ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮ

 ತುಮಕೂರು :

      ಗ್ರಾಹಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡದ ಅಂಗಡಿ ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ತಿಳಿಸಿದರು.

       ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ದಿಶಾ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸದೇ ಓಡಾಡುವವರಿಗೆ ಪೊಲೀಸ್ ಹಾಗೂ ಪಂಚಾಯಿತಿಗಳ ಮುಖಾಂತರ ದಂಡ ವಿಧಿಸಲು ಈಗಾಗಲೇ ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗಿದೆ. ಈ ಹಿಂದೆ ಲಾಕ್ ಡೌನ್ ಆದ ಸಂದರ್ಭದಲ್ಲಿ ಅನುಸರಿಸುತ್ತಿದ್ದ ಮಾರ್ಗಸೂಚಿಯನ್ನೇ ಈಗಲೂ ಅನುಸರಿಸಿ ಸಾರ್ವಜನಿಕರು ತಮ್ಮ ವ್ಯವಹಾರಗಳನ್ನು ನಡೆಸಬಹುದಾಗಿದೆ. ಮಾರ್ಗಸೂಚಿಯನ್ನು ನಿರ್ಲಕ್ಷ್ಯ ಮಾಡುವ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

      ಕೋವಿಡ್-19 ಸೋಂಕಿನಿಂದ ಜಿಲ್ಲೆಯಲ್ಲಿ 5 ಪ್ರಕರಣಗಳಲ್ಲಿ ಸಾವು ಸಂಭವಿಸಿದ್ದು, ರೋಗವನ್ನು ನಿರ್ಲಕ್ಷ್ಯ ಮಾಡಿ, ಕೊನೆಯ ಗಳಿಗೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ರೋಗಿಗಳು ಸಾವನ್ನಪ್ಪಿದ್ದಾರೆ. ಸಾರ್ವಜನಿಕರು ಕೆಮ್ಮು, ನೆಗಡಿ, ಶೀತ ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದೆ ಎಚ್ಚರಿಕೆವಹಿಸಿ ಫೀವರ್ ಕ್ಲಿನಿಕ್ ಅಥವಾ ಗಂಟಲು ದ್ರವ ಪರೀಕ್ಷೆಗೆ ಮುಂದಾಗಬೇಕೆಂದು ತಿಳಿಸಿದರು.

      ಈಗಾಗಲೇ ಸರ್ಕಾರ ಕೋವಿಡ್-19 ಚಿಕಿತ್ಸಾ ದರವನ್ನು ನಿಗಧಿಪಡಿಸಿರುವುದರಿಂದ ಸೋಂಕಿತರು ಇಚ್ಛೆಪಟ್ಟಲ್ಲಿ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿರುವ ಲ್ಯಾಬ್‍ನಲ್ಲಿ ಪ್ರತಿದಿನ ಸರಾಸರಿ 300ಕ್ಕೂ ಹೆಚ್ಚು ಗಂಟಲು ದ್ರವ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಶೇಕಡಾ 40ಕ್ಕೂ ಹೆಚ್ಚು ಪರೀಕ್ಷೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ ಕೂಡಾ ಪ್ರಶಂಸೆಯನ್ನು ವ್ಯಕ್ತಪಡಿಸಿದೆ ಎಂದರು.

      ಕಂಟೈನ್‍ಮೆಂಟ್ ವಲಯದಲ್ಲಿರುವವರಿಗೆ ವ್ಯವಸ್ಥಿತವಾಗಿ ಅವರ ಅವಶ್ಯಕತೆಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಹೊರಗಿನಿಂದ ಬರುವಂತ ಆಹಾರ ಬೇಡವಾದರೆ ಮನೆಯಿಂದಲೇ ತರಿಸಿಕೊಳ್ಳುವಂತಹ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರು ಅಂಗಡಿಗಳಿಗೆ ಅಥವಾ ಅಕ್ಕ-ಪಕ್ಕದ ಜನರೊಂದಿಗೆ ವ್ಯವಹರಿಸಿದಾಗ ಸ್ಯಾನಿಟೈಸರ್‍ನ್ನು ಬಳಸಬೇಕು ಹಾಗೂ ಹೊರ ರಾಜ್ಯದಿಂದ ಯಾರೇ ಬಂದರೂ ಅಂತಹವರ ಮಾಹಿತಿಯನ್ನು ಕೂಡಲೇ ನಮ್ಮ ಗಮನಕ್ಕೆ ತರಬೇಕು. ಅಲ್ಲದೇ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳು ಸ್ವಯಂ ಆಗಿ ಕ್ವಾರಂಟೈನ್‍ಗೆ ಒಳಪಡಬೇಕು ಎಂದು ಅವರು ಸೂಚಿಸಿದರು.

(Visited 4 times, 1 visits today)

Related posts