ತುಮಕೂರು : ಪ್ರತಿ ತಾಲ್ಲೂಕಿನಲ್ಲಿ 20 ಬೆಡ್‍ಗಳ ಕೋವಿಡ್ ಆಸ್ಪತ್ರೆ!

ತುಮಕೂರು :

     ಸರ್ಕಾರದ ಯೋಜನೆಗಳನ್ನು ಕಾಲಬದ್ಧ ಮಿತಿಯಲ್ಲಿ ಪೂರ್ಣಗೊಳಿಸುವುದರ ಜೊತೆಗೆ ಅರ್ಹರಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಕೆಲಸ ಮಾಡಬೇಕೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಅವರು ಇಂದು ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2019-20ನೇ ಸಾಲಿನ 4ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳ ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ದಾಸ್ತಾನಿನ ಬಗ್ಗೆ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ 120 ಮಿ.ಮಿ. ವಾಡಿಕೆ ಮಳೆಯಾಗಬೇಕಾಗಿದ್ದು, 108 ಮಿ.ಮಿ. ಮಳೆಯಾಗಿರುತ್ತದೆ. ಉದ್ದು, ಹೆಸರು ಮತ್ತು ಅಲಸಂದೆ ಬೆಳೆ ಸುಮಾರು 10472 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಬಿತ್ತನೆ ಬೀಜದ ಮತ್ತು ರಸಗೊಬ್ಬರದ ಕೊರತೆ ಜಿಲ್ಲೆಯಲ್ಲಿ ಇಲ್ಲವೆಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

      ಜಿಲ್ಲೆಯಲ್ಲಿ ಮಿಡಿತೆ ಹಾವಳಿ ಬಗ್ಗೆ ವರದಿ ಬಂದಿದ್ದು, ಈಗಾಗಲೇ ವಿಜ್ಞಾನಿಗಳು ಈ ಮಿಡಿತೆಗಳ ಪರಿವೀಕ್ಷಣೆ ನಡೆಸಿದ್ದು, ಇವು ರೈತರ ಬೆಳೆಗಳಿಗೆ ಮಾರಕ ಅಲ್ಲವೆಂದು ವರದಿ ನೀಡಿರುವುದರಿಂದ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಕೊಂಡ್ಲಿ ಹುಳುವಿನ ಅಥವಾ ಸೈನಿಕ ಹುಳು ಬಾಧೆ ನಿಯಂತ್ರಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಸಚಿವರು ತಿಳಿಸಿದರು.

       ತೋಟಗಾರಿಕೆ ಹಾಗೂ ಕೃಷಿ ಇಲಾಖೆ ನೀಡುವ ಜಿಲ್ಲೆಯ ಸಾಗುವಳಿ ಭೂಹಿಡುವಳಿಯಲ್ಲಿ 25ಸಾವಿರ ಹೆಕ್ಟೇರ್ ವ್ಯತ್ಯಾಸ ಕಂಡುಬರುತ್ತಿದ್ದು, ನಿಖರವಾದ ವರದಿಯನ್ನು ನೀಡುವಂತೆ ಸಚಿವರು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಬೆಳೆದ ಯಾವುದೇ ಹಣ್ಣುಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದಿರುವ ಬಗ್ಗೆ ಸಚಿವರು ಪ್ರಸ್ತಾಪಿಸಿ ತೋಟಗಾರಿಕೆ ಇಲಾಖೆ ವತಿಯಿಂದ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಸಚಿವರು ತಿಳಿಸಿದರು.

       ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಮೇವಿನ ಕೊರತೆ ಬಾರದ ಹಾಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಹಾಗೂ ಪ್ರಕೃತಿ ವಿಕೋಪದಿಂದ ಕುರಿ, ಜಾನುವಾರು ಸತ್ತರೆ ಅವುಗಳಿಗೆ ವಿಮೆ ಮಾಡಿಸುವ ಮತ್ತು ಪರಿಹಾರ ನೀಡುವ ಕೆಲಸ ಇಲಾಖೆಯಿಂದಾಗಬೇಕೆಂದು ಅವರು ತಿಳಿಸಿದರು.

      ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ಆರೋಗ್ಯ ಇಲಾಖೆ ತಗ್ಗಿಸುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಗರ್ಭಿಣಿ ಮಹಿಳೆಯರಲ್ಲಿ ಕನಿಷ್ಠ ಶೇ.60ರಷ್ಟಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ತಾಕೀತು ಮಾಡಿದರು.

      ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಮಾಡಿರುವ 200 ಬೆಡ್ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ನೂತನವಾಗಿ ಮಾಡಿರುವ ಲ್ಯಾಬ್‍ನಲ್ಲಿ ವೈರಸ್‍ಗೆ ಸಂಬಂಧಿಸಿದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಯುವಂತೆ ಕ್ರಮ ಜರುಗಿಸಲು ಸಚಿವರು ತಿಳಿಸಿದರು.

       ಪ್ರತಿ ತಾಲ್ಲೂಕಿನಲ್ಲಿ 20 ಬೆಡ್‍ಗಳ ಕೋವಿಡ್ ಆಸ್ಪತ್ರೆಗಳನ್ನು ಸಜ್ಜು ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾದರೆ ತಾಲ್ಲೂಕು ಮಟ್ಟದಲ್ಲಿಯೂ ಸಹ ಕ್ವಾರಂಟೈನ್‍ನಲ್ಲಿಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲೆಗೆ ಹೆಚ್ಚುವರಿಯಾಗಿ ಸರ್ಕಾರ 5ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವ ಎಲ್ಲರನ್ನೂ ತಪಾಸಣೆಗೊಳಪಡಿಸಿ ಸೋಂಕು ಇರುವವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.

       ಇದೇ ಜೂನ್ 25 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆಯು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಬೇಕು. ಮುಂದಿನ ವರ್ಷಕ್ಕಾಗಿ ಮಕ್ಕಳಿಗೆ ಬಂದಿರುವ ಪಠ್ಯಪುಸ್ತಕಗಳನ್ನು ಪೋಷಕರ ಮೂಲಕ ಮನೆಗೆ ತಲುಪಿಸುವ ಕೆಲಸ ಮಾಡಬೇಕೆಂದು ಸಚಿವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಗೆ ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಈಗಾಗಲೇ ಅನುದಾನ ಮಂಜೂರು ಮಾಡಿದ್ದರೂ ಕಟ್ಟಡದ ಕಾಮಗಾರಿ ಪ್ರಾರಂಭಿಸದಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಸಚಿವರು ಕೂಡಲೇ ಈ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ತಾಕೀತು ಮಾಡಿದರು.

      ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಬಡವರ ಏಳ್ಗೆಗಾಗಿ ಗಂಗಾ ಕಲ್ಯಾಣ ಯೋಜನೆ ಸರ್ಕಾರ ಜಾರಿಗೆ ತಂದಿದ್ದು, 2018-19ನೇ ಸಾಲಿನ ಕೊಳವೆ ಬಾವಿಗಳನ್ನು ಕೊರೆಸದೇ ಇರುವ ಬಗ್ಗೆ ಸಚಿವರು ನಿಗಮದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

      ಜಿಲ್ಲಾ ಕೈಗಾರಿಕಾ ಇಲಾಖೆ ವತಿಯಿಂದ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ಸೌಲಭ್ಯಕ್ಕಾಗಿ ಜಿಲ್ಲೆಯ ವಿವಿಧ ಬ್ಯಾಂಕ್‍ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬ್ಯಾಂಕುಗಳು ಸಾಲ ಸೌಲಭ್ಯ ನೀಡಲು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿ, ಕೇವಲ ಸಬ್ಸಿಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಡಿಪಾಜಿûಟ್ ಇಟ್ಟುಕೊಳ್ಳಲು ಸರ್ಕಾರ ಈ ಯೋಜನೆಗಳನ್ನು ತಂದಿರುವುದಿಲ್ಲ. ಕೂಡಲೆ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಿ ಜಿಲ್ಲೆಯಲ್ಲಿ ಕೈಗಾರಿಕೆ ಪ್ರಾರಂಭಿಸುವುದರ ಜೊತೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವಂತಾಗಬೇಕೆಂದು ಲೀಡ್ ಡಿಸ್ಟಿಕ್ಟ್ ಮ್ಯಾನೇಜರ್‍ಗೆ ಸೂಚನೆ ನೀಡಿದರು.

           ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಎಂದು ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರುಗಳಿಗೆ ತೊಂದರೆ ಕೊಡದಂತೆ ಹಾಗೂ ಸರ್ಕಾರಿ ಸೌಲಭ್ಯಗಳಿಗಾಗಿ ನಿರ್ಮಿಸುವ ಕಟ್ಟಡಗಳಿಗೆ ಸರಿಯಾದ ಪರಿಶೀಲನೆ ನಡೆಸಿ ನಿವೇಶನಗಳಿಗೆ ಕೂಡಲೇ ಮಂಜೂರಾತಿ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹೇಮಾವತಿ ನಾಲಾ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳು ಕೋವಿಡ್-19 ಹಾಗೂ ಬೇರೆ ಕಾರಣಗಳನ್ನು ನೀಡದೆ ಆಯಾ ಇಲಾಖೆಗಳಿಗೆ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ನೀಡಿರುವ ಅನುದಾನವನ್ನು ಬಳಸಿಕೊಳ್ಳುವುದರ ಜೊತೆಗೆ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕೆಂದು ಸಚಿವರು ತಾಕೀತು ಮಾಡಿದರು.

       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಸಂಸದರಾದ ಜಿ.ಎಸ್. ಬಸವರಾಜು, ಶಾಸಕರುಗಳಾದ ಜಿ.ಬಿ. ಜ್ಯೋತಿ ಗಣೇಶ್, ಬಿ. ಸತ್ಯನಾರಾಯಣ್, ಎಂ.ವಿ.ವೀರಭದ್ರಯ್ಯ, ಜಯರಾಂ, ಡಾ: ಹೆಚ್.ಡಿ.ರಂಗನಾಥ್, ಬಿ.ಎಂ. ಕಾಂತರಾಜು, ತಿಪ್ಪೇಸ್ವಾಮಿ ಹಾಗೂ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ. ಸಿಇಓ ಶುಭಾಕಲ್ಯಾಣ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

       ಇದೇ ವೇಳೆಯಲ್ಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳ ಮೂವರು ವಯೋ ನಿವೃತ್ತಿ ಹೊಂದಿದ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

(Visited 10 times, 1 visits today)

Related posts