ಪರಿಸರ ಸ್ವಚ್ಛತೆ ಕಾಪಾಡಿದರೆ ಮಾತ್ರ ಡೆಂಗ್ಯೂ ರೋಗ ನಿಯಂತ್ರಣ

 ತುಮಕೂರು :

      ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿರುವ ಪರಿಸರ ಸ್ವಚ್ಛತೆ ಕಾಪಾಡಿದರೆ ಮಾತ್ರ ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಹಾಗೂ ನರ್ಸಿಂಗ್ ಕಾಲೇಜುಗಳ ಸಹಯೋಗದಲ್ಲಿ ನಗರದ ಬಿಜಿಎಸ್ ವೃತ್ತದಲ್ಲಿ ಏರ್ಪಡಿಸಿದ್ದ, ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.

       ಮನೆಯಲ್ಲಿ ಅನಗತ್ಯ ನೀರಿನ ಶೇಖರಣೆಯನ್ನು ತಪ್ಪಿಸಿ, ಮನೆಯ ಸುತ್ತಮುತ್ತಲಿನಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರು ಸಂಗ್ರಹ ಮಾಡುತ್ತಾರೆ, 1 ವಾರಕ್ಕಿಂತ ಹೆಚ್ಚು ನೀರನ್ನು ಸಂಗ್ರಹಿಸಬಾರದು. ಈಗಾಗಲೇ ಆಶಾ ಕಾರ್ಯಕರ್ತೆಯರು ನೀರು ಸಂಗ್ರಹವಾಗಿರುವ ತೊಟ್ಟಿಗಳಿಗೆ ಲಾರ್ವಾಹಾರಿಗಳನ್ನು ಬಿಡುವ ಮೂಲಕ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

      ಕಳೆದ ವರ್ಷ 30 ಜನರು ರೋಗದಿಂದ ಅಸ್ವಸ್ಥರಾಗಿದ್ದರು, ಈ ಬಾರಿ 3 ಜನ ಅಸ್ವಸ್ಥರಾಗಿದ್ದಾರೆ. ರಾಜ್ಯಕ್ಕೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಜ್ವರದ ನಿಯಂತ್ರಣಕ್ಕಾಗಿ 104 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಅವರು ತಿಳಿಸಿದರು.

      ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ಟಿ.ಎನ್.ಪುರುಷೋತ್ತಮ್ ಮಾತನಾಡಿ, ನಗರ ಪ್ರದೇಶದಲ್ಲಿ ಪ್ರತಿ ಮಾಹೆಯ 1ನೇ ಮತ್ತು 3ನೇ ಶುಕ್ರವಾರ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರೋಗ್ಯ ಸಹಾಯಕರನ್ನು ನಿಯೋಜನೆ ಮಾಡಿಕೊಂಡು ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಜ್ವರದ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರಿಸರ ಮಲೀನವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

      ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಬಿ.ಆರ್. ಚಂದ್ರಿಕಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|| ಟಿ.ಎ ವೀರಭದ್ರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ|| ಎಸ್.ಶರತ್‍ಚಂದ್ರ, ಸಹಾಯಕ ಕೀಟಶಾಸ್ತ್ರಜ್ಞೆ ಉಷಾ, ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 12 times, 1 visits today)

Related posts