ತುಮಕೂರು:
ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ನೆಪ ಹೇಳದೆ ಬರ ನಿರ್ವಹಣೆ ಮಾಡಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ರಾಜ್ಯದ 176 ತಾಲೂಕುಗಳ ಪೈಕಿ 158 ತಾಲೂಕುಗಳು ಬರಪೀಡಿತವಾಗಿವೆ. ಜಿಲ್ಲೆಯ ಐದಾರು ತಾಲೂಕುಗಳು ಬರಪೀಡಿತಕ್ಕೊಳಗಾಗಿದ್ದನ್ನು ಮಾತ್ರ ನಾನು ಕೇಳಿದ್ದೆ. ಮಳೆಯ ಅಭಾವದಿಂದ ಈ ವರ್ಷ ಜಿಲ್ಲೆಯ ಎಲ್ಲ ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆ ನಿವಾರಣೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಬೆಳೆ ನಷ್ಟ, ಜಾನುವಾರುಗಳಿಗೆ ಮೇವಿನ ಕೊರತೆ ಕುರಿತು ದೂರು ಬಾರದಂತೆ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಬರನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸದಿರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಸೂಚನೆ ನೀಡಿದರು.
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಬಗೆಹರಿಸಿ ನಂತರ ತಾಲೂಕು ಕಾರ್ಯಪಡೆಯಿಂದ ಘಟನೋತ್ತರ ಮಂಜೂರಾತಿ ಪಡೆಯಬೇಕು. ಕುಡಿಯುವ ನೀರಿನ ತುರ್ತು ಕಾಮಗಾರಿ ಕೈಗೊಳ್ಳಲು ಚುನಾವಣೆ ಕೆಲಸದ ಸಬೂಬು ಹೇಳುವಂತಿಲ್ಲ. ಎಲ್ಲ ಕೆಲಸಗಳನ್ನು ಬದಿಗೊತ್ತಿ ಕ್ರಮ ಕೈಗೊಳ್ಳಬೇಕೆಂದರಲ್ಲದೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ, ಮತ್ತಿತರ ಬರ ನಿರ್ವಹಣೆ ಕಾರ್ಯಕ್ಕಾಗಿ ನಿಯೋಜಿಸಿರುವ ಅಧಿಕಾರಿಗಳನ್ನು ಚುನಾವಣೆ ಕರ್ತವ್ಯದಿಂದ ಕೈಬಿಡಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗಾಗಿ 2018-19ನೇ ಸಾಲಿನಲ್ಲಿ 356 ಲಕ್ಷ ರೂ. ಬಿಡುಗಡೆಯಾಗಿದ್ದು, ಫೆಬ್ರುವರಿ 18ರವರೆಗೆ 763 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕೆ. ಅನುಪಮ ಸಚಿವರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಸಚಿವರು ಹೊಸದಾಗಿ ಕೊರೆದ ಕೊಳವೆಬಾವಿಗಳಿಗೆ ಇನ್ನು ಪಂಪು ಮೋಟಾರು ಅಳವಡಿಸದಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿದ್ದು, ದೂರುಗಳಿಗೆ ಕಾರಣವೇನೆಂದು ಕೇಳಿದಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಇಫ್ತಿಕಾರ್ ಮಾಹಿತಿ ನೀಡುತ್ತಾ ತುಮಕೂರು ವಿಭಾಗದ ವ್ಯಾಪ್ತಿಯಲ್ಲಿ 2018-19ನೇ ಸಾಲಿನಲ್ಲಿ ಹೊಸದಾಗಿ 1229 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ 955 ಕೊಳವೆಬಾವಿಗಳು ಸಫಲವಾಗಿದ್ದು, 323 ಕೊಳವೆಬಾವಿಗಳು ವಿಫಲವಾಗಿವೆ. ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆದ ಕೂಡಲೇ ಪಂಪು ಮೋಟಾರುಗಳನ್ನು ಅಳವಡಿಕೆಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ನೀರಿನ ಸಮಸ್ಯೆ ತಲೆದೋರುವ ಗ್ರಾಮಗಳಲ್ಲಿ ತ್ವರಿತವಾಗಿ ಪರಿಹರಿಸಲು ಈಗಾಗಲೇ ಪಿಡಿಓಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ತಿಪಟೂರು, ತುರುವೇಕೆರೆ, ಮಧುಗಿರಿ, ಕುಣಿಗಲ್, ಕೊರಟಗೆರೆ, ಪಾವಗಡ, ತುಮಕೂರು ಹಾಗೂ ಸಿರಾ ತಾಲೂಕುಗಳ 54 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕ ದೂರು ಸಲ್ಲಿಸಲು ಜಿಲ್ಲಾ ಪಂಚಾಯತಿ, ತಾಲೂಕು ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಸಹಾಯವಾಣಿ ಸ್ಥಾಪಿಸಲಾಗಿದ್ದು, ಈವರೆಗೂ ಸ್ವೀಕೃತವಾದ 313 ದೂರುಗಳ ಪೈಕಿ 310 ದೂರುಗಳಿಗೆ ಸೂಕ್ತ ಕ್ರಮವಹಿಸಲಾಗಿದೆ. ಬರದ ಸಮಸ್ಯೆಗಳನ್ನು ನಿಗಾವಹಿಸಿ ಜಿಲ್ಲಾ ಪಂಚಾಯತಿಗೆ ಸಮನ್ವಯ ಸಾಧಿಸಲು ಜಿಲ್ಲೆಯ ಎಲ್ಲ 50 ಹೋಬಳಿಗಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನೇಮಕವಾದ ಅಧಿಕಾರಿಗಳು ವಾರಕ್ಕೆರಡು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಜಿಲ್ಲಾಧಿಕಾರಿ ಹಾಗೂ ತಮಗೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ ಎಂದು ಸಚಿವರ ಗಮನಕ್ಕೆ ತಂದರಲ್ಲದೆ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ದಿನೇ ದಿನೇ ಕಡಿಮೆಯಾಗಿ ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಉದ್ಭವಿಸಬಹುದಾದ 796 ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ, ಮೋಟಾರ್ ಅಳವಡಿಕೆ, ಪೈಪ್ ಲೈನ್ ಕಾಮಗಾರಿಗಳಿಗಾಗಿ 34 ಕೋಟಿ ರೂ.ಗಳ ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಮನವಿ ಸಲ್ಲಿಸಿದರು.
ನರೇಗಾ ಯೋಜನೆಯ ಪ್ರಗತಿ ಪರಿಶೀಲಿಸಿದ ಸಚಿವರು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ಯೋಜನೆಯಡಿ ಅಂಗವಾಡಿ ಕಟ್ಟಡ, ಶಾಲಾ ಶೌಚಾಲಯ, ಸಿಸಿ ರಸ್ತೆ, ಕೊಟ್ಟಿಗೆ ನಿರ್ಮಾಣ, ಕೃಷಿ ಹೊಂಡ, ಆಟದ ಮೈದಾನ, ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಪ್ರಗತಿ ಕುಂಠಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು ಕೇವಲ 51 ಶಾಲಾ ಶೌಚಾಲಯಗಳನ್ನು ನಿರ್ಮಿಸಲು 44 ಮಾನವ ದಿನಗಳನ್ನು ಬಳಸಿಕೊಂಡು 3 ತಿಂಗಳ ಕಾಲಾವಧಿ ಮುಗಿದಿದ್ದರೂ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದೆ ಶೂನ್ಯ ಸಾಧನೆ ತೋರಿಸಲಾಗಿದೆ. ಪ್ರಗತಿ ಕೇಳಿದರೆ ಇಂಜಿನಿಯರ್‍ಗಳು ಕಥೆ ಹೇಳ್ತೀರಾ? ನರೇಗಾ ಯೋಜನೆಯಡಿ ನಿಗಧಿತ ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವಂತೆ ಶುಭ ಕಲ್ಯಾಣ ಅವರಿಗೆ ಸೂಚಿಸಿದರು.
ಬರಪರಿಹಾರಕ್ಕೆ ಸಂಬಂಧಿಸಿದಂತೆ ಅನುದಾನದ ಕೊರತೆಯಿದ್ದರೆ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಬರ ನಿರ್ವಹಣೆಗಾಗಿ ಯಾವುದೇ ಹಣದ ಕೊರತೆಯಿಲ್ಲ ಎಂದು ತಿಳಿಸಿದ ಸಚಿವರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬರ ಘೋಷಣೆಯಾಗಿ ಬೇಸಿಗೆ ಬಂದಿದ್ದರೂ, ಈವರೆಗೂ ಮೇವು ಬ್ಯಾಂಕುಗಳ ಟೆಂಡರು ಪ್ರಕ್ರಿಯೆ ಪೂರ್ಣಗೊಂಡಿಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ವರದಿ ನೀಡುತ್ತಾ, ಜಿಲ್ಲೆಯಲ್ಲಿ ಈವರೆಗೂ ಮೇವಿನ ಸಮಸ್ಯೆ ಉಂಟಾಗಿಲ್ಲ. ಇನ್ನು 15 ವಾರಗಳಿಗಾಗುವಷ್ಟು ಮೇವು ದಾಸ್ತಾನು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕುಣಿಗಲ್, ಗುಬ್ಬಿ, ತುಮಕೂರು ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳ 24 ಹೋಬಳಿಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲು ಟೆಂಡರು ಕರೆಯಲಾಗಿದೆ ಹಾಗೂ 2018ರ ಅಕ್ಟೋಬರ್ ಮಾಹೆಯಿಂದ ಜನವರಿ 2019ರವರೆಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖಾಂತರ ಜಾನುವಾರು ಮಾಲೀಕರಿಗೆ ಮೇವಿನ ಕಿರು ಪೊಟ್ಟಣಗಳನ್ನು ವಿತರಿಸಲಾಗಿದೆ. ಇದರಿಂದ 594437 ಟನ್‍ಗಳಷ್ಟು ಹಸಿರು ಮೇವು ಉತ್ಪಾದನೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ 2018ರ ಮುಂಗಾರು ಹಂಗಾಮಿನಲ್ಲಿ 251234 ಹೆ. ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದು, ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ 199799 ಹೆ. ಪ್ರದೇಶದ ಬೆಳೆ ಹಾನಿಯಾಗಿದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 6044 ಹೆ. ಪ್ರದೇಶದಲ್ಲಿ 3800 ಹೆ. ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಪರಿಹಾರ ಒದಗಿಸಲು ರೈತರಿಗೆ ಇನ್‍ಪುಟ್ ಸಬ್ಸಿಡಿಗಾಗಿ ಮುಂಗಾರು ಹಾಗೂ ಹಿಂಗಾಮು ಸೇರಿ 126 ಕೋಟಿ ರೂ.ಗಳ ಅನುದಾನದ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಉಪನಿರ್ದೇಶಕ ರಘು ಮಾತನಾಡಿ ತೋಟಗಾರಿಕೆ ಬೆಳೆಗಳ ಹಾನಿ ಹಾಗೂ ಪರಿಹಾರದ ಬೇಡಿಕೆ ವಿವರಗಳನ್ನು ಸಚಿವರಿಗೆ ನೀಡಿದರಲ್ಲದೆ 2017ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಸತತ ಬರಗಾಲದಿಂದಾಗಿ 346124 ತೆಂಗಿನ ಮರಗಳು ಸಂಪೂರ್ಣವಾಗಿ ಒಣಗಿರುವ/ಅನುತ್ಪಾದಕ ಮರಗಳೆಂದು ಸರ್ವೆ ಕಾರ್ಯದಿಂದ ತಿಳಿದುಬಂದಿದ್ದು, ಇದರಿಂದ 1384 ಲಕ್ಷ ರೂ.ಗಳನ್ನು ನಷ್ಟ ಉಂಟಾಗಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಜ್ಯೋತಿ ಗಣೇಶ್, ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಪಾಲಿಕೆ ಆಯುಕ್ತ ಭೂಬಾಲನ್, ಡಿವೈಎಸ್‍ಪಿ ಡಾ|| ಶೋಭಾರಾಣಿ, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.