2020ಕ್ಕೆ ಪ್ರವಾಸೋದ್ಯಮ ನೀತಿ ಜಾರಿ – ಸಿ.ಟಿ. ರವಿ

ತುಮಕೂರು:

 

      ರಾಜ್ಯದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬರುವ ವರ್ಷ 2020ರಲ್ಲಿ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದೆಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದರು.

       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರ್ಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದಲ್ಲದೆ ಜಿಲ್ಲೆಯಲ್ಲಿ ಗುರುತಿಸಿರುವ 28 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

      ಪ್ರಾಕೃತಿಕ, ಐತಿಹಾಸಿಕ, ಸಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕರ್ನಾಟಕ ರಾಜ್ಯದಲ್ಲಿ ಪ್ರಾಕೃತಿಕವಾಗಿ 320 ಕಿ.ಮೀ. ಉದ್ದದ ಕಡಲತೀರ; ಹಂಪಿ, ಬಾದಾಮಿ-ಪಟ್ಟದಕಲ್ಲು, ಪಶ್ಚಿಮಘಟ್ಟ ಸೇರಿದಂತೆ ಯುನೆಸ್ಕೋ ಗುರುತಿಸಿರುವ 3 ವಿಶ್ವ ಪಾರಂಪರಿಕ ತಾಣ; 5 ರಾಷ್ಟ್ರೀಯ ಉದ್ಯಾನವನಗಳು; 30 ವನ್ಯಜೀವಿ ಅಭಯಾರಣ್ಯ; 15 ಗಿರಿಧಾಮಗಳು; ಅಂತರಾಷ್ಟ್ರ ಮಟ್ಟದ ಜೋಗ್ ಜಲಪಾತ ಹಾಗೂ ಶಿವನಸಮುದ್ರ ಸೇರಿ 40 ಜಲಪಾತಗಳು; 319 ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರ ಅಂತರಾಷ್ಟ್ರೀಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಗಮನ ಸೆಳೆಯಬಹುದಾದ 1500ಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಪುರಾತತ್ವ ಕಟ್ಟಡಗಳನ್ನು ಕಾಣಸಿಗುತ್ತದೆ. ಸಾಂಸ್ಕೃತಿಕವಾಗಿ ಭಿನ್ನತೆಯಿಂದ ಕೂಡಿರುವ ರಾಜ್ಯವು ಭಾಷೆ ಮತ್ತು ಆಹಾರದಲ್ಲಿ ವೈವಿಧ್ಯತೆಯಿಂದ ಕೂಡಿದೆ. ಅಲ್ಲದೆ ಪ್ರಾದೇಶಿಕ ಉತ್ಸವಗಳ ಪರಂಪರೆಗಳು ಪ್ರವಾಸೋದ್ಯಮವನ್ನು ಸೆಳೆಯುತ್ತಿರುವುದು ಮತ್ತೊಂದು ವಿಶೇಷ. ರಾಜ್ಯದಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಕೊಡುಗೆಯು ಮುಖ್ಯವಾಗಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಈವರೆಗೂ 880 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳನ್ನು ವಿತರಣೆ ಮಾಡಲಾಗಿದ್ದು, 66 ಕಾಮಗಾರಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಮಂಜೂರಾತಿ ನೀಡಿದೆ. ಅಲ್ಲದೆ ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಂಡ 32 ಸಾಂಸ್ಕೃತಿಕ ಭವನ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಶೇ. 80ಕ್ಕೂ ಅತಿ ಹೆಚ್ಚು ಹುದ್ದೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61ರಷ್ಟು ಹುದ್ದೆಗಳು ಖಾಲಿಯಿದ್ದು, ಪ್ರಸ್ತುತ ನಿಯೋಜನೆ, ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿ ಸೇವೆ ಪಡೆಯಲಾಗುತ್ತಿದೆ. ಹಣಕಾಸು ಇಲಾಖೆ ಅನುಮೋದನೆ ನೀಡಿದಲ್ಲಿ ನೇರ ನೇಮಕಾತಿ ಮೂಲಕ ಅಥವಾ ಕೆಪಿಎಸ್‍ಸಿ ಮೂಲಕ ಭರ್ತಿ ಮಾಡಲು ಸಿದ್ಧರಿದ್ದೇವೆ. ಎಂದರು.

      ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲಾದ್ಯಂತ 2 ತಿಂಗಳ ಕಾಲ ಪರ್ಯಟನೆ ನಡೆಸಿ ಪ್ರವಾಸಿ ತಾಣಗಳ ಅಧ್ಯಯನ ಮಾಡಿದ ನಂತರ ಕೇಬಲ್ ಕಾರ್ ಅಳವಡಿಕೆ ಯೋಜನೆ ತಯಾರಿಸುವ ಬಗ್ಗೆ ಮುಂದಿನ ಆಯವ್ಯಯದಲ್ಲಿ ಮಂಡಿಸಬೇಕೆಂದು ಚಿಂತನೆ ನಡೆಸಲಾಗಿದೆ. ಕನಸು ಕಂಡಷ್ಟೇ ಕೆಲಸ ಮಾಡಲು ಪ್ರವಾಸೋದ್ಯಮ ಇಲಾಖೆಯಲ್ಲಿ ಅವಕಾಶಗಳಿವೆ. ಆದರೆ ಅನುದಾನ ಕೊರತೆ, ಮತ್ತಿತರ ಸವಾಲು/ಸಮಸ್ಯೆಗಳು ಎದುರಿಗಿರುವುದರಿಂದ ಯೋಜನೆಗಳನ್ನು ಶೀಘ್ರಗತಿಯಲ್ಲಿ ಕೈಗೂಡುತ್ತಿಲ್ಲ ಎಂದರಲ್ಲದೆ ಬಡವರಿಗಾಗಿ ವಸತಿ ಸೌಕರ್ಯ, ನೆರೆ ಹಾವಳಿ, ಗ್ರಾಮೀಣ ನೀರು ಪೂರೈಕೆ, ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆ ಇರುವುದರಿಂದ ಪ್ರವಾಸೋದ್ಯಮಕ್ಕೆ ಬಂಡವಾಳ ಹೂಡುವ ಬಗ್ಗೆ ಯೋಚಿಸಲಾಗುತ್ತಿದೆ. ಮುಂದಿನ ಗ್ಲೋಬಲ್ ಇನ್‍ವೆಸ್ಟರ್ ಮೀಟ್ ಕಾರ್ಯಕ್ರಮವನ್ನು ಟೂರಿಸಂ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮೀಸಲಿಡಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಉದ್ಯೋಗಸೃಷ್ಟಿಯಾಗುವುದಲ್ಲದೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಉತ್ತಮ ಆದಾಯ ದೊರೆಯುತ್ತದೆ ಎಂದು ತಿಳಿಸಿದರು.

      ಕಳೆದ 2009-10ರಿಂದ ಇಲ್ಲಿಯವರೆಗೂ ಜಿಲ್ಲೆಯಲ್ಲಿ 993 ಪ್ರವಾಸಿ ಟ್ಯಾಕ್ಸಿಗಳು ಮಂಜೂರಾಗಿದ್ದು, ಈ ಪೈಕಿ 880 ಟ್ಯಾಕ್ಸಿಗಳು ವಿತರಣೆಯಾಗಿವೆ. ಇಲಾಖೆಯಿಂದ ಟ್ಯಾಕ್ಸಿ ಪಡೆದು ಅದರಿಂದ ಆಗಿರುವ ಪ್ರಯೋಜನಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಬೇಡಿಕೆ ಕುರಿತಂತೆ ಸರ್ವೆಯನ್ನು ಮಾಡಿಸಿ ವರದಿ ನೀಡಿ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

      ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾಗಿರುವ ಯಾತ್ರಿನಿವಾಸ ನಿರ್ಮಾಣ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯವಿರುವ ನಿವೇಶನವನ್ನು 10 ದಿನಗಳೊಳಗಾಗಿ ಇಲಾಖೆಗೆ ಹಸ್ತಾಂತರಿಸಲು ಸಾಧ್ಯವಾಗದಿದ್ದರೆ ಮಂಜೂರಾಗಿರುವ ಮೊತ್ತವನ್ನು ಹಿಂಪಡೆದು ಜಿಲ್ಲೆಯಲ್ಲಿ ಕೈಗೊಂಡಿರುವ ಇಲಾಖೆಯ ಇತರೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುವುದು. ಆದುದರಿಂದ ನಿವೇಶನ ನೀಡುವ ಬಗ್ಗೆ ಸಭೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

      ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿಗಳು ಡಿಸೆಂಬರ್ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕಾಮಗಾರಿಗಳನ್ನು ಕಾಲಮಿತಿ ನಿಗಧಿಪಡಿಸಿ ಪೂರ್ಣಗೊಳಿಸಬೇಕು ಎಂದು ಅವರು ಏಜೆನ್ಸಿಗಳಿಗೆ ನಿರ್ದೇಶನ ನೀಡಿದರು.

      ತಹಶಿಲ್ದಾರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮನ್ವಯದೊಂದಿಗೆ ನಿವೇಶನ ಪಡೆಯಲು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಗ್ರಾಮ ಮಟ್ಟದ ಪ್ರವಾಸೋದ್ಯಮ ಸಮಿತಿಗಳಿಗೆ ಸ್ಥಳೀಯ ಪ್ರವಾಸಿ ತಾಣಗಳ ನಿರ್ವಹಣೆಯನ್ನು ನೀಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

      ಕರ್ನಾಟಕ ದರ್ಶನ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಕೈಗೊಳ್ಳುವ ಪ್ರವಾಸ ಸಂದರ್ಭದಲ್ಲಿ ರಾಜ್ಯದಲ್ಲಿ ಮಹಾತ್ಮಾಗಾಂಧಿಯವರು ಭೇಟಿ ನೀಡಿದ ಸ್ಥಳಗಳ ದರ್ಶನ ಮಾಡಿಸಿ ಗಾಂಧೀಜಿ ಅವರ ತತ್ವ ಆದರ್ಶಗಳ ಮೂರು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ ವಿದ್ಯಾರ್ಥಿಗಳಿಂದ ಸಂಕಲ್ಪ ಮಾಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸಂಪರ್ಕ ಸೇರಿದಂತೆ ,ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಂಬಂಧ ಅಲ್ಪಾವಧಿ ಹಾಗೂ ದೀರ್ಘಾವಧಿ ಸಮಗ್ರ ಯೋಜನೆಯನ್ನು ರೂಪಿಸಿ ವರದಿ ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯಲ್ಲಿರುವ ಗ್ರಾಮಗಳ ಇತಿಹಾಸ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ದೇವಾಲಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ವಿಕ್ಕಿಪೀಡಿಯಾ ಮಾದರಿಯಲ್ಲಿ ವೆಬ್‍ಸೈಟ್‍ನಲ್ಲಿ ಅಳವಡಿಸಲು ಯೋಜಿಸಿದ್ದು, ಇದಕ್ಕಾಗಿ ವಿಶ್ವವಿದ್ಯಾಲಯ ಕುಲಪತಿ, ಪ್ರಾಂಶುಪಾಲರ ಸಭೆ ಕರೆದು ಪಿಯುಸಿ ಮೇಲ್ಪಟ್ಟ ವಿದ್ಯಾರ್ಥಿಗಳಿಂದ ಡಿಸೆಂಬರ್ ಮಾಹೆಯಲ್ಲಿ ಒಂದು ದಿನ ಪ್ರತಿ ಗ್ರಾಮಗಳ ಅಧ್ಯಯನ ನಡೆಸಿ ಕರಡು ವರದಿ ಸಿದ್ದಪಡಿಸುವ ಬಗ್ಗೆ ಚರ್ಚಿಸಿ ಈ ರೀತಿಯ ಕರಡು ವರದಿಯ ಬಗ್ಗೆ ಅಭಿಪ್ರಾಯ ಪಡೆಯಲು ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

      ಸರ್ಕಾರದ ವತಿಯಿಂದ ಆಚರಿಸುವ ಮಹಾತ್ಮರ ಜಯಂತಿಗಳು ಕೇವಲ ಜಾತಿಗೆ ಸೀಮಿತವಾಗುತ್ತಿವೆ ಜಯಂತಿಗಳನ್ನು ಆಚರಣೆ ಮಾಡುವ ಸಂಬಂಧ ಜನಾಭಿಪ್ರಾಯವನ್ನು ಪಡೆದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

      ಸಭೆಯಲ್ಲಿ ಶಾಸಕರಾದ ನಾಗೇಶ್, ಜ್ಯೋತಿಗಣೇಶ್, ವೀರಭದ್ರಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕಿ ಜಾನಕಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಾವೇದ್ ಕರಂಗಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

       ಪ್ರಗತಿ ಪರಿಶೀಲನೆಗೂ ಮುನ್ನ ತುಮಕೂರು ತಾಲ್ಲೂಕು ಕೈದಾಳ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಭೇಟಿನೀಡಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಸುರೇಶ್‍ಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.

(Visited 55 times, 1 visits today)

Related posts

Leave a Comment