ದೊಡ್ಡಗೌಡರ ರಾಜಕೀಯ ಅಧ್ಯಾಯಕ್ಕೆ ಚರಮಗೀತೆ

ತುಮಕೂರು:

      ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲು, ಬಿಜೆಪಿಯ ಗೆಲುವು ರಾಜಕೀಯ ವಿಶ್ಲೇಶಕರ ಲೆಕ್ಕಚಾರಗಳು ಬುಡಮೇಲು. ಈ ರಾಜ್ಯ ಕಂಡಂತಹ ಏಕೈಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ದೆಹಲಿ ಗದ್ದುಗೆ ಏರಿ ಅಂದಿನ ಭಾರತದ ಪ್ರಪ್ರಥಮ ಪ್ರಜೆ ಎನಿಸಿಕೊಂಡಂತಹ ವ್ಯಕ್ತಿ. ತನ್ನ ರಾಜಕೀಯ ಇತಿಹಾಸದುದ್ದಕ್ಕೂ ಗೆಲುವುಗಳಲ್ಲೇ ಹಿಡಿತ ಸಾಧಿಸುತ್ತಾ ರಾಜ್ಯ ರಾಜಕಾರಣದಲ್ಲಿ ಗೌಡರ ಪಾರುಪತ್ಯವನ್ನು ಮೆರೆದಂತಹ ಅಪ್ರತಿಮ ರಾಜಕಾರಣಿ ತನ್ನ ಮೌನದಲ್ಲೂ, ತನ್ನ ವಿಶ್ರಾಂತಿಯಲ್ಲೂ ರಾಜಕೀಯ ಲೆಕ್ಕಾಚಾರಗಳಲ್ಲೇ ರಾಜ್ಯದ ರಾಜಕಾರಣವನ್ನು ಅಳೆದು ತೂಗುತ್ತಿದ್ದಂತಹ ದೊಡ್ಡ ಗೌಡರು ಜೆಡಿಎಸ್‍ನ ಪಾರುಪತ್ಯವಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನುಂಡದ್ದು ವಿಪರ್ಯಾಸ. ತನ್ನ ರಾಜಕೀಯ ಇತಿಹಾಸದಲ್ಲಿ ಅತಿರಥ ಮಹಾರಥರನ್ನ ಸೋಲಿನ ಸುಳಿಯಲ್ಲಿ ಸಿಲುಕಿಸಿ ವಿಲ-ವಿಲಗೊಳಿಸಿದ ದೇವೇಗೌಡರ ಲೆಕ್ಕಾಚಾರಗಳು ತುಮಕೂರಿನಲ್ಲಿ ತಪ್ಪಿದ್ದಕ್ಕೆ ಜೆಡಿಎಸ್‍ಗಿರಿಗೆ ಸ್ವತಃ ನೋವಿದೆಯಾದರೂ, ಕಾಂಗ್ರೆಸಿಗರಿಗೆ ನಲಿವಿದೆ. ಬಿಜೆಪಿಗರಿಗೆ ಸಂತೋಷವಿದೆ.

      ತುಮಕೂರು ಜಿಲ್ಲೆಯ ಬಿಜೆಪಿಗರಲ್ಲದೇ ರಾಜ್ಯದ ಬಿಜೆಪಿಗರು ಗೌಡರ ಸೋಲಿಗೆ ಅಂಡುಬಡೆದುಕೊಳ್ಳುತ್ತಾ ಕೇಕೆ ಹಾಕಿಕೊಳ್ಳುತ್ತಿರುವುದು ಗೌಡರ ಸೋಲಿಗಲ್ಲ, ಗೌಡರಿಗೆ ಸರಿಸಮಾನನಲ್ಲದ ಅಭ್ಯರ್ಥಿ ಜಿ.ಎಸ್.ಬಸವರಾಜು ರವರ ಎದುರು ಸೋಲು ಕಂಡದ್ದು ಒಂದು ಪ್ರಾದೇಶಿಕ ಪಕ್ಷ ಹಾಗೂ ಪಕ್ಷದ ಮುಖಂಡರು ಜಿಲ್ಲೆಯಲ್ಲಿ ತಲೆತಗ್ಗಿಸುವ ಹೀನಾಯ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದು ಬೇರ್ಯಾರೂ ಅಲ್ಲ ಜಿಲ್ಲೆಯ ಕಾಂಗ್ರೆಸ್ಸಿಗರು.

      ತುಮಕೂರಿಗೆ ಗೌಡರು ಸ್ಪರ್ಧೆಗಿಳಿಯಬಾರದೆಂಬ ನಿರ್ಧಾರದಲ್ಲಿದ್ದರಾದರೂ, ರಾಜ್ಯದ ಉಪಮುಖ್ಯಮಂತ್ರಿ ಡಾ||ಜಿ.ಪರಮೇಶ್ವರ್ ರವರ ಮಾತಿಗೆ ಕಿಮ್ಮತ್ತು ನೀಡಿ ತುಮಕೂರಿಗೆ ಸ್ಪರ್ಧಾಳುವಾಗಿದ್ದು ಬಹುದೊಡ್ಡ ಅಪರಾಧ. ರಾಜ್ಯ ರಾಜಕಾರಣವಲ್ಲದೇ, ರಾಷ್ಟ್ರ ರಾಜಕಾರಣದ ಒಳಸುಳಿಗಳನ್ನು ಬಲ್ಲ ದೇವೇಗೌಡರು ಡಾ||ಜಿ.ಪರಮೇಶ್ವರ್ ರವರನ್ನು ನಂಬಿ ಕೆಟ್ಟರು ಎಂದು ದಳದ ಧುರೀಣರು ತಮ್ಮ ಒಡಲಾಳದ ನೋವನ್ನ ವ್ಯಕ್ತಪಡಿಸುತ್ತಿದ್ದಾರೆ. ಸದಾ ನಂಬಿಕೆ ಮತ್ತು ದೈವ ಭಕ್ತಿಯಲ್ಲೇ ತನ್ನ ಕೈಂಕರ್ಯಗಳನ್ನ ಆರಂಭಿಸುತ್ತಿದ್ದ ದೊಡ್ಡಗೌಡರ ಕುಟುಂಬ ಮತ್ತು ದೊಡ್ಡಗೌಡರು ತನ್ನ ನಾಮಪತ್ರ ಸಲ್ಲಿಕೆಯ ಹಿಂದಿನ ದಿನದಿಂದ ಆರಂಭವಾದ ಅಪಶಕುನಗಳ ಬಗ್ಗೆ ಲೆಕ್ಕವಿಡಲಿಲ್ಲ. ತಾನು ನಂಬಿದ ಜ್ಯೋತಿಷಿಯ ಮಾತು ಕೇಳಿ ಸದಾನಂದಗೌಡರು ಮತ್ತು ಜಿ.ಎಸ್.ಬಸವರಾಜುರವರ ಇಬ್ಬರ ಜಾತಕಗಳನ್ನ ತಮ್ಮ ಕುಟುಂಬದ ಜ್ಯೋತಿಷಿಯ ಮುಂದಿಟ್ಟಾಗ ಸದಾನಂದಗೌಡರ ಜ್ಯೋತಿಷ್ಯದ ಪ್ರಕಾರ ಸದಾನಂದಗೌಡರ ಗೆಲುವು ಖಚಿತ, ಬಸವರಾಜುರವರ ಜ್ಯೋತಿಷ್ಯದ ಲೆಕ್ಕಾಚಾರದಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಹಾಗಾಗಿ ತುಮಕೂರಿನ ಸ್ಪರ್ಧೆ ದೆಹಲಿ ಗದ್ದುಗೆಯ ರಹದಾರಿ ಎಂಬ ಪೊಳ್ಳು ಭರವಸೆಗಳಿಗೆ ಬೆಲೆ ಕೊಟ್ಟು ತುಮಕೂರಿನಿಂದ ಕಣಕ್ಕಿಳಿದು ತನಗೆ ಸರಿಸಮಾನವಲ್ಲದ ವ್ಯಕ್ತಿಯ ಎದುರು ಸೋಲು ಕಂಡು ತನ್ನ ರಾಜಕೀಯ ಅಧ್ಯಾಯಕ್ಕೆ ಚರಮಗೀತೆ ಬರೆದುಕೊಂಡದ್ದು ಸ್ವತಃ ದೊಡ್ಡಗೌಡರೆ.

 

(Visited 26 times, 1 visits today)

Related posts

Leave a Comment