿರಾಗೆ ತಲುಪಿದ್ದರು ಎಂದು ತಿಳಿಸಿದರು.

 

      ಮಾರ್ಚ್ 18ರಂದು ಜ್ವರ ಬಂದಿದ್ದು, ಶಿರಾದಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಓಪಿಡಿ ಚಿಕಿತ್ಸೆ ಪಡೆದರು ಸಹ ಜ್ವರ ಕಡಿಮೆಯಾಗದ ಕಾರಣ ಮಾ.21ರಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮಾ.23ರಂದು ಜಿಲ್ಲಾಸ್ಪತ್ರೆಯ ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಶಿರಾಕ್ಕೆ ವಾಪಸ್ಸಾಗಿದ್ದರು. ಆನಂತರ ಮಾರ್ಚ್ 24ರಂದು ಐಸೋಲೇಶನ್ ವಾರ್ಡ್‍ಗೆ ದಾಖಲು ಮಾಡಿ, ಇವರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ನಿನ್ನೆಯವರೆಗೂ ಸಹ ಅವರಿಗೆ ಹೆಚ್ಚಿನ ಜ್ವರ ಇರಲಿಲ್ಲ ಅವರೇ ಶೌಚಾಲಯಕ್ಕೆ ಹೋಗುತ್ತಿದ್ದರು. ಇಂದು ಬೆಳಿಗ್ಗೆ ಕೊರೋನಾ ಸೋಂಕಿನ ಬಗ್ಗೆ ಇಂದು ವರದಿ ಬಂದಿದ್ದು, ಬೆಳಿಗ್ಗೆ 10-45ಕ್ಕೆ ವ್ಯಕ್ತಿಯೂ ಜಿಲ್ಲಾಸ್ಪತ್ರೆಯ ಐಸೋಲೇಶನ್‍ನಲ್ಲಿ ಸಾವನ್ನಪ್ಪಿದ್ದಾರೆ ಶವ ಸಂಸ್ಕಾರವನ್ನು ಪ್ರೊಟೋಕಾಲ್ ಪ್ರಕಾರ ಮಾಡಲಾಗುವುದು ಎಂದು ಹೇಳಿದರು.

      ಮೃತ ವ್ಯಕ್ತಿಯ ಕುಟುಂಬದ 20 ಮಂದಿಯನ್ನು ಐಸೋಲೇಟೆಡ್ ಮಾಡಲಾಗಿದ್ದು, ಅದರಲ್ಲಿ ಪ್ರಾಥಮಿಕ ಹಂತದ ಸಂಪರ್ಕದಲ್ಲಿದ್ದವರ 8 ಜನರ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಅವು ನೆಗೆಟಿವ್ ಬಂದಿದೆ. ಉಳಿದಂತೆ 16 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬಾಕಿ ಇದೆ. ಮೃತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ 13 ಮಂದಿ ಪ್ರಯಾಣಿಕರನ್ನು ಗುರುತಿಸಲಾಗಿದ್ದು, ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು. 16 ಮತ್ತು 13 ಒಟ್ಟು 29 ಮಂದಿಯ ಮಾದರಿಗಳಲ್ಲಿ 16 ಜನರ ರಿಪೋರ್ಟ್ ಇವತ್ತು ಬರುತ್ತದೆ ಎಂದರು.

      ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಯ 2 ವೈದ್ಯರು, ಡಯೋಗ್ನೋಸ್ಟಿಕ್ ಸಿಬ್ಬಂದಿ ಮತ್ತು ತುಮಕೂರಿನಲ್ಲಿ 7 ಜನ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಒಬ್ಬ ವೈದ್ಯರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದರು. ಒಟ್ಟಾರೆ ಪ್ರೈಮರಿ ಕಾಂಟ್ಯಾಕ್ಟ್ ಮಾಡಿರುವ 33 ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದರು. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದರು.

      ಶಿರಾದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. 21 ದಿನಗಳ ಕಾಲ ಮನೆಯಲ್ಲಿರುವಂತೆ ಲಾಕ್‍ಡೌನ್ ಮಾಡಿರುವುದರಿಂದ ಸಾರ್ವಜನಿಕರೆಲ್ಲರೂ ತಮ್ಮ ಮನೆಯಲ್ಲಿ ಇರಬೇಕು. ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಸೇವೆಗಳನ್ನು ಖರೀದಿಸಲು ಹೊರತುಪಡಿಸಿ, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಅವರು ಮನವಿ ಮಾಡಿದರು.

      ಗುಬ್ಬಿ ಪ್ರಕರಣ ನೆಗೆಟಿವ್ ಬಂದಿದೆ. ರೈತರು ತಮ್ಮ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ತರಲು ಯಾವುದೇ ತೊಂದರೆಯಾಗುವುದಿಲ್ಲ. ಜನರು ಅಂಗಡಿಗಳಲ್ಲಿ ಖರೀದಿಸುವಾಗ ಅಂತರವನ್ನು ಕಾಯ್ದುಕೊಳ್ಳಬೇಕು. ಈಗಾಗಲೇ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಇದನ್ನು ಮಾಡಲಾಗಿದೆ ಎಂದರು.

      28 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುವುದು. ನಂತರ ಮಾದರಿಗಳು ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗುವುದು. ಶಿರಾವನ್ನು ಕಸ್ಟರ್ ಕಂಟೋನ್ಮೆಂಟ್ ಮಾಡಲಾಗಿದ್ದು, ಕುಟುಂಬದ ಸದಸ್ಯರನ್ನು ನೂತನ ಎಂಸಿಹೆಚ್ ಆಸ್ಪತ್ರೆಯಲ್ಲಿ ಐಸೋಲೇಟೆಡ್ ಮಾಡಲಾಗುತ್ತಿದೆ ಎಂದರು.

      ಮೃತ ವ್ಯಕ್ತಿಯ ಮನೆಯ ಸುತ್ತಮುತ್ತ ನಿಷೇಧಿಸಲಾಗಿದೆ. ಶಿರಾಗೆ ಹೋಗುವುದು ಮತ್ತು ಬರುವುದು ನಿಷೇಧಿಸಲಾಗಿದೆ ಎಂದರು. ಹೋಂ ಕ್ವಾರಂಟೈನ್ ಉಲ್ಲಂಘಿಸಿದವರ ಮೇಲೆ ಎಫ್‍ಐಆರ್ ದಾಖಲಿಸಲಾಗುವುದು. ಕೊರೋನಾ ವಾರಿಯರ್‍ಗಳನ್ನು ತಾಲ್ಲೂಕು ಹಾಗೂ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಕ್ರಮವಹಿಸಲಾಗುವುದು ಎಂದರು.

      ಜಿಲ್ಲೆಯಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಜಂಟಿಯಾಗಿ ತಂಡಗಳನ್ನು ರಚಿಸಿ ಪ್ರತಿದಿನ 468 ಜನರನ್ನು ಮಾನಿಟರಿಂಗ್ ಮಾಡುತ್ತಿದ್ದಾರೆ. ಶಂಕಿತ ವ್ಯಕ್ತಿಗಳ ಎಡಗೈ ಮೇಲೆ ಸ್ಟಾಂಪಿಂಗ್ ಮಾಡಲಾಗಿದ್ದು, ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಬಹುದು. ಶಂಕಿತ ವ್ಯಕ್ತಿಗಳು ಹೋಂ ಕ್ವಾರಂಟೈನ್‍ಗೆ ಸಹರಿಸುವುದಿಲ್ಲವೋ ಅವರ ವಿರುದ್ದ ಎಫ್‍ಐಆರ್ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

      ಪಾಲಿಕೆ ವ್ಯಾಪ್ತಿಯಲ್ಲಿರುವ ರೀಟೈಲ್ ದಿನಸಿ ಅಂಗಡಿಗಳನ್ನು ಗುರುತಿಸಲಾಗಿದ್ದು, ಹೋಂ ಡೆಲಿವರಿ ವ್ಯವಸ್ಥೆ ನೀಡಲು ಅಂಗಡಿ ಮಾಲೀಕರು ಒಪ್ಪಿದ್ದಾರೆ. ಅಲ್ಲದೇ ಸ್ವಯಂ-ಸೇವಕರ ಮೂಲಕ ಮನೆ-ಮನೆಗೆ ರೇಶನ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

      ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ, ತಾತ್ಕಾಲಿಕವಾಗಿ ಶ್ರೀದೇವಿ ಆಸ್ಪತ್ರೆಯ ಒಂದು ಭಾಗವನ್ನು ಜಿಲ್ಲಾಸ್ಪತ್ರೆಯಾಗಿ ಪರಿವರ್ತಿಸಿ, ಇಲ್ಲಿಗೆ ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.

      ಕೂಲಿ ಕಾರ್ಮಿಕರು, ನಿರ್ಗತಿಕರನ್ನು ಹಾಗೂ ಕಟ್ಟಡ ಕಾರ್ಮಿಕರಿಗೆ ಗುತ್ತಿಗೆದಾರರಿಂದಲೇ ಊಟ ವ್ಯವಸ್ಥೆ ಮಾಡಲಾಗುವುದು.  ಅಗತ್ಯ ಸೇವೆ ಒದಗಿಸಲು ಕೊರೊನಾ ಸೈನಿಕರು:- ಜಿಲ್ಲೆಯಲ್ಲಿ ಸ್ವಯಂ-ಸೇವಕರಾಗಿ ಕಾರ್ಯನಿರ್ವಹಿಸಲು ತಂಡಗಳನ್ನು ಮಾಡಿದ್ದು, ಅಗತ್ಯ ಸೇವೆಗಳನ್ನು ಮನೆ-ಮನೆಗೆ ತಲುಪಿಸಲು ಕೊರೊನಾ ಸೈನಿಕರನ್ನು ಜಿಲ್ಲಾಡಳಿತ ಒದಗಿಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

      ಪೊಲೀಸ್ ವರಿ‍‍‍ಷ್ಟಾಧಿಕಾರಿ ಡಾ|| ಕೋನವಂಶಿಕೃಷ್ಣ ಮಾತನಾಡಿ, ಅನಾವಶ್ಯಕ ಓಡಾಡುವ ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗುವುದು. ಆದ್ದರಿಂದ ಜನರು ಆದಷ್ಟು ಮನೆಯಲ್ಲಿಯೇ ಇರಬೇಕು. ಡ್ರೋಣ್, ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಂ ಹಾಗೂ ಪೊಲೀಸ್ ಕಂಟ್ರೋಲ್ ರೂಂನಿಂದ ಮಾನಿಟರಿಂಗ್ ಕ್ಯಾಮೆರಾ ಮೂಲಕ ಪರಿವೀಕ್ಷಣೆ ಮಾಡಲಾಗುತ್ತಿದ್ದು, ಶೇ.80ರಷ್ಟು ಜನ ಮನೆಯಲ್ಲಿಯೇ ಇದ್ದಾರೆ. ಸಾರ್ವಜನಿಕರು ದಯವಿಟ್ಟು ಮನೆಯಲ್ಲಿಯೇ ಇದ್ದು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಅತ್ಯಾವಶ್ಯಕ ವಸ್ತುಗಳನ್ನು ಸಾಗಿಸುವ ವಾಹನ ಚಾಲಕರಿಗೆ ಆಹಾರ ಒದಗಿಸಲು 20 ಕಿಲೋ ಮೀಟರ್ ಒಂದರಂತೆ ಹೊಟೇಲ್ ಹಾಗೂ ಡಾಬಾಗಳನ್ನು ತೆರಯಲು ಅವಕಾಶ ಕಲ್ಪಿಸಲಾಗುವುದು, ಪೊಟ್ಟಣ ಮೂಲಕ ಮಾತ್ರವೇ ಆಹಾರವನ್ನು ನೀಡಲಾಗುವುದು ಎಂದರು.

     ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ.ಆರ್.ಚಂದ್ರಿಕಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 100 times, 1 visits today)

Related posts